ಸಕಲೇಶಪುರದ ಹಾಡ್ಯ ಸಮೀಪ ಸೀಗೆ ಹೆಸರಿನ ಕಾಡಾನೆ ಸೆರೆ

| Published : Apr 22 2024, 02:03 AM IST

ಸಕಲೇಶಪುರದ ಹಾಡ್ಯ ಸಮೀಪ ಸೀಗೆ ಹೆಸರಿನ ಕಾಡಾನೆ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾನವ ಹಂತಕ ಸೀಗೆ ಹೆಸರಿನ ಕಾಡಾನೆ ಸಕಲೇಶಪುರ ತಾಲೂಕಿನ ಹಾಡ್ಯ ಗ್ರಾಮದ ಹೊರವಲಯದ ಅರಣ್ಯದಲ್ಲಿ ಇರುವುದನ್ನು ಪತ್ತೆಹಚ್ಚಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಬೇಲೂರು ತಾಲೂಕಿನಿಂದ ಸಾಕಾನೆಗಳನ್ನು ಕರೆಸಿ ಸೆರೆ ಕಾರ್ಯಾಚರಣೆ ಮಾಡಿ ಭಾನುವಾರ ಸೆರೆ ಹಿಡಿದಿದ್ದಾರೆ.

ಯಶಸ್ವಿಯಾದ ಅರಣ್ಯ ಇಲಾಖೆ ಎರಡನೇ ದಿನದ ಕಾರ್ಯಾಚರಣೆ । ಸಾಕಾನೆಗಳ ಮೂಲಕ ಸೆರೆಯ ತಂತ್ರ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಎರಡನೇ ದಿನದ ಕಾರ್ಯಚರಣೆಯಲ್ಲಿ ಸೀಗೆ ಹೆಸರಿನ ಕಾಡಾನೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿದೆ.

ಮಾನವ ಹಂತಕ ಸೀಗೆ ಹೆಸರಿನ ಕಾಡಾನೆ ತಾಲೂಕಿನ ಹಾಡ್ಯ ಗ್ರಾಮದ ಹೊರವಲಯದ ಅರಣ್ಯದಲ್ಲಿ ಇರುವುದನ್ನು ಪತ್ತೆಹಚ್ಚಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಬೇಲೂರು ತಾಲೂಕಿನಿಂದ ಸಾಕಾನೆಗಳನ್ನು ಕರೆಸಿ ಸೆರೆ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ, ದಟ್ಟಡವಿಯಲ್ಲಿದ್ದ ಕಾಡಾನೆ ಸೆರೆ ಅಸಾದ್ಯ ಎಂಬ ಕಾರಣಕ್ಕೆ ಶನಿವಾರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಭಾನುವಾರ ಮತ್ತೆ ಕಾರ್ಯಾಚರಣೆ ಆರಂಭವಾಗುವ ಮುನ್ನ ಸೀಗೆ ಆನೆ ತಾಲೂಕಿನ ನಿಡಗೆರೆ ಗ್ರಾಮದ ಸಮಾಜಿಕ ಅರಣ್ಯದಲ್ಲಿ ಬೀಡು ಬಿಟ್ಟಿರುವುದನ್ನು ಪತ್ತೆ ಹಚ್ಚಿ ಬೇಲೂರು ತಾಲೂಕಿನ ಬಿಕ್ಕೂಡು ಗ್ರಾಮ ಸಮೀಪ ನಿರ್ಮಾಣ ಮಾಡಿರುವ ತಾತ್ಕಾಲಿಕ ಸಾಕಾನೆ ಶಿಬಿರದಿಂದ ಮುಂಜಾನೆಯೆ ತಾಲೂಕಿನ ನಿಡಗೆರೆ ಗ್ರಾಮಕ್ಕೆ ಕರೆತರಲಾಯಿತು.

ಅಭಿಮನ್ಯು ನೇತೃತ್ವದ ಒಟ್ಟು ಏಳು ಆನೆಗಳು ೧೧.೩೦ಕ್ಕೆ ಅರಣ್ಯ ಪ್ರವೇಶಿಸಿದ್ದು ೧೨.೪೫ಕ್ಕೆ ಸೀಗೆ ಕಾಡಾನೆಗೆ ಆರವಳಿಕೆ ಚುಚ್ಚುಮದ್ದು ಹಾರಿಸಲಾಯಿತು. ಈ ವೇಳೆ ಅಲ್ಲಿಂದ ಕಿ.ಮೀ.ಗಳ ದೂರ ಓಡಿ ಅಸ್ಪಸ್ಥಗೊಂಡು ನೆಲಕ್ಕೆ ಉರುಳಿದ ಸೀಗೆ ಕಾಡಾನೆಗೆ ನೀರು ಹಾಕಿ ಉಪಚರಿಸಿದ ನಂತರ ಕಬ್ಬಿಣದ ಸರಪಳಿ ಹಾಗೂ ಹಗ್ಗದಿಂದ ಬಂಧಿಸಲಾಯಿತು. ಬಳಿಕ ಕೊಡ್ಲಿಪೇಟೆ-ಸಕಲೇಶಪುರ ಮುಖ್ಯ ರಸ್ತೆಗೆ ತಂದು ಸಂಜೆ ನಾಲ್ಕು ಗಂಟೆಯ ವೇಳೆಗೆ ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ದುಬಾರೆ ಅರಣ್ಯಕ್ಕೆ ಕೊಂಡೊಯ್ಯಲಾಯಿತು. ಈ ಕಾರ್ಯಾಚರಣೆಯಲ್ಲಿ ಸಿಸಿಎಪ್ ರವಿಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವರೂಪ್, ಎಸಿಎಫ್ ಮಹದೇವ್, ವಲಯ ಅರಣ್ಯಾಧಿಕಾರಿ ಶಿಲ್ವಾ ನೇತೃತ್ವದಲ್ಲಿ ನೂರಕ್ಕೂ ಅಧಿಕ ಸಿಬ್ಬಂದಿ ಪಾಲ್ಗೊಂಡಿದ್ದರು.

ಕ್ಯಾಮರಾಗಳ ವಶ:

ಕಾಡಾನೆ ಕಾರ್ಯಾಚರಣೆ ಸಮೀಪ ಸಾರ್ವಜನಿಕರ ಪ್ರವೇಶಕ್ಕೆ ಅರಣ್ಯ ಇಲಾಖೆ ನಿರ್ಬಂಧ ಹೇರಿತ್ತು, ಆದರೆ ಅಧಿಕಾರಿಗಳ ಕಣ್ತಪ್ಪಿಸಿ ಕಾರ್ಯಾಚರಣೆ ಚಿತ್ರಿಕರಣದಲ್ಲಿ ತೊಡಗಿದ್ದ ಹುರುಡಿ ವಿಕ್ರಂ ಸೇರಿದಂತೆ ಮತ್ತೊಬ್ಬರ ಕ್ಯಾಮರಾಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ತಾಲೂಕಿನಲ್ಲಿ ಇದುವರೆಗೆ ಸೆರೆಹಿಡಿದ ೩೩ ಕಾಡಾನೆಗಳ ಸೆರೆ ಕಾರ್ಯಾಚರಣೆಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಆದರೆ, ಕಳೆದ ವರ್ಷ ಅರ್ಜುನ ಕಾಡಾನೆ ಸೆರೆಯ ವೇಳೆ ಮುನ್ನೆಚ್ಚರಿಕೆ ಇಲ್ಲದೆ ನಡೆದ ಕಾರ್ಯಾಚರಣೆಯಲ್ಲಿ ಅರ್ಜುನ ಎಂಬ ಅಂಬಾರಿ ಆನೆ ಮತ್ತೊಂದು ಕಾಡಾನೆ ದಾಳಿಗೆ ಬಲಿಯಾಗಿತ್ತು. ಈ ವೇಳೆ ಸಾರ್ವಜನಿಕರು ಮಾಡಿದ ಚಿತ್ರೀಕರಣದಿಂದ ಕಾರ್ಯಾಚರಣೆ ನಡೆದ ದೃಶ್ಯ ಹಾಗೂ ಅರಣ್ಯ ಇಲಾಖೆ ತೊರಿದ ನಿರ್ಲಕ್ಷ್ಯ ಜಗಜ್ಜಾಹೀರಾಗಿತ್ತು. ಇದರಿಂದ ಎಚ್ಚೆತ್ತಿರುವ ಅರಣ್ಯ ಇಲಾಖೆ ಸೆರೆ ಕಾರ್ಯಾಚರಣೆ ವೀಕ್ಷಿಸಲು ಹಾಗೂ ಚಿತ್ರಿಕರಣ ನಡೆಸಲು ಸಾರ್ವಜನಿಕರಿಗೆ ಅವಕಾಶ ನಿರಾಕರಿಸಿದೆ.

ಸಕಲೇಶಪುರ ತಾಲೂಕಿನ ನಿಡಿಗೆರೆ ಗ್ರಾಮದ ಹೊರವಲಯದಲ್ಲಿ ಸೀಗೆ ಹೆಸರಿನ ಕಾಡಾನೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆಹಿಡಿಯಿತು.