ಸಹಕಾರ ಕ್ಷೇತ್ರದ ಸಾಧನೆಗಳು ಹಾಗೂ ಉದ್ದೇಶಗಳನ್ನು ಹಳ್ಳಿ-ಹಳ್ಳಿಯ ರೈತಾಪಿ ವರ್ಗ ಮತ್ತು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ.
ಅಳ್ನಾವರ:
ಸಹಕಾರ ಕ್ಷೇತ್ರದ ಸಾಧನೆಗಳು ಹಾಗೂ ಉದ್ದೇಶಗಳನ್ನು ಹಳ್ಳಿ-ಹಳ್ಳಿಯ ರೈತಾಪಿ ವರ್ಗ ಮತ್ತು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಮಂಜುನಾಥ ಮುರಳ್ಳಿ ಹೇಳಿದರು.ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡ 73ನೇ ಸಹಕಾರ ಸಪ್ತಾಹದ 5ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲ್ಯಾಧಾರಿತ ತರಬೇತಿ ಹಾಗೂ ವೃತ್ತಿಪರ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಸಪ್ತಾಹದ ಮುಖ್ಯ ಉದ್ದೇಶವಾಗಿದೆ. ಸಹಕಾರ ಕ್ಷೇತ್ರದ ಸಾಧನೆಗಳು, ಕಾರ್ಯನಿರ್ವಹಣೆ, ಬೆಳವಣಿಗೆ, ಸಮಸ್ಯೆಗಳು, ಸವಾಲುಗಳು ಮತ್ತು ಮುಂದಿನ ಕಾರ್ಯಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದರು.
ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಸಹಕಾರಿ ಪಾಲುದಾರಿಕೆ ಬಲಪಡಿಸುವ ವಿಷಯ್ ಕುರಿತು ಸಂಪನ್ಮೂಲ ವ್ಯಕ್ತಿ ಚೆನ್ನಬಸವರಾಜ ಉಪನ್ಯಾಸ ನೀಡಿ, ಸಾರ್ವಜನಿಕ ಮತ್ತು ಖಾಸಗಿ ವಲಯದೊಂದಿಗೆ ಸಹಕಾರ ಕ್ಷೇತ್ರವೂ ಕೈಜೋಡಿಸಿ ಸಮನ್ವಯದಿಂದ ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಿದರೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಾಧ್ಯವಾಗುತ್ತದೆ. ಸಹಕಾರ ಸಂಸ್ಥೆಗಳ ಪಾಲುದಾರಿಕೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸುವ ಮೂಲಕ ಗ್ರಾಮೀಣ ಆರ್ಥಿಕ ಅಭಿವೃದ್ಧಿಗೆ ವೇಗ ನೀಡಬಹುದು ಎಂದು ಹೇಳಿದರು.ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಧಾರವಾಡ ಜಿಲ್ಲಾ ಸಹಕಾರ ಯೂನಿಯನ್, ಕೆಸಿಸಿ ಬ್ಯಾಂಕ್, ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಹಾಗೂ ಅಳ್ನಾವರ ತಾಲೂಕಿನ ಸಹಕಾರ ಸಂಘಗಳ ಮತ್ತು ಸಹಕಾರ ಇಲಾಖೆಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಳ್ನಾವರದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಬಸವೇಶ ಹಟ್ಟಿಹೊಳಿ ವಹಿಸಿದ್ದರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಪ್ಪ ಸಪ್ಪೂರಿ ಸಹಕಾರ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶ್ರೀಕಾಂತ್ ಗಾಯಕವಾಡ, ಉಮೇಶ ಭೂಮಣ್ಣನವರ, ನಿಂಗಪ್ಪ ಬೇಕ್ವಾಡಕರ, ಬಳಿರಾಮ ಅಳವನಿ, ನದೀಮ್ ಕಾಂಟ್ರಾಕ್ಟರ್, ಸೋನಿಯಾ ಬೆರೆಟೊ, ಸೈಮನ್ ಬೆರೆಟೊ, ನಾರಾಯಣ ಪಟೇಲ್, ಎಂ.ಕೆ. ಭಾಗವನ್, ಸಿದ್ದಪ್ಪ ಕಿರ್ಲೋಸ್ಕರ್, ಸುನೀತಾ ಸಿದ್ರಾಮ್, ನಿಂಗರಾಜ ಬೆಣ್ಣಿ, ಕೆಸಿಸಿ ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ಎಸ್.ವಿ. ಹೂಗಾರ, ಸಲೀಂ, ಬಸವಣ್ಣಿ, ರಾಘವೇಂದ್ರ, ಕೆ.ಎಂ. ಅರ್ಜುನ ಅಷ್ಟೇಕರ್, ಸೋಮಶೇಖರ ಇನಾಮದಾರ, ನಾರಾಯಣ ಮೋರೆ, ಪರಮೇಶ್ವರ ತೇಗೂರ, ಎಚ್.ಎಸ್. ಲಲಿತಾ, ಕವಿತಾ ಹಾಸಬಿಮಠ, ಬಿ.ಎಫ್. ಹೊಸಮನಿ. ವಿನಾಯಕ ದುಲಬಾಜಿ ಸೇರಿದಂತೆ ಸಹಕಾರ ಕ್ಷೇತ್ರದ ಪ್ರತಿನಿಧಿಗಳು ಉಪಸ್ಥಿತರಿದ್ದರು.