ಕೊಡಗಿನ ಸಮಸ್ಯೆಗಳ ಬಗ್ಗೆ ಸದನದಲ್ಲಿ ಗಟ್ಟಿ ಧ್ವನಿ: ಯದುವೀರ್

| Published : Jun 16 2024, 01:47 AM IST

ಸಾರಾಂಶ

ಕೊಡಗು ಮೈಸೂರು ಲೋಕಸಭಾ ಕ್ಷೇತ್ರ ಅತ್ಯಂತ ವಿಸ್ತಾರವಾದ ಕ್ಷೇತ್ರ. ಕಾರ್ಯಕರ್ತರು ಗೆಲುವಿಗಾಗಿ ಶ್ರಮ ಹಾಕಿದ್ದಾರೆ ಎಂದು ಸಂಸದ ಯದುವೀರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ ಅತ್ಯಂತ ವಿಸ್ತಾರವಾದ ಕ್ಷೇತ್ರವಾಗಿದ್ದು, ಜಿಲ್ಲೆಯ ನಾಯಕರು ಹಾಗೂ ಕಾರ್ಯಕರ್ತರು ಚುನಾವಣೆ ಗೆಲುವಿಗಾಗಿ ಪ್ರಾಮಾಣಿಕ ಶ್ರಮ ಹಾಕಿದ್ದಾರೆ ಎಂದು ಕ್ಷೇತ್ರದ ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಸಂಸದರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ ಅವರು, ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ನಾಪೋಕ್ಲು ಭಗವತಿ ಸನ್ನಿಧಿಯ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಚುನಾವಣಾ ಪ್ರಚಾರ ಆರಂಭಿಸಿದ ತಲಕಾವೇರಿಯಲ್ಲಿ ಇಂದು ಕೂಡಾ ಪೂಜೆ ಸಲ್ಲಿಸಿ ಸಭೆ ನಡೆಸಿದ್ದು, ಕಾವೇರಿಯ ಆಶೀರ್ವಾದಿಂದಲೇ ಅಧಿಕಾರ ಸಿಕ್ಕಿದೆ ಎಂದು ಯದುವೀರ್ ಅಭಿಪ್ರಾಯಪಟ್ಟರು.

ಚುನಾವಣೆ ಸಂದರ್ಭ ಯಾವ ರೀತಿ ಶ್ರಮ ಹಾಕಿದ್ದೆವೋ ಅದೇ ರೀತಿ ಮುಂದಿನ ಐದು ವರ್ಷಗಳಲ್ಲೂ ಕೆಲಸ ಮಾಡುವುದಾಗಿ ಹೇಳಿದ ಅವರು, ಆದಷ್ಟು ಬೇಗ ಪ್ರಗತಿ ಪರೀಶೀಲನಾ ಸಭೆ ನಡೆಸಿ, ಉಳಿದಿರುವ ಕೆಲಸ ಕಾರ್ಯಗಳತ್ತ ಗಮನ ಹರಿಸುವುದಾಗಿ ಭರವಸೆ ನೀಡಿದರು.

ಇದಕ್ಕೂ ಮುನ್ನ ಭಗವತಿ ದೇವಾಲಯದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಯದುವೀರ್ ಪಾಲ್ಗೊಂಡರು. ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವಂತೆ ದೇವಾಲಯ ಸಮಿತಿ ಅಧ್ಯಕ್ಷ ಕುಲ್ಲೇಟಿರ ಶಂಕರಿ ಮನವಿ ಮಾಡಿ ಹಿರಿಯರಾದ ಗುರುವಪ್ಪ ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವಾಲಯದ ಮುಖ್ಯ ಅರ್ಚಕ ಹರೀಶ್ ಭಕ್ತ ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು.

ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಎಂಎಲ್ಸಿ ಮಂಡೆಪಂಡ ಸುಜಾ ಕುಶಾಲಪ್ಪ, ಮಾಜಿ ಶಾಸಕ, ಮಾಜಿ ವಿಧಾನಸಭಾ ಸ್ಪೀಕರ್ ಕೆ ಜಿ ಬೋಪಯ್ಯ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರೀನಾ ಪ್ರಕಾಶ್, ರಾಜ್ಯ ರೈತ ಮೋರ್ಚಾ ಕಾರ್ಯಕಾರಿ ಸಮಿತಿಯ ಯಮುನಾ ಚಂಗಪ್ಪ, ಆಫ್ಕಾಂ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಮಡಿಕೇರಿ ಗ್ರಾಮಾಂತರ ಅಧ್ಯಕ್ಷ ನಾಗೇಶ್ ಕುಂದಲ್ ಪಾಡಿ, ಮಾಜಿ ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಲ್ಲಿರ ಚಲನ್, ರಾಜ್ಯ ಕಾರ್ಯಕಾರಿ ಸಮಿತಿಯ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಮಡಿಕೇರಿ ನಗರ ಅಧ್ಯಕ್ಷ ಉಮೇಶ್ ಸುಬ್ರಮಣಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ಮಡಿಕೇರಿ ತಾಲೂಕು ಓಬಿಸಿ ಪ್ರತೀಪ ಸೇರಿದಂತೆ ಪಕ್ಷದ ಜಿಲ್ಲೆ, ತಾಲೂಕು , ಬೂತ್ ಮಟ್ಟದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ಮಡಿಕೇರಿ ತಾಲೂಕು ರೈತ ಮೋರ್ಚಾ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.