ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ದೇವರನ್ನು ಬಿಡದೆ ಪ್ರಶ್ನಿಸುತ್ತಿದ್ದ ಅಲ್ಲಮ ವಿಚಾರವಂತನಾಗಿದ್ದ. ದೇವರನ್ನು ಗುಂಡಿ ಗುಂಡಾರಗಳಲ್ಲಿ ಕಾಣಲಿಲ್ಲ. ಬದಲಿಗೆ ಮನಷ್ಯನಲ್ಲಿ ದೇವರನ್ನು ನೋಡಿದ ಎಂದು ಮುರುಘರಾಜೇಂದ್ರ ಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.ಶರಣ ಸಾಹಿತ್ಯ ಪರಿಷತ್ತು, ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆ, ಸಿವಿಜಿ ಪಬ್ಲಿಕೇಷನ್ಸ್ ಜಂಟಿಯಾಗಿ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎಚ್.ಲಿಂಗಪ್ಪನವರ ‘ಬುದ್ದನಂತೆ ಚಿಂತಿಸಿದ ಅಲ್ಲಮ’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿ, ಬಸವಣ್ಣ, ಬುದ್ದ, ಅಲ್ಲಮನಂತೆ ಎಲ್ಲರೂ ವೈಚಾರಿಕತೆಯನ್ನು ಬೆಳೆಸಿಕೊಳ್ಳೋಣ ಎಂದರು.
ಆಧುನಿಕ ಸಂದರ್ಭದ ಈ ವೇಳೆ ನೆತ್ತಿಯ ಹಸಿವು ನೀಗಿಸಲು ಜ್ಞಾನದ ಹಸಿವನ್ನು ತುಂಬಬೇಕಿದೆ. ಪ್ರತಿಯೊಂದನ್ನು ವಿಚಾರ, ವಿಮರ್ಶೆ, ತರ್ಕ ಮಾಡಿ ಪ್ರಶ್ನಿಸುವಂತ ಗುಣ ಬೆಳೆಸಿಕೊಳ್ಳುವಂತೆ ವೈಚಾರಿಕ ಸಂದೇಶವ ಅಲ್ಲಮ ನೀಡಿದ್ದು ಅದನ್ನು ಅನುಸರಿಸುವುದು ಅಗತ್ಯವೆಂದರು.ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಅಧ್ಯಾತ್ಮ ಲೋಕದ ನಕ್ಷತ್ರಗಳಂತಿದ್ದ ಬುದ್ದ, ಅಲ್ಲಮ ಇವರುಗಳ ಪ್ರಭಾವ ಸಮಾಜದ ಮೇಲೆ ದಟ್ಟವಾಗಿ ಹಬ್ಬಿದೆ .ಪ್ರಖರ ವಿಚಾರವಾದಿ, ವೈಚಾರಿಕ ಶಿಖರವಾಗಿದ್ದ ಬುದ್ದನಿಗೆ ಬಹಳಷ್ಟು ಬ್ರಾಹ್ಮಣ ಶಿಷ್ಯಂದಿರಿದ್ದರು. ಹಾಗಾಗಿ ಉತ್ತರ ಭಾರತದಲ್ಲಿ ಬೌದ್ದ ಧರ್ಮ ಹರಡಲು ಸಾಧ್ಯವಾಯಿತು ಎಂದರು.
ರಾಜನಿಂದ ಹಿಡಿದು ಕಟ್ಟ ಕಡೆಯ ಜನಸಾಮಾನ್ಯರು ಬುದ್ದನ ನಿಲುವುಗಳನ್ನು ಅರ್ಥಮಾಡಿಕೊಂಡಿದ್ದರು. ಹನ್ನೆರಡನೆ ಶತಮಾನದ ಬಸವಣ್ಣನವರು ಅನಕ್ಷರಸ್ಥರನ್ನು ತೆಕ್ಕೆಗೆ ತೆಗೆದುಕೊಂಡಿದ್ದರು. ಅಲ್ಲಮ ಪ್ರಭುವಿನಲ್ಲಿ ಘನ ಚಿಂತನೆಯಿತ್ತು. ಬಸವಣ್ಣನ ಮೇಲೆ ಅಲ್ಲಮನ ಪ್ರಭಾವವಿದೆ. ಅಲ್ಲಮನಲ್ಲಿ ಸಂದಿಗ್ದತೆ, ಬೆಡಗಿನ ಭಾಷೆಯಿತ್ತು. ಹೊಸ ರೀತಿಯ ಚಿಂತನೆ ಅವರದಾಗಿತ್ತು ಎಂದು ಹೇಳಿದರು.
ಹಿರಿಯೂರಿನ ಪ್ರೊ.ಎಂ.ಜಿ.ರಂಗಸ್ವಾಮಿ ಮಾತನಾಡಿ, ಕನ್ನಡವನ್ನು ಓದುವವರು, ಬರೆಯುವವರು ಕಡಿಮೆಯಾಗಿರುವುದರಿಂದ ಯುವ ತಲೆಮಾರುಗಳಿಗೆ ಕನ್ನಡವನ್ನು ಮುಟ್ಟಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಹನ್ನೆರಡನೆ ಶತಮಾನದಲ್ಲಿ ರಚನೆಯಾಗಿರುವ ವಚನಗಳು ಇಂದಿನ ಸಮಾಜಕ್ಕೆ ಪ್ರಸ್ತುತ ಎಂದರು.
ಬುದ್ದ ರಾಜತ್ವವನ್ನು ತ್ಯಜಿಸಿ ಸರಳವಾಗಿ ಬದುಕಿ ತ್ಯಾಗಮಯಿಯಾದ. ಅಲ್ಲಮ ಎಲ್ಲವನ್ನು ಬಿಟ್ಟು ನಾಡಿಗೆ ಪ್ರಖರತೆ ಹಂಚಿದ. ಡಾ.ಬಿ.ಆರ್.ಅಂಬೇಡ್ಕರ್, ಗಾಂಧಿ ಇವರುಗಳು ಸರಳವಾಗಿ ಬದುಕಿದ್ದರಿಂದ ಇಂದಿಗೂ ಎಲ್ಲರ ಮನದಲ್ಲಿ ಉಳಿದಿದ್ದಾರೆ. ರಸ ಋಷಿ ಕುವೆಂಪು ಕೂಡ ಮನ್ವಂತರಕ್ಕೆ ಹೆಸರುವಾಸಿಯಾದವರು. ದಲಿತ ವಚನಕಾರರಲ್ಲಿ ಕಾಣಿಸಿಕೊಂಡಿರುವ ದಲಿತರ ಕುರಿತು ಪ್ರೊ.ಹೆಚ್.ಲಿಂಗಪ್ಪನವರು ಪುಸ್ತಕಗಳನ್ನು ಬರೆದಿದ್ದಾರೆ. ಇಳಿಯವಯಸ್ಸಿನಲ್ಲಿಯೂ ಸಾಹಿತ್ಯದ ಬಗ್ಗೆ ಅವರಿಗಿರುವ ಆಸಕ್ತಿ ದೊಡ್ಡದು ಎಂದು ಪ್ರಶಂಶಿಸಿದರು.ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಿ, ಪಂಪ, ರನ್ನ, ಕುಮಾರವ್ಯಾಸ ಇವರುಗಳೆಲ್ಲಾ ಜ್ಞಾನ ಪರಂಪರೆಯನ್ನು ಕಟ್ಟಿಕೊಟ್ಟವರು. ಚರಿತ್ರೆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಿದೆ. ಅಲ್ಲಮನ ದೊಡ್ಡ ಬೆರಗನ್ನು ಅರ್ಥೈಸಿಕೊಳ್ಳುವುದು ಸುಲಭದ ಕೆಲಸವಲ್ಲ.ಅಲ್ಲಮನನ್ನು ಬಸವಣ್ಣ ಅನುಭವ ಮಂಟಪದ ಅಧ್ಯಕ್ಷನಾಗಿ ಮಾಡುತ್ತಾರೆ. ಅಲ್ಲಮನ ಜತೆ ಬುದ್ದನ ಬದುಕು ತಾಳೆಯಾಗುತ್ತದೆ ಎಂದು ನುಡಿದರು.
ಕೃತಿಕಾರ ಪ್ರೊ.ಎಚ್.ಲಿಂಗಪ್ಪ ಮಾತನಾಡಿ, ಇದತುವರೆಗೂ 50 ವಚನಕಾರರ ಕೃತಿಗಳನ್ನು ಬರೆದಿದ್ದೇನೆ. ಬುದ್ದ ಬಸವ, ಅಲ್ಲಮ, ಅಂಬೇಡ್ಕರ್ ಇವರುಗಳು ಕರ್ಮಟ ವ್ಯವಸ್ಥೆಯನ್ನು ತಿರಸ್ಕರಿಸಿದವರು ಎಂದರು.ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಸಮೂಹ ಸಂಸ್ಥೆ ಬಿಇಡಿ. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಆರ್.ಜಯಲಕ್ಷ್ಮಿ, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ವೇದಿಕೆಯಲ್ಲಿದ್ದರು. ಉಪ ಪ್ರಾಚಾರ್ಯ ಶಿವಕುಮಾರ್, ಉಪನ್ಯಾಸಕ ಹನುಮಂತರೆಡ್ಡಿ, ರೈತ ಮುಖಂಡ ದಯಾನಂದ್, ಕವಿ ರಾಜೇಂದ್ರ ಪ್ರಸಾದ್, ರಂಗಸ್ವಾಮಿ, ಕೆ.ಪಿ.ಎಂಗಣೇಶಯ್ಯ, ಯಶೋಧಮ್ಮ ಡಾ.ಬಿ.ರಾಜಶೇಖರಪ್ಪ ಇದ್ದರು.