ಮಹಿಳೆಯರು ಕುಟುಂಬದ ಆಧಾರ ಸ್ತಂಭವಾಗಿದ್ದು ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಮಹಿಳಾ ಪ್ರಧಾನ ಸಮಾಜ ನಿರ್ಮಾಣ ಆಗಲು ಸಾಧ್ಯ ಎಂದು ಪಿಡಿಒ ವೆಂಕಟೇಶ ಹೇಳಿದರು.

ರಾಣಿಬೆನ್ನೂರು: ಮಹಿಳೆಯರು ಕುಟುಂಬದ ಆಧಾರ ಸ್ತಂಭವಾಗಿದ್ದು ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಮಹಿಳಾ ಪ್ರಧಾನ ಸಮಾಜ ನಿರ್ಮಾಣ ಆಗಲು ಸಾಧ್ಯ ಎಂದು ಪಿಡಿಒ ವೆಂಕಟೇಶ ಹೇಳಿದರು. ತಾಲೂಕಿನ ತಾಲೂಕಿನ ಹೆಡಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಮಹಿಳಾ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಮೂರು ಹಂತದ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ರಾಜಕೀಯವಾಗಿ ಮೀಸಲಾತಿ ಕಲ್ಪಿಸಲಾಗಿದೆ. ಮಹಿಳೆಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಸೌಲಭ್ಯಗಳಾದ ಗ್ರಾಮೀಣ ಜೀವನೋಪಾಯ ಕಾರ್ಯಕ್ರಮಗಳು, ಶೌಚಾಲಯ ವ್ಯವಸ್ಥೆ, ಆರೋಗ್ಯ, ಸುರಕ್ಷತೆ, ಸಮಾನ ಕೂಲಿ, ಸಮಾನ ವೇತನ ಇತ್ಯಾದಿ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು. ನರೇಗಾ ತಾಲೂಕು ಐಈಸಿ ಸಂಯೋಜಕ ದಿಂಗಾಲೇಶ ಅಂಗೂರ ಮಾತನಾಡಿ, ಮಹಿಳಾ ಗ್ರಾಮ ಸಭೆ ಮತ್ತು ಮಕ್ಕಳ ಗ್ರಾಮ ಸಭೆ ಮಾಡುವುದರ ಮೂಲಕ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ಗುರುತಿಸಿ ಕ್ರಿಯಾಯೋಜನೆ ತಯಾರಿಸಿ ಅನುಷ್ಠಾನ ಮಾಡುವುದು ಅಗತ್ಯವಿದೆ. ಗ್ರಾಮ ಪಂಚಾಯಿತಿಗಳು ಮಹಿಳಾ ಸ್ನೇಹಿಯಾದಾಗ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯ ಎಂದರು. ಗ್ರಾಪಂ ಅಧ್ಯಕ್ಷ ಮಹೇಶ ಮಾಸಣಗಿ, ಉಪಾಧ್ಯಕ್ಷರು, ಮಹಿಳಾ ಸಂಘದ ಪ್ರತಿನಿಧಿಗಳು, ಪಂಚಾಯಿತಿ ಕಾರ್ಯದರ್ಶಿ ನಾಗರಾಜ, ಬಿಲ್ ಕಲೆಕ್ಟರ್ ವೀರೇಶಗೌಡ ಹಾಗೂ ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.