ಸಾರಾಂಶ
ಅರಣ್ಯ ಪ್ರದೇಶ ನಶಿಸುತ್ತಿರುವ ಕಾರಣ ವನ್ಯಜೀವಿಗಳು ಆಹಾರ, ನೀರು ಅರಸಿ ನಾಡಿಗೆ ಬರುವುದು ಹೊಸತೇನಲ್ಲ. ಆದರೆ, ಅವುಗಳು ಹಾಗೆ ಬಂದಾಗ ಸಾವಿಗೀಡಾಗುವುದು ದುರಂತ. ಅಂತೆಯೇ ಸೊರಬ ತಾಲೂಕಿನ ಅಂದವಳ್ಳಿ ಗ್ರಾಮದಲ್ಲಿ ನೀರು ಅರಸಿ ಬಂದ ಕಾಡುಕೋಣವೊಂದು ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದೆ.
ಸೊರಬ: ಜಮೀನಿನ ಕೃಷಿ ಹೊಂಡದಲ್ಲಿ ಕಾಡುಕೋಣ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಅಂದವಳ್ಳಿ ಗ್ರಾಮದಲ್ಲಿ ನಡೆದಿದೆ.
ಅಂದವಳ್ಳಿ ಗ್ರಾಮದ ಸರ್ವೆ ನಂ.25ರ ರೇಣುಕಮ್ಮ ಕೃಷ್ಣಪ್ಪ ಎಂಬವರ ಜಮೀನಿನ ಕೃಷಿ ಹೊಂಡದಲ್ಲಿ ಗುರುವಾರ ರಾತ್ರಿ ನೀರು ಕುಡಿಯಲು ಬಂದ ಸಂದರ್ಭದಲ್ಲಿ ಈ ಕಾಡುಕೋಣ ಬಿದ್ದು ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ. ಈ ಕಾಡುಕೋಣಕ್ಕೆ ಸುಮಾರು 6 ವರ್ಷ ಇರಬಹುದು. ಒಂದೂವರೆ ಟನ್ ತೂಕವಿದೆ. ಕೃಷಿ ಚಟುವಟಿಕೆಗಾಗಿ ನೀರು ಸಂಗ್ರಹಿಸಿದ್ದ ಕೃಷಿ ಹೊಂಡದಲ್ಲಿ 10 ಅಡಿ ಆಳದಷ್ಟು ನೀರು ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶುಕ್ರವಾರ ಬೆಳಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಬಳಿಕ ಅರಣ್ಯ ಸಿಬ್ಬಂದಿ ಜೆಸಿಬಿ ಯಂತ್ರದ ಮೂಲಕ ಕಾಡುಕೋಣ ಕಳೇಬರವನ್ನು ಕೃಷಿ ಹೊಂಡದಿಂದ ಹೊರತೆಗೆದರು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂದವಳ್ಳಿ ಕಾಡಿನಲ್ಲಿ ಹೂತುಹಾಕಲಾಯಿತು.
ಈ ಸಂದರ್ಭದಲ್ಲಿ ಡಿಸಿಎಫ್ ಸಂತೋಷ್ ಕೆಂಚಪ್ಪ, ಎಸಿಎಫ್ ರವಿಕುಮಾರ್, ವಲಯ ಅರಣ್ಯ ಅಧಿಕಾರಿ ಜಾವಿದ್ ಭಾಷಾ ಅಂಗಡಿ, ಉಪ ವಲಯದ ಅರಣ್ಯ ಅಧಿಕಾರಿ ಶರಣಪ್ಪ, ಅರಣ್ಯ ರಕ್ಷಕ ಹರೀಶ್, ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಗದೀಶ್, ಪಿಡಿಒ ನಾರಾಯಣಮೂರ್ತಿ, ಗ್ರಾಮ ಲೆಕ್ಕಿಗ ರಮೇಶ್, ಕರಿಬಸಪ್ಪ, ಗಿರಿಗೌಡ ಮೊದಲಾದವರಿದ್ದರು.- - -
-05ಕೆಪಿಸೊರಬ02:ಅಂದವಳ್ಳಿ ಜಮೀನಿನ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಕಾಡುಕೋಣ.