ಮಗ, ಸಹಚರನೊಂದಿಗೆ ಗಂಡನನ್ನೇ ಹತ್ತೆಗೈದ ಪತ್ನಿ

| Published : Dec 25 2023, 01:31 AM IST

ಸಾರಾಂಶ

ಬ್ಯಾಡಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬನ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಅನೈತಿಕ ಸಂಬಂಧ ಹಾಗೂ ಆಸ್ತಿಗೆ ಸಂಬಂಧಿಸಿದಂತೆ ಮಗನೊಂದಿಗೆ ಸಂಚು ರೂಪಿಸಿ ಪತ್ನಿಯೇ ಗಂಡನ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬನ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಅನೈತಿಕ ಸಂಬಂಧ ಹಾಗೂ ಆಸ್ತಿಗೆ ಸಂಬಂಧಿಸಿದಂತೆ ಮಗನೊಂದಿಗೆ ಸಂಚು ರೂಪಿಸಿ ಪತ್ನಿಯೇ ಗಂಡನ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಕೊಲೆಯಾದ ವ್ಯಕ್ತಿಯನ್ನು ಸೊರಬ ತಾಲೂಕು ಯಲಿವಾಳ ಗ್ರಾಮದ ಮೌನೇಶ ಕಬ್ಬೂರ (50) ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ: ತಾಲೂಕಿನ ಮಾಸಣಗಿ ಗ್ರಾಮದ ಮಂಗಳಾ ಮುಳಗುಂದ ಎಂಬಾಕೆಯನ್ನು ಯಲಿವಾಳದ ಮೌನೇಶ ಕಬ್ಬೂರ ಎಂಬುವರ ಜೊತೆ ಮದುವೆ ಮಾಡಿಕೊಡಲಾಗಿತ್ತು. ಮೌನೇಶ ತನ್ನ ಪತ್ನಿ ಹಾಗೂ ಮಗ ಶಂಭುವಿನೊಂದಿಗೆ ಶಿವಮೊಗ್ಗ ಜಿಲ್ಲೆಯ ಆಯನೂರಿನ ಬಾಬುಲಾಲ್ ಎಂಬುವರ ತೋಟದಲ್ಲಿ ಕೆಲಸಕ್ಕಿದ್ದ. ಆದರೆ ಅತಿಯಾದ ಮದ್ಯ ವ್ಯಸನಿಯಾಗಿದ್ದ ಮೌನೇಶ ಪತ್ನಿ ಜತೆ ಸರಿಯಾಗಿ ಸಂಸಾರ ನಿರ್ವಹಿಸದೇ ಬೇರೊಬ್ಬಳನ್ನು ಮದುವೆಯಾಗಿದ್ದಾಗಿ ತಿಳಿದು ಬಂದಿದೆ. ಮೊದಲ ಮತ್ತು ಎರಡನೇ ಪತ್ನಿ ಜತೆ ಆಸ್ತಿ ವಿಚಾರವಾಗಿ ಅಗಾಗ್ಗೆ ಜಗಳ ಸಹ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

ಕತ್ತು ಹಿಸುಕಿ ಕೊಲೆ: ಪತಿಯ ವರ್ತನೆಯಿಂದ ಬೇಸತ್ತ ಮಂಗಳಾ ತನ್ನ ಮಗನೊಂದಿಗೆ ಕೊಲೆ ಸಂಚು ರೂಪಿಸಿದ್ದಾಳೆ. ಈ ವೇಳೆ ಆಯನೂರಿನ ಎಳೆನೀರು ವ್ಯಾಪಾರಿ ಶಿವರಾಜ ಮೂಡ್ಲಪ್ಪ ಎಂಬುವನ ಸ್ನೇಹ ಬೆಳೆಸಿ ಗಂಡನನ್ನು ಕೊಲೆ ಮಾಡಲು ನಿರ್ಧರಿಸಿದ್ದು, ಮೌನೇಶನಿಗೆ ಮತ್ತು ಭರಿಸುವಂತಹ ಔಷಧ ನೀಡಿ ಭದ್ರಾವತಿ-ಹೊಳೆಹೊನ್ನೂರ ರಸ್ತೆಯಲ್ಲಿನ ಸಿಗೇಬಾಗಿ ಕ್ರಾಸ್ ಬಳಿ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಯಾರಿಗೂ ತಿಳಿಯದಂತೆ ರಸ್ತೆಯ ಪಕ್ಕಕ್ಕೆಸೆದು ಬಂದಿದ್ದಾಳೆ ಎಂದು ಪೊಲೀಸರ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾಳೆ.

ನಾಪತ್ತೆ ಪ್ರಕರಣ ದಾಖಲು: ತವರು ಮನೆ ಹಾಗೂ ಗಂಡನ ಮನೆಯವರೆಗೆ ಅನುಮಾನ ಬಾರದಿರಲೆಂದು ಉಪಾಯ ಮಾಡಿದ ಮಂಗಳಾ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಗಂಡ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಳು.

ಪ್ರಕರಣ ಭೇದಿಸಿದ ಬ್ಯಾಡಗಿ ಪೋಲಿಸರು ಮೌನೇಶನ ಮೊಬೈಲ್ ನಂಬರ್ ಜಾಡು ಹಿಡಿದು ಆತನ ಪತ್ತೆಗೆ ಮುಂದಾದಾಗ ಮೌನೇಶ ಪೋನ್ ಟವರ್ ಲೋಕೇಶನ್ ಭದ್ರಾವತಿ ಬಳಿ ಆಪರೇಟಾಗಿದ್ದು ಪತ್ತೆಯಾಗಿದೆ. ಈ ವೇಳೆ ಫಿರ್ಯಾದಿ ನೀಡಿದ್ದ ಮಂಗಳಾ, ಮಗ ಶಂಭು ಈರ್ವರನ್ನು ತೀವ್ರ ವಿಚಾರಣೆಗೊಳಡಿಸಿದಾಗ ನಿಜ ಸಂಗತಿ ಬಾಯ್ಬಿಟ್ಟಿದ್ದು ತಾವೇ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಆರೋಪಿಗಳಾದ ಮಂಜುಳಾ, ಶಂಭು ಮತ್ತು ಎಳೆನೀರು ವ್ಯಾಪಾರಿ ಶಿವರಾಜನನ್ನು ದಸ್ತಗೀರ ಮಾಡಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಎಸ್ಪಿ ಡಾ. ಅಂಶುಕುಮಾರ, ಅಡಿಶನಲ್ ಎಸ್ಪಿ ಗೋಪಾಲ್, ಡಿವೈಎಸ್‌ಪಿ ಎಂ.ಎಸ್. ಪಾಟೀಲ್‌ ಅವರ ಮಾರ್ಗದರ್ಶನದಲ್ಲಿ ಬ್ಯಾಡಗಿ ಸಿಪಿಐ ಮಹಾಂತೇಶ ಲಂಬಿ, ಪಿಎಸ್‌ಐ ಮಂಜುನಾಥ ಕುಪ್ಪೇಲೂರ ನೇತೃತ್ವದಲ್ಲಿ ಸಿಬ್ಬಂದಿ ಬಸವರಾಜ ಅಂಜುಟಗಿ, ಅಶೋಕ ಬಾರ್ಕಿ, ಲೋಕೇಶ ಲಮಾಣಿ, ಮೃತ್ಯುಂಜಯ ಸಂಕಣ್ಣನವರ, ರಾಜು ಗೋಂದೇರ, ನೇತ್ರಾವತಿ, ಲಕ್ಷ್ಮೀ ಹುಣಸಿಮರದ, ಮಾರುತಿ ಹಾಲಭಾವಿ, ಮಂಜು ಬಾಳಿಕಾಯಿ, ಸತೀಶ ಮಾರುಕಟ್ಟೆ, ಹನುಮಂತ ಸುಂಕದ, ಮಾರುತಿ ಏಶಪ್ಪನವರ, ದೊಡ್ಡಮುಲ್ಲಾ, ಮಂಜು ಮುಚ್ಚಟ್ಟಿ, ಗಣೇಶ ಬೇವಿನಹಳ್ಳಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.