ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹಾಗೂ ಆದಿಜಾಂಬವ ಗುರುಪೀಠದ ಷಡಕ್ಷರಮುನಿ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಷಡಕ್ಷರಮುನಿ ಸ್ವಾಮೀಜಿ ಎಚ್ಚರಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ಭರ್ತಿ ಮಾಡಲು ಹೊರಟಿರುವ ರಾಜ್ಯ ಸರ್ಕಾರ ಮಾದಿಗರಿಗೆ ಲಭ್ಯವಾಗುವ ಹುದ್ದೆಗಳ ಪ್ರಾಮಾಣಿಕವಾಗಿ ಹಂಚಬೇಕು. ಹಾಗೊಂದು ವೇಳೆ ದ್ರೋಹದ ಸುಳಿವು ದೊರೆತರೆ ರಾಜಧಾನಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದೆಂದು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಆದಿ ಜಾಂಬವ ಪೀಠದ ಷಡಕ್ಷರಮುನಿ ಸ್ವಾಮೀಜಿ ಎಚ್ಚರಿಸಿದ್ದಾರೆ.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಭಯ ಶ್ರೀಗಳು, ಖಾಲಿ ಹುದ್ದೆಗಳ ಭರ್ತಿ ಮಾಡಿಕೊಳ್ಳುವಾಗ ನಿಯಮಾನುಸಾರ ಒಳ ಮೀಸಲು ಮಾನದಂಡ ಅನುಸರಿಸಬೇಕು. ಹಾಗೇನಾದರೂ ಮೋಸ ಮಾಡಲು ಮುಂದಾದಲ್ಲಿ ಹೋರಾಟಕ್ಕೆ ಇಳಿಯುವುದು ಅನಿವಾರ್ಯ. ಸಮುದಾಯದ ಜನ ಕೈಗೊಳ್ಳುವ ಹೋರಾಟಕ್ಕೆ ನಮ್ಮಗಳ ಬೆಂಬಲ ಇರುತ್ತದೆ ಎಂದರು.

ಮಾದಾರ ಶ್ರೀ ಮಾತನಾಡಿ, ಒಳ ಮೀಸಲಾತಿ ವಿಚಾರದಲ್ಲಿ ಗೊಂದಲ‌ ಸೃಷ್ಟಿ ಆಗಿದೆ. ಒಳ ಮೀಸಲಾತಿ ಬಗ್ಗೆ ಸರ್ಕಾರ ಸ್ಪಷ್ಟಪಡಿಸಬೇಕು. ಪರಿಶಿಷ್ಟ ಜಾತಿಯಲ್ಲಿರುವ ಸಮುದಾಯಗಳಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗ ಲಭ್ಯವಾಗುತ್ತವೆ ಎಂಬುದ ಸರ್ಕಾರ ಬಹಿರಂಗ ಪಡಿಸಬೇಕು. ಅನಗತ್ಯ ಗೊಂದಲ ಮೂಡಿಸದೆ ಒಳ ಮೀಸಲು ಆಶಯಗಳಿಗೆ ಬದ್ದರಾಗಬೇಕು. ಇಲ್ಲವಾದಲ್ಲಿ ಒಳ ಮೀಸಲಾತಿ ಹೋರಾಟಗಾರರು ಮತ್ತೆ ಬೀದಿಗಿಳಿಯಬೇಕಾಗುತ್ತದೆ ಎಂದರು.

ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಮಾತನಾಡಿ, ಉದ್ಯೋಗ ನೀಡುವಾಗ ಒಂದು ಘಟಕವನ್ನಾಗಿ ಪರಿಗಣಿಸಲಾಗುತ್ತಿದೆ ಎಂಬ ಸಚಿವರ ಹೇಳಿಕೆ ಅಸಮಾಧಾನ ತಂದಿದೆ. ಸರ್ಕಾರದ ದಿಡೀರ್ ನಡೆಯಿಂದ ಮಾದಿಗ ಸಮಾಜಕ್ಕೆ ಅನ್ಯಾಯವಾಗುತ್ತದೆ.

ಒಳ ಮೀಸಲಾತಿ ಜಾರಿ ಮಾಡಿ ನೇಮಕಾತಿ ನಡೆಯಬೇಕು.ಒಳ ಮೀಸಲಾತಿ ಹೊರತು ನೇಮಕಾತಿ ನಡೆದರೆ ಅನ್ಯಾಯವಾಗುತ್ತದೆ ಎಂದರು.

ಸಮುದಾಯದ ಪ್ರಶ್ನೆ ಬಂದಾಗ ಎಲ್ಲ ಪಕ್ಷದ ನಾಯಕರು ಒಂದಾಗಬೇಕು. ವಿಭಿನ್ನ ಹಾದಿ ತುಳಿಯಬಾರದು. ಉದ್ಯೋಗದಲ್ಲಿ ಮತ್ತೆ ಅನ್ಯಾಯವಾಗಬಹುದೆಂಬ ಆತಂಕ ಮಾದಿಗ ಸಮುದಾಯದಲ್ಲಿ ಮೂಡಿದೆ. ಸಮುದಾಯದ ಜನಪ್ರತಿನಿಧಿಗಳು ಸಮಾಜದ ಜತೆ‌ ನಿಲ್ಲಬೇಕು. ಸಂಕಷ್ಟ ಸನ್ನಿವೇಶದಲ್ಲಿ ಸಮಾಜದ ಜನ ಪ್ರತಿನಿಧಿಗಳು ಬಾಯಿ ಬಿಡಬೇಕು ಎಂದರು.

ಕಳೆದ 30 ವರ್ಷಗಳಿಂದ ಕರ್ನಾಟಕದಲ್ಲಿ ಒಳ ಮೀಸಲು ಹೋರಾಟ ನಡೆದಿದ್ದು ಮಾದಿಗ ಸಮುದಾಯವೇ ಮುನ್ನಡೆಸಿದೆ. ಹೋರಾಟ ಮಾಡದೇ ಇರುವವರು ಮೀಸಲಾತಿಯಲ್ಲಿ ಸಮಪಾಲು ಪಡೆದಿದ್ದಾರೆ. ಬಹಳ ವರ್ಷಗಳ ನಂತರ ಉದ್ಯೋಗದ ನೇಮಕಾತಿ ನಡೆಯುತ್ತಿದೆ. ಸಮದಾಯದ ಜನ ನೇಮಕಾತಿಯ ಪ್ರತಿ ಹಂತವನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ. ಅನ್ಯಾಯವಾಗಲು ಅವಕಾಶ ಕೊಡುವುದಿಲ್ಲವೆಂದು ಮಾದಾರಶ್ರೀ ಹೇಳಿದರು.