ಸಾರಾಂಶ
ಅರಣ್ಯ ಇಲಾಖೆ ಹಾಗೂ ಗಣಿ ಕಂಪನಿಗಳಿಂದ ಕಾರ್ಯ । ನಾಲ್ಕು ಅರಣ್ಯ ವಲಯಗಳಲ್ಲಿ ಪ್ರಯತ್ನವಿ.ಎಂ. ನಾಗಭೂಷಣ
ಕನ್ನಡಪ್ರಭ ವಾರ್ತೆ ಸಂಡೂರುತಾಲೂಕಿನಲ್ಲಿ ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರುಣಿಸಿ, ಅವುಗಳ ನೀರಿನ ದಾಹವನ್ನು ತಣಿಸುವಲ್ಲಿ ವಾಟರ್ ಹೋಲ್ ಹಾಗೂ ಜಲ ಮೂಲಗಳು ಪ್ರಮುಖ ಪಾತ್ರವನ್ನು ವಹಿಸುತ್ತಿವೆ.
ಉತ್ತಮ ಮಳೆಯಾದ ಸಂದರ್ಭದಲ್ಲಿ ಅರಣ್ಯದಲ್ಲಿನ ತಗ್ಗು ಪ್ರದೇಶಗಳಲ್ಲಿ ಮಳೆನೀರು ಸಂಗ್ರಹಗೊಂಡು, ಬೇಸಿಗೆಯಲ್ಲಿ ಅವುಗಳೇ ಅರಣ್ಯವಾಸಿ ಪ್ರಾಣಿ ಪಕ್ಷಿಗಳಿಗೆ ನೀರುಣಿಸುತ್ತವೆ. ಇಂತಹ ಸ್ವಾಭಾವಿಕ ಜಲ ಮೂಲಗಳಲ್ಲದೆ, ಕೃತಕವಾಗಿ ವಾಟರ್ ಹೋಲ್, ಸಿಮೆಂಟಿನ ತೊಟ್ಟಿಗಳನ್ನಿಟ್ಟು, ಅವುಗಳಲ್ಲಿ ನೀರನ್ನು ತುಂಬಿಸಿ, ವನ್ಯಜೀವಿಗಳ ನೀರಿನ ದಾಹವನ್ನು ತಣಿಸುವ ಪ್ರಕ್ರಿಯೆಯೂ ನಡೆಯುತ್ತಿದೆ. ನೀರಿನ ತಾಣಗಳು:ಪರಿಸರವಾದಿ ಮೂಲಿಮನೆ ಈರಣ್ಣ ಕನ್ನಡಪ್ರಭದೊಂದಿಗೆ ಮಾತನಾಡಿ, ತಾಲೂಕಿನಲ್ಲಿರುವ ನಾರಿಹಳ್ಳ ಜಲಾಶಯ, ನವಿಲುಸ್ವಾಮಿ ಕೊಳ್ಳ, ಹರಿಶಂಕರ ಕೊಳ್ಳ, ಹಿರೆಹಕ್ಕಿಕೊಳ್ಳ, ಮಾವಿನ ಹಾಗೂ ಹುಣಿಸೆ ಮರದ ಕೊಳ್ಳ, ಜೋಗಿ ಕೊಳ್ಳ, ಗುಡಾಣಿ ಕೊಳ್ಳ, ಕಟಾಸಿಂಗನಕೊಳ್ಳ, ಮೂಕ ಮಲಿಯಮ್ಮನ ಕೊಳ್ಳ, ಡುಮುಕಿನ ಕೊಳ್ಳ, ತಾಯಮ್ಮನಕೊಳ್ಳ, ಮೀನುಗೊಳ್ಳ, ನವಿಲುಸ್ವಾಮಿ ತೀರ್ಥ, ಭೀಮ ಹಾಗೂ ಭೈರವ ತೀರ್ಥ ಮುಂತಾದ ಪ್ರಮುಖ ಸ್ವಾಭಾವಿಕ ನೀರಿನ ತಾಣಗಳಾಗಿದ್ದು, ಮಳೆಗಾಲದಲ್ಲಿ ಇಲ್ಲಿ ಸಂಗ್ರಹವಾಗುವ ನೀರು, ಬೇಸಿಗೆಯಲ್ಲೂ ವನ್ಯಜೀವಿಗಳಿಗೆ ನೀರುಣಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಇವುಗಳನ್ನು ಸಂರಕ್ಷಿಸಬೇಕಿದೆ ಎಂದು ತಿಳಿಸಿದ್ದಾರೆ.
ನೀರಿನ ತೊಟ್ಟಿಗಳು:ಅರಣ್ಯ ಇಲಾಖೆ ಹಾಗೂ ಗಣಿ ಕಂಪನಿಗಳಿಂದ ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ಹಲವು ವಾಟರ್ ಹೋಲ್ (ನೀರು ಸಂಗ್ರಹಿಸಲು ನಿರ್ಮಿಸಿದ ದೊಡ್ಡ ಪ್ರಮಾಣದ ನೀರಿನ ತೊಟ್ಟಿ) ಹಾಗೂ ಸಿಮೆಂಟಿನ ತೊಟ್ಟಿ ನಿರ್ಮಿಸಿ, ಅವುಗಳಲ್ಲಿ ನೀರನ್ನು ಹರಿಸಿ ವನ್ಯ ಜೀವಿಗಳ ನೀರಿನ ದಾಹವನ್ನು ತಣಿಸಲಾಗುತ್ತಿದೆ.
ಅರಣ್ಯ ಇಲಾಖೆ ವಾಟರ್ ಹೋಲ್‌ಗಳ ಬಳಿ ಇಟ್ಟಿದ್ದ ಕ್ಯಾಮೆರಾಗಳಲ್ಲಿ ವಿವಿಧ ವನ್ಯಜೀವಿಗಳಾದ ಕರಡಿ, ಚಿರತೆ, ಮೊಲ, ಮುಳ್ಳುಹಂದಿ, ಕಾಡು ಹಂದಿ, ಕೊಂಡಕುರಿ, ನವಿಲು ಮುಂತಾದವು ನೀರನ್ನು ಕುಡಿದು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ದೃಶ್ಯಗಳು ಇಲ್ಲಿನ ಅರಣ್ಯದಲ್ಲಿರುವ ವಿವಿಧ ವನ್ಯಜೀವಿಗಳ ಅಸ್ತಿತ್ವವನ್ನು ತೆರೆದಿಟ್ಟಿವೆ. ತಾಲೂಕಿನ ನಾಲ್ಕು ಅರಣ್ಯ ವಲಯಗಳಲ್ಲಿ ವಾಟರ್ ಹೋಲ್ ಹಾಗೂ ಸಿಮೆಂಟಿನ ತೊಟ್ಟಿಗಳನ್ನು ನಿರ್ಮಿಸಿ, ಅಲ್ಲಿ ನೀರನ್ನು ತುಂಬಿಸುವ ಮೂಲಕ ಬಿರು ಬೇಸಿಗೆಯಲ್ಲಿ ವನ್ಯಜೀವಿಗಳ ನೀರಿನ ದಾಹವನ್ನು ತಣಿಸುವ ಅರಣ್ಯ ಇಲಾಖೆ ಹಾಗೂ ಗಣಿ ಕಂಪನಿಗಳ ಕಾರ್ಯ ಅಭಿನಂದನಾರ್ಹ ಹಾಗೂ ಅನುಕರಣೀಯವಾಗಿದೆ.ಸಂಡೂರು ತಾಲೂಕಿನ ನಾಲ್ಕು ಅರಣ್ಯ ವಲಯಗಳಲ್ಲಿ ವಿವಿಧೆಡೆ ವಾಟರ್ ಹೋಲ್ ಹಾಗೂ ಸಿಮೆಂಟಿನ ತೊಟ್ಟಿಗಳನ್ನು ನಿರ್ಮಿಸಿ ಅಲ್ಲಿ ನೀರನ್ನು ಪೂರೈಸುವ ಮೂಲಕ ವನ್ಯಜೀವಿಗಳ ನೀರಿನ ದಾಹವನ್ನು ತಣಿಸಲು ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ದಾದಾ ಖಲಂದರ್.