ಕುಷ್ಟಗಿಯ ದೋಟಿಹಾಳಕ್ಕಿಲ್ಲ ಸುಸಜ್ಜಿತ ಬಸ್ ನಿಲ್ದಾಣ

| Published : Feb 12 2024, 01:32 AM IST / Updated: Feb 12 2024, 02:50 PM IST

ಕುಷ್ಟಗಿಯ ದೋಟಿಹಾಳಕ್ಕಿಲ್ಲ ಸುಸಜ್ಜಿತ ಬಸ್ ನಿಲ್ದಾಣ
Share this Article
  • FB
  • TW
  • Linkdin
  • Email

ಸಾರಾಂಶ

ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮವು ಸುತ್ತಮುತ್ತಲಿನ 30ಕ್ಕೂ ಹೆಚ್ಚು ಹಳ್ಳಿಗಳಿಗೆ ವಾಣಿಜ್ಯ ಮತ್ತು ವ್ಯಾಪಾರಿ ಕೇಂದ್ರವಾಗಿದೆ. ಗ್ರಾಮಕ್ಕೆ ಬರುವಂತಹ ಪ್ರಯಾಣಿಕರು ಸುಸಜ್ಜಿತ ಬಸ್ ನಿಲ್ದಾಣ ಇಲ್ಲದೇ ಪರದಾಡುತ್ತಿದ್ದಾರೆ.

ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮವು ಸುತ್ತಮುತ್ತಲಿನ 30ಕ್ಕೂ ಹೆಚ್ಚು ಹಳ್ಳಿಗಳಿಗೆ ವಾಣಿಜ್ಯ ಮತ್ತು ವ್ಯಾಪಾರಿ ಕೇಂದ್ರವಾಗಿದೆ. ಗ್ರಾಮಕ್ಕೆ ಬರುವಂತಹ ಪ್ರಯಾಣಿಕರು ಸುಸಜ್ಜಿತ ಬಸ್ ನಿಲ್ದಾಣ ಇಲ್ಲದೇ ಪರದಾಡುತ್ತಿದ್ದಾರೆ.

ಗ್ರಾಮವು ತಾಲೂಕಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರ-ವಹಿವಾಟು ಹಾಗೂ ಧಾರ್ಮಿಕ ಕ್ಷೇತ್ರವಾಗಿದೆ. ನಿತ್ಯ ಸಾವಿರಾರು ಪ್ರಯಾಣಿಕರು ಇಲ್ಲಿಗೆ ಬರುವುದು ಸಹಜವಾಗಿದೆ. 

ಗ್ರಾಮಕ್ಕೆ ಸರ್ಕಾರಿ ಬಸ್ ನಿಲ್ದಾಣವಿಲ್ಲದೇ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ, ಜನಪ್ರತಿನಿಧಿಗಳು ಬಸ್ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ಪ್ರತಿವಾರ ಸಂತೆ, ಜನಸಂದಣಿ: ದೋಟಿಹಾಳ ಗ್ರಾಮದಲ್ಲಿ ಪ್ರತಿ ಶನಿವಾರ ಸಂತೆ ನಡೆಯತ್ತದೆ. ಹತ್ತಾರು ಹಳ್ಳಿಗಳ ಜನರು ಬರುತ್ತಾರೆ. ವ್ಯಾಪಾರಿಗಳ ಸಂದಣಿ ಕಿಕ್ಕಿರಿದಿರುತ್ತದೆ. 

ಸಂತೆಗೆ ಬಂದವರಿಗೆ ನಿಲ್ಲಲೂ ಜಾಗ ಇರುವುದಿಲ್ಲ. ನಿತ್ಯವೂ ಕರ್ನಾಟಕ ಗ್ರಾಮೀಣ ಬ್ಯಾಂಕ್, ಆರೋಗ್ಯ ಕೇಂದ್ರ, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಲಕರ ವಸತಿ ನಿಲಯ, ಕೃಷಿ ಪತ್ತಿನ ಬ್ಯಾಂಕ್, ಗ್ರಾಪಂ ಕಾರ್ಯಾಲಯ, ಪಶು ಆಸ್ಪತ್ರೆ, ಕಿರಾಣಿ ಅಂಗಡಿ, ದವಸ ಧಾನ್ಯಗಳ ಅಂಗಡಿ, ದಲಾಲಿ ಅಂಗಡಿ, ರಸ ಗೊಬ್ಬರ ಮತ್ತಿತರ ಮಳಿಗೆಗಳಿದ್ದು, ಎಲ್ಲವೂ ಗ್ರಾಹಕರಿಂದ ತುಂಬಿರುತ್ತವೆ. 

ಅಷ್ಟೊಂದು ಪ್ರಮಾಣದಲ್ಲಿ ಜನ ಬಂದು ಹೋಗುತ್ತಾರೆ. ಬಸ್‌ ನಿಲ್ದಾಣದ ಅಗತ್ಯತೆ ಇದೆ ಎನ್ನುತ್ತಾರೆ ಸಾರ್ವಜನಿಕರು.

ಬಸ್ ಸಂಚಾರಕ್ಕೆ ಇಕ್ಕಟ್ಟು: ರಸ್ತೆ ಬದಿಯಲ್ಲಿ ಬೈಕ್, ಕಾರು, ಟಂಟಂ ಸೇರಿ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಿದ್ದಾರೆ.

ದೋಟಿಹಾಳ ಮಾರ್ಗವಾಗಿ ಕುಷ್ಟಗಿ, ಇಲಕಲ್, ಬಾಗಲಕೋಟೆ, ಲಿಂಗಸುಗೂರು, ಹನಮಸಾಗರ, ಬಾದಾಮಿ, ಕೊಪ್ಪಳ, ರಾಯಚೂರು, ತಾವರಗೇರಾ, ಮಂಗಳೂರು, ಬೆಂಗಳೂರು ಬಸ್‌ಗಳು ಸಂಚರಿಸುತ್ತವೆ. ನಿತ್ಯವೂ 30ಕ್ಕೂ ಹೆಚ್ಚು ಬಾರಿ ಬಸ್‌ಗಳು ಸಂಚರಿಸುತ್ತವೆ.

ದೋಟಿಹಾಳ ಗ್ರಾಮದೊಳಗೆ ಬರುವ ಸಾರಿಗೆ ವಾಹನಗಳಿಗೆ ಸಂಚಾರಕ್ಕೆ ಇಕ್ಕಟ್ಟಾಗಿದೆ. ಚಾಲಕರು ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ವಾಹನಗಳಿಗೆ ಬಸ್ ತಾಗಿದರೆ ಬೈಕುಗಳ ಮಾಲೀಕರು ಚಾಲಕರ ಜತೆ ಜಗಳಕ್ಕೆ ಇಳಿಯುವುದು ಸಾಮಾನ್ಯವಾಗಿದೆ.

ದೋಟಿಹಾಳ ಗ್ರಾಮಕ್ಕೆ ಸೂಕ್ತ ಬಸ್ ನಿಲ್ದಾಣ ನಿರ್ಮಿಸಬೇಕು. ಈ ಬೇಡಿಕೆಯನ್ನು ಈಗಾಗಲೇ ಶಾಸಕರು, ಸಂಸದರು ಹಾಗೂ ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ. 

ಅವರು ಸೂಕ್ತ ಕ್ರಮ ಕೈಗೊಂಡು ಬಸ್ ನಿಲ್ದಾಣದ ನಿರ್ಮಾಣಕ್ಕೆ ಮುಂದಾಗಬೇಕು ಎನ್ನುತ್ತಾರೆ ದೋಟಿಹಾಳ ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ.