ನಾಳೆಯಿಂದ ಕಪ್ಪಡಿ ಕ್ಷೇತ್ರದ ವಾರ್ಷಿಕ ಮಹಾಜಾತ್ರೆಗೆ ಚಾಲನೆ

| Published : Mar 07 2024, 01:55 AM IST

ನಾಳೆಯಿಂದ ಕಪ್ಪಡಿ ಕ್ಷೇತ್ರದ ವಾರ್ಷಿಕ ಮಹಾಜಾತ್ರೆಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕರ್ನಾಟಕದಲ್ಲಿ ಕಪ್ಪಡಿ ಕ್ಷೇತ್ರ ಜಾನಪದ ಕಾವ್ಯ ಹಾಗೂ ಧಾರ್ಮಿಕ ಆಚರಣೆಯ ಪ್ರಭಾವಿ ಕೇಂದ್ರವಾಗಿ ಪ್ರಸಿದ್ಧಿ ಹೊಂದಿದ್ದು ಮೈಸೂರಿನಿಂದ 50 ಕಿ.ಮೀ ಮತ್ತು ಕೆ.ಆರ್.ನಗರದಿಂದ 8 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರ ಕಾವೇರಿ ನದಿ ದಡದಲ್ಲಿದೆ. ಕಪ್ಪಡಿ ಜಾತ್ರೆ ಈ ಕ್ಷೇತ್ರದ ದೊಡ್ಡ ಉತ್ಸವ. ಪ್ರತಿ ವರ್ಷ ಮಹಾಶಿವರಾತ್ರಿಯಂದು ಜಾತ್ರೆ ಆರಂಭವಾಗಲಿದ್ದು, ಯುಗಾದಿ ಹಬ್ಬದವರೆಗೂ ಒಂದು ತಿಂಗಳ ಕಾಲ ನಡೆಯಲಿದೆ. ಇಲ್ಲಿ ನಡೆಯುವ ಜಾತ್ರೆಗೆ ಕೇರಳ ರಾಜ್ಯದ ಗಡಿಭಾಗ ಸೇರಿದಂತೆ ಕೊಡಗು, ಚಾಮರಾಜನಗರ, ಮಂಡ್ಯ ಹಾಸನ ಮತ್ತು ಉತ್ತರ ಕರ್ನಾಟಕದ ನಾನಾ ಭಾಗಗಳಿಂದಲೂ ಭಕ್ತಾದಿಗಳು ಹರಿದು ಬರುತ್ತಾರೆ.

- ಧರ್ಮ, ಸಮುದಾಯದ ಭೇದವಿಲ್ಲದೆ ಕಪ್ಪಡಿಗೆ ಬಂದು ಸತ್ಯ ಮಾಡು ಎನ್ನುವುದು ವಾಡಿಕೆಕುಪ್ಪೆ ಮಹದೇವಸ್ವಾಮಿ

-------

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ದಕ್ಷಿಣ ಕರ್ನಾಟಕ, ಕೇರಳ ರಾಜ್ಯದ ಗಡಿಭಾಗ ಸೇರಿದಂತೆ ಎಲ್ಲೆಡೆ ಸತ್ಯ ಮತ್ತು ನಿಷ್ಠೆಗೆ ಹೆಸರಾದ ಕಪ್ಪಡಿ ಕ್ಷೇತ್ರದ ವಾರ್ಷಿಕ ಮಹಾ ಜಾತ್ರೆ ಮಾ. 8 ರಿಂದದ ಏ, 4 ರವರೆಗೆ ನಡೆಯಲಿದೆ.

ಯಾವುದೇ ರೀತಿಯ ಘರ್ಷಣೆ, ಕಲಹ, ಒಡಕು ಮತ್ತು ಪರಸ್ಪರ ಭಿನ್ನಾಭಿಪ್ರಾಯಗಳು ಕಂಡು ಬಂದರೆ ಇಂದಿಗೂ ಯಾವುದೇ ಕುಲ, ಜಾತಿ, ಧರ್ಮ, ಸಮುದಾಯದ ಭೇದವಿಲ್ಲದೆ ಕಪ್ಪಡಿಗೆ ಬಂದು ಸತ್ಯ ಮಾಡು ಎನ್ನುವುದು ವಾಡಿಕೆ.

ಕೋರ್ಟು, ಕಚೇರಿ, ಪೊಲೀಸ್ ಠಾಣೆಗಳಲ್ಲಿ ಇತ್ಯರ್ಥವಾಗದ ಹಲವು ಪ್ರಕರಣ, ವ್ಯಾಜ್ಯಗಳನ್ನು ಈ ಕ್ಷೇತ್ರಕ್ಕೆ ನಂಬಿಕೆಯಿಂದ ಬಂದ ಭಕ್ತರು ಬಗೆಹರಿಸಿಕೊಂಡಿರುವ ಉದಾಹರಣೆಗಳು ನೂರಾರಿವೆ.

ದಕ್ಷಿಣ ಕರ್ನಾಟಕದಲ್ಲಿ ಕಪ್ಪಡಿ ಕ್ಷೇತ್ರ ಜಾನಪದ ಕಾವ್ಯ ಹಾಗೂ ಧಾರ್ಮಿಕ ಆಚರಣೆಯ ಪ್ರಭಾವಿ ಕೇಂದ್ರವಾಗಿ ಪ್ರಸಿದ್ಧಿ ಹೊಂದಿದ್ದು ಮೈಸೂರಿನಿಂದ 50 ಕಿ.ಮೀ ಮತ್ತು ಕೆ.ಆರ್.ನಗರದಿಂದ 8 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರ ಕಾವೇರಿ ನದಿ ದಡದಲ್ಲಿದೆ.

ಕಪ್ಪಡಿ ಜಾತ್ರೆ ಈ ಕ್ಷೇತ್ರದ ದೊಡ್ಡ ಉತ್ಸವ. ಪ್ರತಿ ವರ್ಷ ಮಹಾಶಿವರಾತ್ರಿಯಂದು ಜಾತ್ರೆ ಆರಂಭವಾಗಲಿದ್ದು, ಯುಗಾದಿ ಹಬ್ಬದವರೆಗೂ ಒಂದು ತಿಂಗಳ ಕಾಲ ನಡೆಯಲಿದೆ. ಇಲ್ಲಿ ನಡೆಯುವ ಜಾತ್ರೆಗೆ ಕೇರಳ ರಾಜ್ಯದ ಗಡಿಭಾಗ ಸೇರಿದಂತೆ ಕೊಡಗು, ಚಾಮರಾಜನಗರ, ಮಂಡ್ಯ ಹಾಸನ ಮತ್ತು ಉತ್ತರ ಕರ್ನಾಟಕದ ನಾನಾ ಭಾಗಗಳಿಂದಲೂ ಭಕ್ತಾದಿಗಳು ಹರಿದು ಬರುತ್ತಾರೆ.

ಕ್ಷೇತ್ರದಲ್ಲಿ ಮೂರ್ತಿಯೇ ಇಲ್ಲ

ಇಲ್ಲಿ ಯಾವುದೇ ರೀತಿಯ ಮೂರ್ತಿ, ವಿಗ್ರಹ ಇರುವುದಿಲ್ಲ. ಇಲ್ಲಿರುವ ಉರಿಗಣ್ಣು ರಾಚಪ್ಪಾಜಿಯವರ ಗದ್ದುಗೆಯೇ ಸಮಸ್ತ ಪೂಜೆಯ ಕೇಂದ್ರಬಿಂದುವಾಗಿದ್ದು, ಪೂಜೆ, ಪುನಸ್ಕಾರಗಳು ನಡೆಯುತ್ತವಲ್ಲದೆ ತೆಂಗಿನಕಾಯಿ ಒಡೆಯುವುದಿಲ್ಲ ಹಾಗೂ ಭಕ್ತರಿಗೂ ಹಿಂದಿರುಗಿಸುವುದಿಲ್ಲ. ಇದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಹುಣ್ಣಿಮೆಯ ಬಳಿಕ ಭಕ್ತರ ಜಾತ್ರೆಯೇ ಇಲ್ಲಿ ನಡೆಯುತ್ತದೆ.

ಧರೆಗೆ ದೊಡ್ಡವರೆಂದೇ ಹೆಸರುವಾಸಿಯಾಗಿರುವ ರಾಚಪ್ಪಾಜಿ, ಚನ್ನಾಜಮ್ಮ ಆ ಕಾಲದ ಆರ್ಥಿಕ, ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿದ್ದವರು. ಮೈಸೂರು ಅರಸರಿಂದ ಪೂಜೆ ಸ್ವೀಕರಿಸಿ ಎಡತೊರೆ, ಚಂದಗಾಲು ಮಾರ್ಗವಾಗಿ ಸಾಗಿ ದಟ್ಟ ಕಾಡಿನಿಂದ ಆವೃತ್ತವಾದ ಕಪ್ಪಡಿ ಕ್ಷೇತ್ರದಲ್ಲಿ ನೆಲೆ ನಿಂತರೆಂದು ಇತಿಹಾಸ ತಿಳಿಸುತ್ತದೆ.

ಉರಿ ಗದ್ದುಗೆ ಮಹಿಮೆ ಅಪಾರ- ಒಮ್ಮೆ ಎಡತೊರೆಯ ಉಪ್ಪಲಗಶೆಟ್ಟಿ ಎಂಬಾತನ ಕನಸಿನಲ್ಲಿ ಕಾಣಿಸಿಕೊಂಡ ರಾಚಪ್ಪಾಜಿಯವರು ತಮಗೆ ಶಿವಯೋಗ ಮಂದಿರವನ್ನು ನಿರ್ಮಾಣ ಮಾಡಿಕೊಡುವಂತೆ ಪ್ರೇರಣೆ ನೀಡಿದರು. ಅದರಂತೆ ಗುರುವಿನೆಡೆಗೆ ಜಲಬಾವಿಯನ್ನು ತೋಡಿ ನಂದಾದೀವಿಗೆ ಗೂಡನ್ನು ಕೊರೆದು ವರವೊಂದನ್ನು ಬೇಡುತ್ತಾನೆ.

ಉಪ್ಪಲಗಶೆಟ್ಟಿಯ ಬಯಕೆಯಂತೆ ಮರುದಿನ ಉರಿ ಗದ್ದುಗೆಯ ಮೇಲೆ ಇರುವ ರುಮಾಲು ಪಡೆಯಬೇಕೆಂದು ಆರತಿ ಇಡುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣ ಹೆಸರಿನಂತೆಯೇ ಬಹಳ ಶಕ್ತಿಶಾಲಿ, ತೀಕ್ಷ್ಣ, ಉರಿ ಗದ್ದುಗೆ. ಈಗಲೂ ಈ ಗದ್ದುಗೆ ಮೇಲಕ್ಕೆ ಜೋಳವನ್ನು ಎಸೆದರೆ ಪುರಿಯಾಗಿ ಸಿಡಿಯುತ್ತವೆ ಎಂಬ ನಂಬಿಕೆ ಜನರಲ್ಲಿ ದೃಢವಾಗಿದೆ.

ಕೊನೆಗೆ ಈ ನರರ ಹಂಗು ತಮಗಿನ್ನು ಬೇಡವೆಂದು ರಾಚಪ್ಪಾಜಿ ತಂಗಿ ಚನ್ನಾಜಮ್ಮನವರೊಡನೆ ಬಾವಿಗಿಳಿದು ಶಾಶ್ವತ ಶಿವಯೋಗದಲ್ಲಿ ನೆಲೆಸಿದರೆನ್ನುವುದು ಪುರಾಣೈತಿಹ್ಯ.

ಅಂದಿನಿಂದ ಕಪ್ಪಡಿಯಲ್ಲಿ ಮೈಸೂರು ಅರಸರಿಂದ ಪೂಜಾ ಕಾರ್ಯಗಳು ನಡೆದು ಬಂದಿವೆ. ನೀಲಗಾರರು, ಕಂಸಾಳೆಯವರು ಹಾಡುವ ಮಂಟೇಸ್ವಾಮಿ ಕಾವ್ಯದಲ್ಲಿ ಕಪ್ಪಡಿ ರಾಚಪ್ಪಾಜಿಯ ಮಹಿಮೆ ಮತ್ತು ಪವಾಡಗಳ ದರ್ಶನವಾಗುತ್ತದೆ.

ಪ್ರತೀ ವರ್ಷ ಶಿವರಾತ್ರಿಯಿಂದ ಯುಗಾದಿಯವರೆಗೆ ನಡೆಯುವ ಕಪ್ಪಡಿ ಜಾತ್ರೆಯಲ್ಲಿ ಭಕ್ತಾಧಿಗಳು ಪ್ರಾಣಿಬಲಿ ನೀಡಿ, ಪೂಜೆ ಸಲ್ಲಿಸಿ, ಹರಕೆ ತೀರಿಸಿ ಭೋಜನ ಸ್ವೀಕರಿಸುವುದು ತಲೆತಲಾಂತರದಿಂದ ನಡೆದುಕೊಂಡು ಬಂದಿದೆ.

ಪರಂಪರೆಯಂತೆ ಮಳವಳ್ಳಿ ಹಾಗೂ ಬೊಪ್ಪೇಗೌಡನಪುರದ ಗುರು ಮನೆತನದವರು ಪ್ರತಿ ವರ್ಷ ಸರದಿಯಂತೆ ಜಾತ್ರೆ ಪ್ರಾರಂಭವಾದಾಗಿನಿಂದ ಮುಗಿಯುವವರೆಗೂ ಇಲ್ಲಿಯೇ ಇದ್ದು, ಪೂಜಾ ಕಾರ್ಯಗಳನ್ನು ನಡೆಸಿಕೊಡುತ್ತಾರೆ. ನಿತ್ಯವೂ ಎರಡು ಬಾರಿ ಗದ್ದುಗೆಗೆ ಪೂಜೆ ಸಲ್ಲಿಸುತ್ತಾರೆ.