ಮಹಿಳೆ ಅಬಲೆಯಲ್ಲ ಸಬಲೆ: ಡಾ.ಮೈತ್ರೇಯಿಣಿ

| Published : Mar 13 2024, 02:12 AM IST

ಸಾರಾಂಶ

ಬೆಳಗಾವಿ: ಮಹಿಳೆ ಎಲ್ಲ ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದಾಳೆ. ಪ್ರಸ್ತುತ ಶೋಷಣೆ ತಡೆಯಲು ಎಲ್ಲ ಮಹಿಳೆಯರು ದಿಟ್ಟ ಮನಸ್ಸಿನಿಂದ ಒಗ್ಗಟ್ಟಾಗಿ ಹೋರಾಡಬೇಕು ಎಂದು ಸಾಹಿತಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಿಳೆ ಎಲ್ಲ ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದಾಳೆ. ಪ್ರಸ್ತುತ ಶೋಷಣೆ ತಡೆಯಲು ಎಲ್ಲ ಮಹಿಳೆಯರು ದಿಟ್ಟ ಮನಸ್ಸಿನಿಂದ ಒಗ್ಗಟ್ಟಾಗಿ ಹೋರಾಡಬೇಕು ಎಂದು ಸಾಹಿತಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.

ನಗರದ ಎಚ್‌.ಡಿ.ಕುಮಾರಸ್ವಾಮಿ ಬಡಾವಣೆಯ ಶಿವಾಲಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮಹಿಳೆ ಎಲ್ಲ ಕೆಲಸ ನಿಭಾಯಿಸಲು ಸಶಕ್ತಳಾಗಿದ್ದಾಳೆ. ಮಗಳಾಗಿ, ಸೊಸೆಯಾಗಿ, ತಾಯಿಯಾಗಿ ವಿವಿಧ ಸ್ತರಗಳಲ್ಲಿ ತನ್ನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ ಭಾರತದ ಸಂಸ್ಕೃತಿ ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸರಿಸಮಾನವಾಗಿ ಸೇವೆ ಸಲ್ಲಿಸುತ್ತಿದ್ದಾಳೆ. ತೊಟ್ಟಿಲು ತೂಗುವ ಕೈಗಳು ದೇಶವನ್ನೇ ಆಳಬಲ್ಲದು ಎಂಬುದನ್ನು ನಿರೂಪಿಸಿದ್ದಾಳೆ. ನಾವು ನಮ್ಮ ಹಣ್ತೆನವನ್ನು ನಮ್ಮ ಸಾಮರ್ಥ್ಯದ ಮೇಲೆ ಬದುಕುವುದು ನಮ್ಮ ಕಲೆ. ಮಹಿಳೆಯನ್ನು ದ್ವಿತೀಯ ಲಿಂಗ ಎನ್ನಲಾಗುತ್ತಿದೆ. ಯಾಕೆ ಈ ವ್ಯವಸ್ಥೆ ಹುಟ್ಟಿಕೊಂಡಿತು. ಪ್ರಥಮ ಲಿಂಗ ಯಾವಾಗಲೂ ಪುರುಷನೇ ಆಗಿರುತ್ತಾನೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಹಿಳೆ ತನ್ನ ಹಕ್ಕಿಗಾಗಿ ನಡೆಸಿರುವ ಹೋರಾಟ ಇಂದು ನಿನ್ನೆಯದ್ದಲ್ಲ. ಶತಮಾನಗಳಿಂದ ಉಳಿದುಕೊಂಡು ಬಂದಿದೆ. ನಾವು 21ನೇ ಶತಮಾನದಲ್ಲಿದ್ದೇವೆ. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಮಾನ ಅವಕಾಶ ಪಡೆದುಕೊಳ್ಳುತ್ತಿದ್ದೇವೆ. ಹೆಣ್ಣಾಗಿ ಹುಟ್ಟುವುದು ಅಪರಾಧವಲ್ಲ. ಸಮಾಜದಲ್ಲಿ ಕಾಲ ಕಾಲಕ್ಕೆ ನಮಗೆ ಎದುರಾಗಬಹುದಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ತಾಕತ್ತನ್ನೂ ಮಹಿಳೆಗೆ ಯಾರೂ ಕೊಟ್ಟಿಲ್ಲ. ಪ್ರಕೃತಿ ಕೊಟ್ಟಿದೆ. ತಾಯ್ತನ ಎನ್ನುವುದೇ ತಾಕತ್ತು. ಇದನ್ನು ಪ್ರಕೃತಿ ಹೆಣ್ಣಿಗೆ ಮಾತ್ರ ಕೊಟ್ಟಿದೆ. ಆಧುನಿಕ ಮಹಿಳೆಯರಾದ ನಾವು ಪ್ರಗತಿಪರ ಚಿಂತನೆಯಲ್ಲಿ ತೊಡಗಬೇಕಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸೌಮ್ಯಾ ಕೌಜಲಗಿ, ಶೈಲಜಾ ಕಾಕತಿ, ಡಾ.ಶೀತಲ ಹರಕುಣಿ, ರುಕ್ಮೀಣಿ ಹಂದಿಗುಂದ, ಸುಧಾ ರೊಟ್ಟಿ ಮತ್ತಿತರರು ಉಪಸ್ಥಿತರಿದ್ದರು. ವೀಣಾ ಮಠದ ಮತ್ತು ಜಯಶ್ರೀ ನ್ಯಾಮಗೌಡ ಪ್ರಾರ್ಥಿಸಿದರು. ಶೋಭಾ ಹೊಸಮಠ ಕಾರ್ಯಕ್ರಮ ನಿರೂಪಿಸಿದರು. ಸೀಮಾ ಹಲ್ಲೋಳಿ ವಂದಿಸಿದರು.