ಸಾರಾಂಶ
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಬಡ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಲೇ ಇದ್ದಾರೆ. ಬರಗಾಲದಿಂದ ತಾಂಡಾಗಳಲ್ಲಿನ ಕುಟುಂಬಗಳು ಹೆಚ್ಚಿನ ಪ್ರಮಾಣದಲ್ಲಿ ಗುಳೆ ಹೋಗಿದ್ದರಿಂದ ಅವರೊಂದಿಗೆ ಮಕ್ಕಳೂ ಹೋಗಿದ್ದಾರೆ. ಇದರಿಂದ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕಿದ್ದ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ.
ಮಕ್ಕಳನ್ನು ನೋಡಿಕೊಳ್ಳುವವರಿಲ್ಲ ಎಂದು ಜೊತೆಗೆ ಕರೆದೊಯ್ದರೆ, ಹೈಸ್ಕೂಲ್ ವಿದ್ಯಾರ್ಥಿಗಳು ಕೆಲಸ ಮಾಡುತ್ತಾರೆ ಎಂದು ಶಾಲೆ ಬಿಡಿಸಿ ಜೊತೆಗೆ ಕರೆದೊಯ್ಯಲಾಗುತ್ತಿದೆ. ಸ್ಥಳೀಯವಾಗಿ ಉಳಿದಿರುವ ಮಕ್ಕಳಿಗೆ ಜಮೀನು ಹಾಗೂ ಗಾರೆ ಕೆಲಸ ಸೇರಿದಂತೆ ಕೂಲಿ ಕೆಲಸಕ್ಕೆ ಹೋಗುವುದು, ದನ ಕಾಯುವುದು ಕಾಯಕವಾಗಿದೆ. ಇದರಿಂದಾಗಿ ಮಕ್ಕಳ ಶೈಕ್ಷಣಿಕ ಸ್ಥಿತಿಯ ಮೇಲೆ ಹೊಡೆತ ಬಿದ್ದಿದ್ದು, ಆತಂಕಕ್ಕೆ ಕಾರಣವಾಗಿದೆ.ಕನ್ನಡಪ್ರಭ ರಿಯಾಲಿಟಿ ಚೆಕ್:
3ರಿಂದ 6 ವರ್ಷದೊಳಗಿನ ಮಕ್ಕಳು ಅಂಗನವಾಡಿಗೆ ಬರಬೇಕು. ಆದರೆ ತಾಂಡಾಗಳಲ್ಲಿ ಗೂಳೆ ಹೋಗುವುದರಿಂದ ಇಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲವೆಂದು ಪಾಲಕರು ತಮ್ಮ ಮಕ್ಕಳನ್ನು ಜೊತೆಗೆ ಕೊರೆದೊಯ್ಯುತ್ತಿದ್ದಾರೆ. ಹೀಗಾಗಿ ಶೇ.50 ಕ್ಕಿಂತಲೂ ಹೆಚ್ಚಿನ ಕಂದಮ್ಮಗಳು ಮೊದಲ ಹಂತದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಕನ್ನಡಪ್ರಭ ರಿಯಾಲಿಟಿ ಚೆಕ್ ಮಾಡಿದಾಗ ತಾಂಡಾ ಒಂದರಲ್ಲಿನ ಅಂಗನವಾಡಿಯಲ್ಲಿ 60 ಮಕ್ಕಳ ಹಾಜರಾತಿ ಇದೆ.ಜೂನ್-ಜುಲೈನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಅಂಗನವಾಡಿಗೆ ಬರುತ್ತಿದ್ದರು. ಬಳಿಕ ಬಹಳಷ್ಟು ಕುಟುಂಬಗಳು ಗುಳೆ ಹೋಗಿರುವುದರಿಂದ ನವೆಂಬರ್-ಡಿಸೆಂಬರ್‌ನಿಂದ ಅರ್ಧಕ್ಕರ್ಧ ಮಕ್ಕಳು ಗೈರಾಗಿರುವುದು ಕಂಡುಬಂದಿದೆ. ನಿತ್ಯ ಕೇವಲ 25ರಿಂದ 28 ಮಕ್ಕಳು ಮಾತ್ರ ಬರುತ್ತಿದ್ದಾರೆ. ಇದು ಅಂಗನವಾಡಿಗಳಲ್ಲಿನ ಕಥೆ. ಪ್ರೌಢಶಾಲೆಗೆ ಭೇಟಿ ನೀಡಿದಾಗ ಮತ್ತೊಂದು ಸಮಸ್ಯೆ ವಿದ್ಯಾರ್ಥಿಗಳಿಗೆ ಎದುರಾಗಿತ್ತು. ಮಕ್ಕಳು ಹೊಲಮನೆ ಇತರೆ ಕೂಲಿ ಕೆಲಸ ಸೇರಿದಂತೆ ಒಂದಿಷ್ಟು ಕೆಲಸ ಮಾಡುವ ಥರದಲ್ಲಿ ದೊಡ್ಡವರಾದರೆ ಸಾಕು ಪಾಲಕರೇ ಮಕ್ಕಳಿಗೆ ಶಾಲೆಗೆ ಹೋಗದಂತೆ ಕೊಕ್ ಕೊಟ್ಟು ತಮ್ಮೊಂದಿಗೆ ಕೆಲಸಕ್ಕೆ ಕರೆದೊಯ್ಯುತ್ತಿದ್ದಾರೆ. ತಾಂಡಾದ ಸರ್ಕಾರಿ ಶಾಲೆಯಲ್ಲಿ 230 ಮಕ್ಕಳ ಹಾಜರಾತಿ ಇದ್ದು, ಇದೀಗ ಸರಾಸರಿ 170 ರಿಂದ 180 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾತ್ರ ಶಾಲೆಗೆ ಬರುತ್ತಿದ್ದಾರೆ. ಅಂದ್ರೆ ಇಲ್ಲೂ ಪಾಲಕರೊಂದಿಗೆ ಮಕ್ಕಳು ಗುಳೆ ಹೋಗಿದ್ದರಿಂದ ಶೇ.20ರಿಂದ 30ರಷ್ಟು ಮಕ್ಕಳು ಗೈರಾಗಿರುವುದು ಗೊತ್ತಾಗಿದೆ.ದನಕರು ಮೇಯಿಸುತ್ತಿರುವ ಮಕ್ಕಳು:ಬಹುತೇಕ ತಾಂಡಾಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಆಕಳು, ಎಮ್ಮೆ, ಆಡುಗಳನ್ನು ಮೇಯಿಸಲು ಕಳುಹಿಸುವುದು ಸಾಮಾನ್ಯವಾಗಿದೆ. ಬರಗಾಲ ಮತ್ತು ಬಡತನದಿಂದ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾದರೆ, ಅಲ್ಪಸ್ವಲ್ಪ ಜಮೀನಿದ್ದವರು ಮಕ್ಕಳನ್ನು ಶಾಲೆ ಬಿಡಿಸಿ ದನ ಮೇಯಿಸಲು ಕಳಿಸುತ್ತಿರುವುದು ಮಕ್ಕಳಕ್ಕೆ ಭವಿಷ್ಯಕ್ಕೆ ಪೆಟ್ಟು ಬಿದ್ದಂತಾಗುತ್ತಿದೆ.
ಕಳೆದ 10 ವರ್ಷಗಳ ಹಿಂದೆ ಸರ್ವಶಿಕ್ಷಣ ಅಭಿಯಾನ ಯೋಜನೆಯ ಅಡಿಯಲ್ಲಿಋ ಋತುಮಾನ ಶಾಲೆ ಕಾರ್ಯಕ್ರಮ ಇತ್ತು. ಗುಳೆಹೋದ ಕುಟುಂಬಗಳ ಮಕ್ಕಳಿಗೆ ಋತುಮಾನ ಯೋಜನೆ ಅಡಿ ಸರ್ಕಾರಿ ಶಾಲೆಗಳಲ್ಲೇ ವಸತಿ ಕಲ್ಪಿಸಿ ಶಾಲೆಗಳನ್ನೇ ವಸತಿ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತಿತ್ತು. ಉಪಹಾರ, ಊಟದ ವ್ಯವಸ್ಥೆ, ಬಟ್ಟೆ, ಹಾಸಿಗೆಯನ್ನೂ ಕೊಡಲಾಗುತ್ತಿತ್ತು. ಜೊತೆಗೆ ಸ್ವಯಂ ಸೇವಕರನ್ನು ನೇಮಿಸಿ ವಸತಿ ಶಾಲೆಗಳಲ್ಲಿಯೇ ರಾತ್ರಿ ಶಿಕ್ಷಣದ ತರಗತಿಗಳನ್ನೂ ನಡೆಸುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಕೆಲಸ ಆಗುತ್ತಿತ್ತು. ಆದರೆ, ಕೋವಿಡ್ ಬಳಿಕ ಅಂತಹ ಯೋಜನೆಗಳು ನಿಂತುಹೋಗಿವೆ. ಈಗಲಾದರೂ ಸರ್ಕಾರ ಮತ್ತೆ ಋತುಮಾನ ಶಾಲೆ ಆರಂಭಿಸಿದರೆ ಗುಳೆ ಹೋದವರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ.--------
ಕೋಟ್:ನಮ್ಮಲ್ಲಿ ಅನೇಕರು ತಮ್ಮ ಮಕ್ಕಳನ್ನು ಕರೆದುಕೊಂಡು ಗುಳೆ ಹೋಗಿದ್ದಾರೆ. ಅವರಿಗೆಲ್ಲ ಅಕ್ಷರದ ಕೊರತೆ ಎದುರಾಗಿದೆ. ಗುಳೆ ಹೋಗುವ ಕಾರ್ಮಿಕರು ಶಿಕ್ಷಣ ಕಲಿತಿಲ್ಲ. ಬರಗಾಲ ಹಾಗೂ ಬಡತನ ಎಂಬುದು ಅವರ ಮಕ್ಕಳನ್ನೂ ಶಾಲೆ ಕಲಿಯದಂತೆ ಮಾಡಿದೆ. ಸರ್ಕಾರ ಮೊದಲಿನಂತೆ ಶಾಲೆಗಳಲ್ಲಿಯೇ ಊಟದ ವ್ಯವಸ್ಥೆ ಮಾಡಿ, ವಸತಿ ಕಲ್ಪಿಸಿದ್ರೆ ಮಕ್ಕಳು ಮತ್ತೆ ಶಾಲೆಗೆ ಬಂದು ಅಕ್ಷರ ಕಲಿಯಲು ಅನುಕೂಲವಾಗುತ್ತದೆ.
- ಮಹೇಂದ್ರಕುಮಾರ, ತಾಂಡಾ ನಿವಾಸಿ.ಶಾಲೆ ಬಿಟ್ಟ ಮಕ್ಕಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದ್ದು, ಶಾಲೆ ಬಿಟ್ಟು ದನ ಕಾಯುವುದು, ಕೆಲಸಕ್ಕೆ ಹೋಗುವ ಮಕ್ಕಳು ಕಂಡುಬಂದರೆ ಪಾಲಕರ ಮನವೊಲಿಸಿ ಶಾಲೆಗೆ ಕರೆತರಲಾಗುತ್ತಿದೆ. ಸಧ್ಯಕ್ಕೆ ಬಿಸಿಯೂಟ ಯೋಜನೆಯಲ್ಲಿ ಶಾಲಾ ಮಕ್ಕಳಿಗೆ ಊಟದ ವ್ಯವಸ್ಥೆ ಇದೆ. ಬೇಸಿಗೆ ಸಮಯದಲ್ಲಿ ಶಾಲೆಗಳಿಗೆ ರಜೆ ಇದ್ದಾಗಲೂ ಬಿಸಿಯೂಟ ಯೋಜನೆ ಮುಂದುವರಸುವಂತೆ ಸರ್ಕಾರದ ಆದೇಶ ಬಂದಿದೆ. ಎಲ್ಲ ಶಾಲೆಗಳಲ್ಲೂ ಮಕ್ಕಳಿಗೆ ಬಿಸಿಯೂಟ ಕೊಡಲಾಗುವುದು. ಇದು ಬಡ ಕುಟುಂಬಗಳ ಮಕ್ಕಳಿಗೆ ಅನುಕೂಲವಾಗಲಿದೆ.- ಎನ್.ಎಚ್. ನಾಗೂರ, ಡಿಡಿಪಿಐ, ವಿಜಯಪುರ