ಸ್ಥಳೀಯ ರಾಜಕಾರಣಿಗಳು ಲವ್ ಜಿಹಾದ್ ಪ್ರಕರಣದಲ್ಲಿ ರಾಜಕೀಯ ತಿರುವು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂಬಂಧ ಸಮಾಜ ಮತ್ತು ಯುವತಿಯ ಸುರಕ್ಷತೆ ದೃಷ್ಟಿಯಿಂದ ಗೃಹ ಸಚಿವ ಡಾ. ಜಿ. ಪರಮೇಶ್ವರ ಜತೆಗೂ ಮಾತನಾಡುತ್ತೇನೆ ಎಂದು ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿ:
ಈಚೆಗೆ ನಗರದಲ್ಲಿ ನಡೆದ ಯುವತಿಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಮನಿಸಿದರೆ ಹುಬ್ಬಳ್ಳಿಯಲ್ಲಿ ಲವ್ ಜಿಹಾದ್‌ನ ವ್ಯವಸ್ಥಿತ ಜಾಲವು ಬೇರೂರಿದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ನೊಂದವರಿಗೆ ಸೂಕ್ತ ನ್ಯಾಯ ದೊರಕಿಸಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.ಮಂಗಳವಾರ ದೌರ್ಜನ್ಯಕ್ಕೊಳಗಾದ ಯುವತಿಯರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ವಶದಲ್ಲಿರುವ ಆರೋಪಿ ಯುವತಿ ಜತೆಗಿನ ವೀಡಿಯೋ ಹೊರಗಡೆ ಬಿಡುತ್ತಿದ್ದಾನೆ. ಇದಕ್ಕೆ ಕೇಶ್ವಾಪುರದ ಹೋಟೆಲ್ ಮತ್ತು ಜಿಮ್ ಮೂಲಕ ನಡೆಯುತ್ತಿದೆ ಎಂಬುದು ಕುಟುಂಬಸ್ಥರ ಗಂಭೀರ ಆರೋಪವಿದೆ. ಇದು ವ್ಯವಸ್ಥಿತವಾಗಿ ಸಂತ್ರಸ್ತೆಯರ ಮೇಲೆ ಒತ್ತಡ ಹಾಕಲು ಮಾಡುತ್ತಿರುವ ಕೆಲಸ. ಯುವತಿ ಪ್ರಕರಣ ದಾಖಲಿಸಿದ ನಂತರ ವೀಡಿಯೋಗಳು ಹೊರಬರುತ್ತವೆ ಎಂದರೆ ಏನರ್ಥ? ಹೀಗಾಗಿ ಹಳೆ ವೀಡಿಯೋ ಯಾರ ಬಳಿ ಇವೆ? ಅವುಗಳನ್ನು ಹರಿಬಿಡುತ್ತಿರುವವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ತಕ್ಷಣವೇ ಬಂಧಿಸಬೇಕು ಎಂದು ಜೋಶಿ ಒತ್ತಾಯಿಸಿದರು. ಸ್ಥಳೀಯ ರಾಜಕಾರಣಿಗಳು ಈ ಪ್ರಕರಣಕ್ಕೆ ರಾಜಕೀಯ ತಿರುವು ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂಬಂಧ ಸಮಾಜ ಮತ್ತು ಯುವತಿಯ ಸುರಕ್ಷತೆ ದೃಷ್ಟಿಯಿಂದ ಗೃಹ ಸಚಿವ ಡಾ. ಜಿ. ಪರಮೇಶ್ವರ ಜತೆಗೂ ಮಾತನಾಡುತ್ತೇನೆ. ಒಂದು ವೇಳೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದೇ, ಹಿಂದೂ-ಮುಸ್ಲಿಂ ತಿರುವು ನೀಡಿ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಯತ್ನಿಸಿದರೆ, ನಾವು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.ಹಿಂದೂ ಕಾರ್ಯಕರ್ತರ ಮೇಲೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಆರೋಪಿಯನ್ನು ಹಿಡಿದು ಮೊಬೈಲ್, ಇತ್ಯಾದಿ ವಸ್ತುಗಳನ್ನು ತೆಗೆದುಕೊಳ್ಳಲು ಹೋದ 60ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನೀಯ. ಸಂತ್ರಸ್ತೆಯ ಮನೆಗೆ ಬಂದು ಗಲಾಟೆ ಮಾಡಿದವರನ್ನು ಪೊಲೀಸರು ಇನ್ನೂ ಏಕೆ ಬಂಧಿಸಿಲ್ಲ? ಇದನ್ನು ಏಕೆ ಗಂಭೀರವಾಗಿ ಪರಿಗಣಿಸಿಲ್ಲ? ಎಂದು ಪ್ರಶ್ನಿಸಿದರಲ್ಲದೇ, ಹೋರಾಟಕ್ಕೆ ಪ್ರಸಿದ್ಧವಾದ ಹುಬ್ಬಳ್ಳಿಯಲ್ಲಿ ಹೋರಾಟ ಆರಂಭಗೊಂಡರೆ, ಉಗ್ರ ಸ್ವರೂಪ ಪಡೆಯುತ್ತದೆ. ಹಾಗಾಗಿ ಇದಕ್ಕೆ ಅವಕಾಶ ನೀಡದೇ, ಈ ಪ್ರಕರಣದಲ್ಲಿ ಯಾರೇ ಇದ್ದರೂ ಬಂಧಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.