ಸಾರಾಂಶ
ಉಪ್ಪಿನಂಗಡಿ: ನೆಕ್ಕಿಲಾಡಿ ಗ್ರಾಮದ ದರ್ಬೆ ನಿಗರ್ ಗುಂಡಿ ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಶುಕ್ರವಾರ ಕಾಣಿಸಿದ್ದ ೨ ಕಾಡಾನೆಗಳು ರಾತ್ರಿ ವೇಳೆ ಜನವಸತಿ ಪ್ರದೇಶದತ್ತ ಬಂದು ಶನಿವಾರ ಮಧ್ಯಾಹ್ನದ ಒಳಗಾಗಿ ಬಿಳಿಯೂರು ಪರಿಸರದಲ್ಲಿ ನೇತ್ರಾವತಿ ನದಿಗಿಳಿದು ನದಿಯಲ್ಲಿಯೇ ಒಂದಷ್ಟು ಸಮಯ ವಿರಮಿಸಿ, ಬೆಳ್ತಂಗಡಿ ತಾಲೂಕಿನ ಬರ‍್ಯ ಗ್ರಾಮದ ಸುರ್ಯ ಪರಿಸರದ ತೋಟದಲ್ಲಿ ಠಿಕಾಣಿ ಹೂಡಿದೆ. ಅರಣ್ಯ ಇಲಾಖಾಧಿಕಾರಿಗಳು ಆನೆಗಳು ಕಾಡಿನೊಳಗೆ ಪ್ರವೇಶಿಸುವಂತೆ ತಂತ್ರೋಪಾಯಗಳನ್ನು ಅನುಷ್ಠಾನಿಸುತ್ತಿದ್ದಾರೆ.ಶಾಂತಿಗೋಡು ಪರಿಸರದಲ್ಲಿ ಇದ್ದ ಗಂಡು ಮತ್ತು ಹೆಣ್ಣು ಆನೆಗಳೆರಡು ಕಠಾರ ಮೂಲಕ ನೆಕ್ಕಿಲಾಡಿಗೆ ಬಂದಿತ್ತು. ಶುಕ್ರವಾರ ಸಂಜೆಯಿಂದ ತಡ ರಾತ್ರಿ ತನಕ ಕುಮಾರಧಾರಾ ನದಿಯಲ್ಲಿ ಇದ್ದು, ನೆಕ್ಕಿಲಾಡಿಯ ಕೊಳಕೆ ರಸ್ತೆಯಾಗಿ ಬಂದು ಆದರ್ಶನಗರದಲ್ಲಿ ಉಪ್ಪಿನಂಗಡಿ-ಪುತ್ತೂರು ರಸ್ತೆಯನ್ನು ದಾಟಿ ತೋಟಗಳ ಮೂಲಕ ಬೊಳ್ಳಾರು ತನಕ ಸಾಗಿ ಅಲ್ಲಿ ಮಾರುತಿ ಶೋ ರೂಂ ಎದುರಿನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಬಿಳಿಯೂರು ಹೀಗೆ ಸಾಗಿ ಸಂಜೆಯ ಹೊತ್ತಿನಲ್ಲಿ ಬರ‍್ಯ ಗ್ರಾಮದ ಸುರ್ಯ ಎಂಬಲ್ಲಿ ತೋಟಕ್ಕೆ ಪ್ರವೇಶಿಸಿದೆ. ಹಸಿವು ನೀಗಲು ಆಹಾರಕ್ಕಾಗಿ ಬಾಳೆಗಿಡಗಳನ್ನು ತಿಂದಿರುವುದು ಬಿಟ್ಟರೆ, ಯಾರಿಗೂ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ ಎಂದು ಪುತ್ತೂರು ವಲಯ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಕಾಂತರಾಜು ತಿಳಿಸಿದ್ದಾರೆ.