೨೫ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ಶೀಘ್ರ ನಿರ್ಮಾಣ: ಶಾಸಕ ಕೆ.ವೈ.ನಂಜೇಗೌಡ

| Published : Jul 27 2024, 12:53 AM IST

೨೫ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ಶೀಘ್ರ ನಿರ್ಮಾಣ: ಶಾಸಕ ಕೆ.ವೈ.ನಂಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ಪತ್ರೆಗೆ ನೂತನ ಕಟ್ಟಡಕ್ಕಾಗಿ ಸದನದಲ್ಲಿ ಚುಕ್ಕಿ ಪ್ರಶ್ನೆಯ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿದೆ. ಕಟ್ಟಡದ ಸ್ಥಿತಿ- ಗತಿ, ಅಗತ್ಯವಿರುವ ಕಟ್ಟಡದ ಬಗ್ಗೆ ಇಂಜಿನಿಯರ್‌ಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ಸದನದಲ್ಲಿ ಆರೋಗ್ಯ ಸಚಿವರು ಉತ್ತರಿಸಿದ್ದಾರೆ. ಪ್ರತ್ಯೇಕವಾಗಿ ಸಹ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ, ಆಸ್ಪತ್ರೆ ಕಟ್ಟಡಕ್ಕೆ ಅಗತ್ಯವಿರುವ ಅನುದಾನವನ್ನು ನೀಡಲಾಗುವುದೆಂದು ಸಚಿವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಾಲೂರು

ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ ೨೦ ಕೋಟಿ ರು., ವಸತಿಗೃಹ ನಿರ್ಮಾಣಕ್ಕೆ ನಾಲ್ಕುವರೆ ಕೋಟಿ ರು.ಗಳು ಅಗತ್ಯವಿರುವ ಬಗ್ಗೆ ಸದನದಲ್ಲಿ ಆರೋಗ್ಯ ಸಚಿವರು ಉತ್ತರದ ಮೂಲಕ ತಿಳಿಸಿದ್ದಾರೆ. ಸುಸಜ್ಜಿತ ಆಸ್ಪತ್ರೆಯನ್ನು ಶೀಘ್ರ ನಿರ್ಮಿಸಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆಸ್ಪತ್ರೆಯ ಕಟ್ಟಡವು ಶಿಥಿಲವಾಗಿದ್ದು, ಕಿರಿದಾಗಿರುವುದರಿಂದ ವೈದ್ಯರು ಸೂಕ್ತ ಚಿಕಿತ್ಸೆ ನೀಡಲು ಆಗುತ್ತಿಲ್ಲ. ೧೯೫೨ರಲ್ಲಿ ಸರ್ಕಾರಿ ಆಸ್ಪತ್ರೆ ಪ್ರಾರಂಭವಾಗಿ ಹಂತ ಹಂತವಾಗಿ ಮೇಲ್ದರ್ಜೆಗೇರಿದೆ. ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು ಹೊರರೋಗಿಗಳು ಚಿಕಿತ್ಸೆಗಾಗಿ ಆಗಮಿಸುವ ಆಸ್ಪತ್ರೆ ಇದಾಗಿದೆ ಎಂದರು.

ಆಸ್ಪತ್ರೆಗೆ ನೂತನ ಕಟ್ಟಡಕ್ಕಾಗಿ ಸದನದಲ್ಲಿ ಚುಕ್ಕಿ ಪ್ರಶ್ನೆಯ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿದೆ. ಕಟ್ಟಡದ ಸ್ಥಿತಿ- ಗತಿ, ಅಗತ್ಯವಿರುವ ಕಟ್ಟಡದ ಬಗ್ಗೆ ಇಂಜಿನಿಯರ್‌ಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ಸದನದಲ್ಲಿ ಆರೋಗ್ಯ ಸಚಿವರು ಉತ್ತರಿಸಿದ್ದಾರೆ. ಪ್ರತ್ಯೇಕವಾಗಿ ಸಹ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ, ಆಸ್ಪತ್ರೆ ಕಟ್ಟಡಕ್ಕೆ ಅಗತ್ಯವಿರುವ ಅನುದಾನವನ್ನು ನೀಡಲಾಗುವುದೆಂದು ಸಚಿವರು ತಿಳಿಸಿದ್ದಾರೆ ಎಂದರು.

ಬಸ್ ನಿಲ್ದಾಣವನ್ನು ಯೋಜನಾ ಪ್ರಾಧಿಕಾರ ಹಾಗೂ ಡೆಲ್ಟಾ ಸಹಯೋಗದಲ್ಲಿ ೨೦ ಕೋಟಿ ರು.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ಬಸ್ ನಿಲ್ದಾಣದ ಅಭಿವೃದ್ಧಿಗಾಗಿ ೧೦ ಕೋಟಿ ರು.ಗಳ ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದರು.

೨೦ ಕೋಟಿ ರು.ಗಳ ವೆಚ್ಚದಲ್ಲಿ ಪಟ್ಟಣದ ದೊಡ್ಡಕೆರೆ ಅಭಿವೃದ್ಧಿಪಡಿಸಲಾಗುತ್ತಿದ್ದು, ಈಗಾಗಲೇ ೪.೫೦ ಕೋಟಿ ರು.ಗಳನ್ನು ಸರ್ಕಾರ ಕೆರೆಗಳ ಅಭಿವೃದ್ಧಿಗಾಗಿ ನೀಡಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರಯೋಗ ಸೇತುವೆ ನಿರ್ಮಾಣಕ್ಕೆ ಸರ್ಕಾರ ಅನುಮೋದಿಸಿದೆ, ಇದರಿಂದ ದಟ್ಟವಾದ ವಾಹನ ಸಂಚಾರ ಕಡಿಮೆಯಾಗಲಿದೆ ಎಂದು ತಿಳಿಸಿದರು.

ಪಟ್ಟಣದ ಅಭಿವೃದ್ಧಿಗಾಗಿ ಹಿಂದುಳಿದ ವಾರ್ಡುಗಳ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರದಿಂದ ಕ್ರಮಕೈಗೊಳ್ಳಲಾಗುವುದು.

ಯರಗೋಳ್ ನೀರು ಈಗಾಗಲೇ ಪಟ್ಟಣಕ್ಕೆ ಸರಬರಾಜಾಗುತ್ತಿದ್ದು, ಹಂತ ಹಂತವಾಗಿ ಪಟ್ಟಣದ ಎಲ್ಲಾ ವಾರ್ಡ್ಗಳಿಗೆ ನೀರು ಸರಬರಾಜು ಮಾಡಲಾಗುವುದು. ಪುರಸಭೆ ಆಸ್ತಿ, ಸಿಎ ನಿವೇಶನಗಳನ್ನು ಕೆಲವರು ಅಕ್ರಮ ಖಾತೆ ಮಾಡಿಸಿಕೊಂಡು ಮನೆಗಳು ನಿರ್ಮಿಸಿಕೊಂಡಿದ್ದಾರೆ, ಯಾವುದೇ ಪ್ರತಿಷ್ಠಿತ ವ್ಯಕ್ತಿಯಾಗಿರಲಿ ಬಿಡುವುದಿಲ್ಲ, ಈಗಾಗಲೇ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ನಿವೇಶನಗಳ ಪಟ್ಟಿ ಮಾಡುತ್ತಿದ್ದಾರೆ.ಅವುಗಳನ್ನು ತೆರವುಗೊಳಿಸಿ ಪುರಸಭೆ ವಶಕ್ಕೆ ಪಡೆಯಲು ಆಂದೋಲನ ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡಲಿದ್ದಾರೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ರಮೇಶ್ ಬಾಬು, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್, ವೈದ್ಯರಾದ ಡಾ ಶ್ರೀನಿವಾಸ್, ಡಾ. ಚನ್ನಕೇಶವ, ಪುರಸಭೆಯ ಸದಸ್ಯರಾದ ಎ ರಾಜಪ್ಪ, ಮುರಳಿಧರ್, ಜಾಕಿರ್ ಖಾನ್, ಇನ್ನಿತರರು ಹಾಜರಿದ್ದರು.