ಹೆಣ್ಣು ಆತ್ಮಸ್ಥೈರ್ಯದಿಂದ ಬದುಕು ಕಟ್ಟಿಕೊಳ್ಳಬೇಕು: ದಿವ್ಯಾ ರಂಗೇನಹಳ್ಳಿ

| Published : Mar 20 2024, 01:17 AM IST

ಹೆಣ್ಣು ಆತ್ಮಸ್ಥೈರ್ಯದಿಂದ ಬದುಕು ಕಟ್ಟಿಕೊಳ್ಳಬೇಕು: ದಿವ್ಯಾ ರಂಗೇನಹಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಹೆಣ್ಣು ಕೇವಲ ನಾಲ್ಕು ಗೋಡೆಗಳ ನಡುವೆ ಬದುಕು ಕಟ್ಟಿಕೊಳ್ಳಲು ಸೀಮಿತವಾಗಿಲ್ಲ. ಹಲವಾರು ಹಂತಗಳನ್ನು ದಾಟಿ, ತನ್ನದೇ ಒಂದು ಉದ್ಯಮ ಸ್ಥಾಪಿಸಿ, ಖ್ಯಾತಿ ಪಡೆಯಲು ಹೆಣ್ಣು ಸಶಕ್ತಳು ಎಂದು ಮೀಡಿಯಾ ಕನೆಕ್ಟ್‌ ಸಂಸ್ಥಾಪಕರು ಮತ್ತು ಸಿಇಒ ದಿವ್ಯಾ ರಂಗೇನಹಳ್ಳಿ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ.

ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕನ್ನಡಪ್ರಭವಾರ್ತೆ ಚಿಕ್ಕಮಗಳೂರು

ಹೆಣ್ಣು ಕೇವಲ ನಾಲ್ಕು ಗೋಡೆಗಳ ನಡುವೆ ಬದುಕು ಕಟ್ಟಿಕೊಳ್ಳಲು ಸೀಮಿತವಾಗಿಲ್ಲ. ಹಲವಾರು ಹಂತಗಳನ್ನು ದಾಟಿ ತನ್ನದೇ ಒಂದು ಉದ್ಯಮ ಸ್ಥಾಪಿಸಿ ಖ್ಯಾತಿ ಪಡೆಯಲು ಹೆಣ್ಣು ಸಶಕ್ತಳು. ಕಲ್ಲು ಶಿಲೆಯಾಗಲು ಹಲವಾರು ಪೆಟ್ಟುಗಳು ಬೀಳುವುದು ಸಹಜ, ಎಲ್ಲ ಪೆಟ್ಟುಗಳನ್ನು ಸನ್ಮಾರ್ಗದಲ್ಲಿ ತೆಗೆದುಕೊಂಡು ಹೋದಾಗ ಮಾತ್ರವೇ ಆ ಪೆಟ್ಟು ತಿಂದ ಬದುಕಿಗೆ ಅರ್ಥ ಸಿಗುತ್ತದೆ ಎಂದು ಮೀಡಿಯಾ ಕನೆಕ್ಟ್‌ ಸಂಸ್ಥಾಪಕರು ಮತ್ತು ಸಿಇಒ ದಿವ್ಯಾ ರಂಗೇನಹಳ್ಳಿ ಹೇಳಿದರು.

ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಬಿಜಿಎಸ್‌ ಸೆಮಿನಾರ್‌ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮೀಡಿಯಾ ಕನೆಕ್ಟ್‌ ಮತ್ತು ಎಸ್‌ಬಿಐ ಸಹಭಾಗಿತ್ವದೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ತಂತ್ರಜ್ಞಾನ ಆಧಾರಿತ ಬದುಕಿನಲ್ಲಿ ಸ್ವಾವಲಂಬನೆಯಿಂದ ಹೆಣ್ಣು ಬದುಕು ಕಟ್ಟಿಕೊಳ್ಳಲು ಈ ಸಮಾಜದಲ್ಲಿ ನಾನಾ ರೀತಿಯ ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಮೆಟ್ಟಿ ನಿಂತಾಗ ಯಶಸ್ಸು ಸಾಧ್ಯ. ನಾನೂ ಕೂಡ ಈ ಹಂತಗಳನ್ನು ದಾಟಿ ಇಂದು ಈ ಸುಸ್ಥಾನದಲ್ಲಿದ್ದೇನೆ. ಯಾರದೇ ಸಹಾಯವಿಲ್ಲದೆ ಸ್ವಂತ ಪರಿಶ್ರಮದಿಂದ ಮೀಡಿಯಾ ಕನೆಕ್ಟ್‌ ಮತ್ತು ಪೋಲ್‌ ಹೌಸ್‌ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದೇನೆ ಎಂದು ತಮ್ಮ ಯಶಸ್ಸಿನ ದಾರಿಯನ್ನು ವಿವರಿಸಿದರು.

ನಮ್ಮ ಕೌಶಲ್ಯ, ಪ್ರತಿಭೆಯನ್ನು ಗುರುತಿಸುವಂತಹ ಕೆಲಸ ಮಾಡುವ ಆಶಯವಿರಬೇಕು. ಹಾಗಾದಾಗ ಮಾತ್ರ ಹೆಣ್ಣು ಗುರುತಿಸಿಕೊಳ್ಳಲು ಸಾಧ್ಯ. ಉತ್ತಮ ಕೆಲಸಗಳನ್ನು ಮಾತ್ರ ಸಮಾಜ ಗುರುತಿಸಲಿದೆ. ಹಾಗಾಗಿ ಅಂತಹ ಆಲೋಚನೆಗಳೊಂದಿಗೆ ಮುಂದೆ ಬನ್ನಿ. ದೇಶ ವಿದೇಶಗಳಲ್ಲೂ ಕನ್ನಡ ಭಾಷೆಗೆ ಮತ್ತು ಉತ್ತಮ ಕೆಲಸಕ್ಕೆ ಮನ್ನಣೆ ಇದೆ. ನಮ್ಮ ಮಹಿಳೆಯರ ಉನ್ನತಿಗೆ ರಾಜ್ಯ ಸರ್ಕಾರವು ಅನೇಕ ಯೋಜನೆಗಳನ್ನು ಹೊಂದಿದೆ. ಅದರ ಜೊತೆಗೆ ಬ್ಯಾಂಕ್‌ ಸಂಸ್ಥೆಗಳು ಸಹ ಅಗತ್ಯವಾದ ಆರ್ಥಿಕ ಸಹಾಯವನ್ನು ನೀಡುತ್ತವೆ. ಅದರ ಸದ್ಭಳಕೆಯನ್ನು ಮಾಡಿಕೊಂಡು ಹೆಣ್ಣು ಮಕ್ಕಳು ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಇಂದಿನ ವಿದ್ಯಾರ್ಥಿಗಳು ಈ ಸಂಗತಿಗಳನ್ನು ಅರಿಯುವುದು ಅಗತ್ಯ. ನೀವು ನಾಳಿನ ಉದ್ಯಮಿಗಳಾಗುವ ತುಡಿತ ನಿಮ್ಮ ಕಣ್ಣಿನಲ್ಲಿ ಕಾಣುತ್ತಿದೆ ಎಂದು ಹೇಳಿ ವಿದ್ಯಾರ್ಥಿಗಳಲ್ಲಿ ಆಶಾಭಾವನೆ ಮೂಡಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಎಸ್‌ಬಿಐ ಚಿಕ್ಕಮಗಳೂರು ಶಾಖೆಯ ಪ್ರಾದೇಶಿಕ ವ್ಯವಸ್ಥಾಪಕರಾದ ಕನ್ಹಯ್ಯ ಲಾಲ್‌ ಗೊಪಾಲಿ ಅವರು ಮಾತನಾಡಿ, ಇಂದಿನ ಯುವ ಪೀಳಿಗೆಗೆ ಜ್ಞಾನ ತುಂಬಾ ಮುಖ್ಯ, ಅದನ್ನು ತಿಳಿಯುವುದರೆಡೆಗಿನ ದಾರಿಯಲ್ಲಿ ಯುವಜನತೆ ಎಡವುತ್ತಿದ್ದಾರೆ. ನಾಳಿನ ಬದುಕನ್ನು ಸುಂದರವಾಗಿಸಲು ಇಂದು ಕನಸು ಕಾಣಲೇಬೇಕು ಮತ್ತು ಅದರೆಡೆಗೆ ಶ್ರಮವಹಿಸಬೇಕು. ಈ ವರ್ಷದ ಮಹಿಳಾ ದಿನದ ಸಂದೇಶದಂತೆ ಹೆಣ್ಣು ಮಕ್ಕಳು ಶ್ರಮವಹಿಸಿ ಗುರಿಯನ್ನು ತಲುಪುವ ಕೆಲಸವಾಗಬೇಕು. ಈ ಹಂತದಲ್ಲಿ ಬ್ಯಾಂಕ್‌ಗಳು ಕೂಡ ಕೈಜೋಡಿಸಲಿವೆ. ಹೆಣ್ಣು ಬೆಳೆದರೆ ಕುಟಂಬವೂ ಆರ್ಥಿಕವಾಗಿ ಬಲಿಷ್ಠವಾಗಲಿದೆ ಎಂದರು.

ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಪುಷ್ಪಾ ರವಿಕುಮಾರ್‌ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಐಕ್ಯುಎಸಿ ನಿರ್ದೇಶಕರಾದ ಕೆ.ಎಸ್‌. ಡಾ. ಪ್ರಕಾಶ್‌, ಶೈಲಜಾ, ಎಸ್‌ಬಿಐ ಚಿಕ್ಕಮಗಳೂರಿನ ಪ್ರಾದೇಶಿಕ ಮಾರ್ಕೇಟಿಂಗ್‌ ವಿಭಾಗದ ಮುಖ್ಯಸ್ಥರಾದ ನಿವೇದಿತಾ ಅರುಣಾಚಲ ಹೆಗಡೆ, ಡಾ.ಅಭಿಜಿತ್‌ ವೈದ್ಯ ಉಪಸ್ಥಿತರಿದ್ದರು. ----------!!!!----------------ಪೋಟೋ ಫೈಲ್‌ ನೇಮ್‌ 19 ಕೆಸಿಕೆಎಂ 4

ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಬಿಜಿಎಸ್‌ ಸೆಮಿನಾರ್‌ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು

ದಿವ್ಯಾ ರಂಗೇನಹಳ್ಳಿ ಅವರು ಉದ್ಘಾಟಿಸಿದರು. ಕನ್ಹಯ್ಯ ಲಾಲ್‌ ಗೊಪಾಲಿ, ಡಾ. ಪುಷ್ಪಾ ರವಿಕುಮಾರ್‌ ಇದ್ದರು.