ದೇಶದ ಅಭಿವೃದ್ಧಿಗೆ ನೀಡಿದ ಜಯ: ಸಂಸದ ಕೋಟ

| Published : Jun 25 2024, 12:37 AM IST

ಸಾರಾಂಶ

ನೂತನ ಸಂಸದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟ

ಇಲ್ಲಿನ ಸಾಸ್ತಾನದ ಶ್ರೀ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಮತ್ತು ಪಾಂಡೇಶ್ವರದ ಬಿಲ್ಲವ ಯುವ ವೇದಿಕೆ ಜಂಟಿ ಆಶ್ರಯದಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದನಾ ಸಮಾರಂಭ ಜರುಗಿತು.

ಈ ಸಂದರ್ಭ ಮಾತನಾಡಿದ ಕೋಟ, ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಅಭ್ಯರ್ಥಿಯನ್ನಾಗಿಸಿದೆ, ಜನ ಗೆಲ್ಲಿಸಿ ಆಶ್ರೀರ್ವದಿಸಿದ್ದಾರೆ. ಇದು ಜನ ಸೇವೆಗೆ, ದೇಶದ ಅಭಿವೃದ್ಧಿಗೆ ನೀಡಿದ ಜಯ. ನನ್ನ ಗ್ರಾಮಸ್ಥರ ಅಭಿನಂದನೆಯನ್ನು ವಿನಯತೆಯಿಂದ ಸ್ವೀಕರಿಸುವುದು ನನ್ನ ಭಾಗ್ಯ ಎಂದರು.

ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ ಅಧ್ಯಕ್ಷ ಎಂ.ಸಿ. ಚಂದ್ರಶೇಖರ್ ವಹಿಸಿದ್ದರು. ಕ.ಸಾ.ಪ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಅಭಿನಂದನಾ ನುಡಿಗಳನ್ನಾಡುತ್ತಾ, ಕೋಟದ ಹೆಸರನ್ನು ಶಿವರಾಮ ಕಾರಂತರ ನಂತರ ತನ್ನ ಹೆಸರಲ್ಲಿ ನಾಡಿಗೆ ಪರಿಚಯಿಸಿಕೊಂಡಿದ್ದಾರೆ. ಒಬ್ಬ ಹಳ್ಳಿ ಹುಡುಗ ದಿಲ್ಲಿಯವರೆಗೆ ರಾಜ್ಯಭಾರ ಮಾಡುತ್ತಾನೆ ಎಂದರೆ ಅದು ಕೋಟ ಶ್ರೀನಿವಾಸ ಪೂಜಾರಿಯವರಿಗೆ ದಕ್ಕಬೇಕಾದ ಅಭಿನಂದನೆ ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಶುಭಾಶಂಸನೆಗೈದರು. ಬ್ರಹ್ಮಬೈದರ್ಕಳ ಶ್ರೀ ಗೋಳಿಗರಡಿ ದೈವಸ್ಥಾನದ ಅಧ್ಯಕ್ಷ ಜಿ.ವಿಠ್ಠಲ್ ಪೂಜಾರಿ, ಪಾಂಡೇಶ್ವರ ಗ್ರಾಪಂ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ, ಬ್ರಹ್ಮಬೈದರ್ಕಳ ಬಿಲ್ಲವ ಮಹಿಳಾ ಸಂಘದ ಕಾರ್ಯದರ್ಶಿ ಲೀಲಾವತಿ ಗಂಗಾಧರ್, ಉದ್ಯಮಿ ಪಂಜು ಪೂಜಾರಿ ಬೆಂಗಳೂರು, ಬ್ರಹ್ಮಬೈದರ್ಕಳ ಗೋಳಿಗರಡಿ ಪಾತ್ರಿಗಳಾದ ಶಂಕರ್ ಪೂಜಾರಿ ಉಪಸ್ಥಿತರಿದ್ದರು. ಬ್ರಹ್ಮಬೈದರ್ಕಳ ಬಿಲ್ಲವ ಸಂಘ ಪ್ರ.ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿದರು. ಬಿಲ್ಲವ ಸಂಘದ ಜತೆಕಾರ್ಯದರ್ಶಿ ಚಂದ್ರಮೋಹನ್ ಪೂಜಾರಿ ವಂದಿಸಿದರು.