ಸಾರಾಂಶ
ಮೈಸೂರಿನ ಮಹಿಳೆ ಮದುವೆಯಾಗಿ 5 ವರ್ಷದ ನಂತರ ತಮ್ಮ ಮೊದಲ ಸಂತಾನ ಆಗಮನದ ಖುಷಿಯಲ್ಲಿದ್ದಾಗ ಅವರಿಗೆ 5ನೇ ತಿಂಗಳಲ್ಲಿ ಗರ್ಭದ ನೀರು ಸೋರಿ ಗರ್ಭಪಾತವಾಗಿತ್ತು
ಕನ್ನಡಪ್ರಭ ವಾರ್ತೆ ಮೈಸೂರು
ಗರ್ಭಸ್ಥ ಶಿಶುಗಳನ್ನು ಉಳಿಸಲು ವಿಶ್ವದಲ್ಲೇ ಮೊದಲ ನೂತನ ಚಿಕಿತ್ಸೆಯನ್ನು ಮೈಸೂರಿನಲ್ಲಿ ಮಾಡಲಾಗಿದೆ ಎಂದು ಸಂತಸ ಫರ್ಟಿಲಿಟಿ ಮತ್ತು ಐವಿಎಫ್ ಸಂಸ್ಥೆ ನಿರ್ದೇಶಕಿ ಡಾ.ಎಚ್.ಆರ್. ಸೌಮ್ಯಾ ದಿನೇಶ್ ತಿಳಿಸಿದರು.ಅತ್ಯಪರೂಪದ ಪ್ರಕರಣಗಳು ಎಂಬಂತೆ ಗರ್ಭದ ನೀರು ಸೋರಿ ಗರ್ಭಪಾತವಾಗುತ್ತಿದ್ದ ಸಮಸ್ಯೆ ಎದುರಿಸುತ್ತಿದ್ದ ಮಹಿಳೆಗೆ ವಿಶ್ವದಲ್ಲೇ ಮೊದಲನೆಯದು ಎಂಬಂತೆ ವಿಶಿಷ್ಟ ಚಿಕಿತ್ಸೆ ನೀಡಿ, ಗರ್ಭಸ್ಥ ಶಿಶು ಉಳಿಸಿದ ಸಾಧನೆ ತಮ್ಮ ಆಸ್ಪತ್ರೆ ಮಾಡಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಮೈಸೂರಿನ ಮಹಿಳೆ ಮದುವೆಯಾಗಿ 5 ವರ್ಷದ ನಂತರ ತಮ್ಮ ಮೊದಲ ಸಂತಾನ ಆಗಮನದ ಖುಷಿಯಲ್ಲಿದ್ದಾಗ ಅವರಿಗೆ 5ನೇ ತಿಂಗಳಲ್ಲಿ ಗರ್ಭದ ನೀರು ಸೋರಿ ಗರ್ಭಪಾತವಾಗಿತ್ತು. ಮತ್ತೆ ಹೆಚ್ಚಿನ ಚಿಕಿತ್ಸೆಯ ನಂತರ ಅವರು ಗರ್ಭಧರಿಸಿದ್ದರು. ಆದರೆ, ಮೂರೂವರೆ ತಿಂಗಳಾದಾಗ ಇದ್ದಕ್ಕಿದ್ದಂತೆ ಮತ್ತೆ ಗರ್ಭದ ನೀರು ಸೋರಿಕೆಯಾಯಿತು. ಈ ಸ್ಥಿತಿಯನ್ನು ಪ್ರಿವಿಯಬಲ್ ಪ್ರಿಮೆಚ್ಯೂರ್ ರಪ್ಚರ್ ಆಫ್ ಮೆಂಬ್ರೇನ್ಸ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಗರ್ಭಪಾತಕ್ಕೆ ಕೊನೆಯಾಗುತ್ತದೆ ಎಂದರು.ಆ ಮಹಿಳೆಗೆ ಪ್ಲೇಟ್ ಲೆಟ್- ರಿಚ್ ಫೈಬ್ರಿನ್ (ಪಿಆರ್ ಎಫ್) ಮತ್ತು ಪ್ಲೇಟ್ ಲೆಟ್- ರಿಚ್ ಪ್ಲಾಸ್ಮಾ (ಪಿಆರ್ ಪಿ) ಗಳ ವಿಶಿಷ್ಟ ಸಂಯೋಜನೆಯ ಮಿಶ್ರಣವಿರುವ ಇಂಜೆಕ್ಷನ್ ಅನ್ನು ನೇರವಾಗಿ ಆಮ್ನಿಯೋಟಿಕ್ ಕುಹರದೊಳಗೆ ಚುಚ್ಚುವ ಒಂದು ವಿಶಿಷ್ಟ ಚಿಕಿತ್ಸಕ ಪ್ರೋಟೋಕಾಲ್ ಅನ್ನು ವಿಶ್ವದಲ್ಲೇ ಮೊದಲ ಬಾರಿಗೆ ನೀಡಲಾಗಿದೆ. ಇದರಿಂದಾಗಿ ಆ ಮಹಿಳೆ ಮಗುವನ್ನು ಪಡೆದಿದ್ದಾರೆ ಎಂದು ಅವರು ವಿವರಿಸಿದರು.ಈ ವಿಶಿಷ್ಟ ಚಿಕಿತ್ಸೆ ಮೂಲಕ ಮಹಿಳೆಯ ಗರ್ಭ ಪೊರೆಯಲ್ಲಾಗಿದ್ದ ರಂಧ್ರವನ್ನು ಮುಚ್ಚಲಾಯಿತು. ಈ ಪ್ರಕರಣದ ವರದಿ ಇಂಟರ್ ನ್ಯಾಷನಲ್ ಜರ್ನಲ್ ಆಫ್ ರೀ ಪ್ರೊಡಕ್ಟಿವ್, ಫೀಮೇಲ್ ಅಂಡ್ ಚೈಲ್ಡ್ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಈ ಚಿಕಿತ್ಸೆಯನ್ನು ಗರ್ಭಾವಸ್ಥೆಯ ಪ್ರಾರಂಭಿಕ 14 ವಾರಗಳು ನೀಡಲಾಗಿದ್ದು, ಇದು ವಿಶ್ವದಲ್ಲೇ ಅತಿ ಕಡಿಮೆ ಗರ್ಭಾವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗಿರುವ ದಾಖಲೆಯ ಪ್ರಕರಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.ಈ ಯಶಸ್ಸಿನ ನಂತರ ತಮ್ಮ ತಂಡದ ವೈದ್ಯರು ಇಂತಹದೇ ಪ್ರಕರಣಗಳ ಚಿಕಿತ್ಸೆಯನ್ನು ಪ್ರಾರಂಭಿಸಿದ್ದು, ಇಂಟ್ರಾ- ಆಮ್ನಿಯೋಟಿಕ್ ಫೈಬ್ರಿನ್ ಮತ್ತು ಪ್ಲೇಟ್ ಲೆಟ್ ಥೆರಪಿ ಚಿಕಿತ್ಸೆ ಪಡೆದ 14 ಹೆಚ್ಚಿನ ಅಪಾಯದ ಗರ್ಭಧಾರಣೆ ಇರುವ ಪ್ರಕರಣಗಳಲ್ಲಿ, 10 ಗರ್ಭಧಾರಣೆಗಳ ಸೋರಿಕೆಯನ್ನು ಯಶಸ್ವಿಯಾಗಿ ನಿಲ್ಲಿಸಲಾಗಿದೆ. 3 ಸೆಟ್ ಅವಳಿ ಮಕ್ಕಳು ಸೇರಿದಂತೆ 12 ಆರೋಗ್ಯವಂತ ಶಿಶುಗಳು ಜನಿಸಿವೆ. ಒಂದು ಗರ್ಭಧಾರಣೆ ಮುಂದುವರೆಯುತ್ತಿದೆ. ವಿಶೇಷವಾಗಿ, ಈ ರೀತಿ ಚಿಕಿತ್ಸೆ ಪಡೆದ ತಾಯಿ ಹಾಗೂ ಮಕ್ಕಳಲ್ಲಿ ಯಾವುದೇ ತೊಂದರೆ ಅಥವಾ ಸೋಂಕುಗಳು ಕಂಡು ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಈ ಚಿಕಿತ್ಸೆಗೆ ಹೆಚ್ಚಿನ ಸಂಪನ್ಮೂಲವುಳ್ಳ ಆಸ್ಪತ್ರೆ, ಸಂಕೀರ್ಣ ಅಥವಾ ದುಬಾರಿ ಕಾರ್ಯ ವಿಧಾನಗಳು ಬೇಕೆಂದೇನೂ ಇಲ್ಲ. ಬದಲಾಗಿ ಈ ವಿಧಾನವು ಸರಳ, ಕೈಗೆಟುಕುವ ಬೆಲೆಯಲ್ಲಿ, ಕಡಿಮೆ ಸಂಪನ್ಮೂಲವುಳ್ಳ ಚಿಕಿತ್ಸಾಲಯಗಳಲ್ಲಿ ಮಾಡಬಹುದಾಗಿದೆ ಎಂದರು. ಡಾ.ಎನ್.ಎಸ್. ಪ್ರವೀಣ್, ಡಾ. ಯೋಗಿತಾ ರಾವ್, ಡಾ.ಎಸ್.ಜೆ. ಸೀಮಾ ಇದ್ದರು.