ಠಾಣೆಯಲ್ಲೇ ಎಎಸ್‌ಐಗೆ ಬಾಟಲಿ ಚುಚ್ಚಿದ ಮಹಿಳೆ!

| Published : Apr 01 2024, 02:24 AM IST / Updated: Apr 01 2024, 05:13 AM IST

ಸಾರಾಂಶ

ಮಹಿಳೆಯೊಬ್ಬರು ಆಸ್ತಿ ವಿವಾದದ ಪ್ರಕರಣದಲ್ಲಿ ತನಗೆ ಸಹಾಯ ಮಾಡಲಿಲ್ಲ ಎಂದು ಆರೋಪಿಸಿ ಕರ್ತವ್ಯ ನಿರತ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ಗೆ (ಎಎಸ್‌ಐ) ಬಾಟಲಿಯಿಂದ ಚುಚ್ಚಿ ಗಾಯಗೊಳಿಸಿರುವ ಘಟನೆ ಗಂಗಮ್ಮನಗುಡಿ ಪೊಲೀಸ್‌ ಠಾಣೆಯಲ್ಲಿ ನಡೆದಿದೆ.

 ಬೆಂಗಳೂರು : ಮಹಿಳೆಯೊಬ್ಬರು ಆಸ್ತಿ ವಿವಾದದ ಪ್ರಕರಣದಲ್ಲಿ ತನಗೆ ಸಹಾಯ ಮಾಡಲಿಲ್ಲ ಎಂದು ಆರೋಪಿಸಿ ಕರ್ತವ್ಯ ನಿರತ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ಗೆ (ಎಎಸ್‌ಐ) ಬಾಟಲಿಯಿಂದ ಚುಚ್ಚಿ ಗಾಯಗೊಳಿಸಿರುವ ಘಟನೆ ಗಂಗಮ್ಮನಗುಡಿ ಪೊಲೀಸ್‌ ಠಾಣೆಯಲ್ಲಿ ನಡೆದಿದೆ.

ಗಂಗಮ್ಮನಗುಡಿ ಪೊಲೀಸ್‌ ಠಾಣೆಯ ಎಎಸ್ಐ ನಾಗರಾಜು ಗಾಯಗೊಂಡವರು. ಘಟನೆಯಲ್ಲಿ ಬಲಗೈಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಬಾಟಲಿಯಿಂದ ಹಲ್ಲೆ ಮಾಡಿದ ಅಬ್ಬಿಗೆರೆ ನಿವಾಸಿ ಅಶ್ವಿನಿ ಎಂಬಾಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದರಿಂದ ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?:

ಅಬ್ಬಿಗೆರೆ ನಿವಾಸಿ ಅಶ್ವಿನಿ ಅವರು ಪತಿಯಿಂದ ಪ್ರತ್ಯೇಕವಾಗಿದ್ದಾರೆ. ಇನ್ನು ಸಹೋದರನ ಜತೆಗೆ ಆಸ್ತಿ ವಿವಾದವಿದೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಅಶ್ವಿನಿ ಕಳೆದ ಹತ್ತು ವರ್ಷಗಳಿಂದ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ತಿ ವಿವಾದದ ಸಂಬಂಧ ದೂರು ನೀಡಲು ಶನಿವಾರ ಬೆಳಗ್ಗೆ 11ರ ಸುಮಾರಿಗೆ ಗಂಗಮ್ಮನಗುಡಿ ಪೊಲೀಸ್‌ ಠಾಣೆಗೆ ಬಂದಿದ್ದಾರೆ. ಈ ವೇಳೆ ದೂರು ಆಲಿಸಿದ ಎಎಸ್‌ಐ ನಾಗರಾಜು ಅವರು ಪರಿಶೀಲಿಸುವುದಾಗಿ ಹೇಳಿದ್ದಾರೆ.

‘ಯಾವಾಗಲೂ ಹೀಗೆ ಹೇಳುವಿರಿ. ನನಗೆ ನ್ಯಾಯ ಸಹಾಯ ಮಾಡುತ್ತಿಲ್ಲ’ ಎಂದು ಕೋಪಗೊಂಡ ಅಶ್ವಿನಿ, ತನ್ನ ಬಳಿಯಿಂದ ಗಾಜಿನ ಬಾಟಲಿಯನ್ನು ಒಡೆದು ಎಎಸ್‌ಐ ನಾಗರಾಜು ಅವರ ಬಲಗೈಗೆ ಚುಚ್ಚಿದ್ದಾರೆ. ಅಷ್ಟರಲ್ಲಿ ಠಾಣಾ ಸಿಬ್ಬಂದಿ ಆಕೆಯನ್ನು ಹಿಡಿದುಕೊಂಡಿದ್ದಾರೆ. ಗಾಯಗೊಂಡಿದ್ದ ಎಎಸ್‌ಐ ನಾಗರಾಜು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಅಶ್ವಿನಿ ಬಗ್ಗೆ ವಿಚಾರಿಸಿದಾಗ ಆಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದು ಕಂಡು ಬಂದಿದೆ. ಕೂಡಲೇ ಆಕೆಯ ಕುಟುಂಬಕ್ಕೆ ಮಾಹಿತಿ ನೀಡಿ ನಿಮ್ಹಾನ್ಸ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.