ಪ್ರೀತಿ ಪಾತ್ರರಿಂದಲೇ ಶೋಷಣೆಗೆ ಒಳಗಾದ ಮಹಿಳೆ: ಡಾ. ಭಾರತಿದೇವಿ

| Published : Jan 11 2024, 01:30 AM IST / Updated: Jan 11 2024, 01:26 PM IST

ಸಾರಾಂಶ

ಬಹುತೇಕ ಮಹಿಳೆಯರು ತಮ್ಮ ಪ್ರೀತಿ ಪಾತ್ರರಿಂದಲೇ ಶೋಷಣೆಗೆ ಒಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ ತಮ್ಮ ಸ್ವಾತಂತ್ರ್ಯ, ಹಕ್ಕು ರಕ್ಷಿಸಿಕೊಳ್ಳುತ್ತಲೇ ಕುಟುಂಬ ಜೀವನದಲ್ಲಿ ಬದುಕುವ ಅನಿವಾರ್ಯತೆಗೆ ಒಳಗಾಗುತ್ತಾರೆ.

ಹೊನ್ನಾವರ: ಬಹುತೇಕ ಮಹಿಳೆಯರು ತಮ್ಮ ಪ್ರೀತಿ ಪಾತ್ರರಿಂದಲೇ ಶೋಷಣೆಗೆ ಒಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ ತಮ್ಮ ಸ್ವಾತಂತ್ರ್ಯ, ಹಕ್ಕು ರಕ್ಷಿಸಿಕೊಳ್ಳುತ್ತಲೇ ಕುಟುಂಬ ಜೀವನದಲ್ಲಿ ಬದುಕುವ ಅನಿವಾರ್ಯತೆಗೆ ಒಳಗಾಗುತ್ತಾರೆ ಎಂದು ಕವಯಿತ್ರಿ ಡಾ. ಭಾರತಿದೇವಿ ಪಿ. ಹೇಳಿದರು.

ಮಾಧವಿ ಭಂಡಾರಿ ಕೆರೆಕೋಣ ಅವರ ಗುಲಾಬಿ ಕಂಪಿನ ರಸ್ತೆ ಕಥಾ ಸಂಕಲನವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌, ಸಹಯಾನ ಕೆರೆಕೋಣ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವರ್ತಮಾನದ ತಲ್ಲಣಗಳಿಗೆ ಧ್ವನಿಯಾಗಿರುವ ಗುಲಾಬಿ ಕಂಪಿನ ರಸ್ತೆ ಕಥೆಗಳು ಸಮಕಾಲೀನ ಕನ್ನಡ ಕಥೆಗಳಲ್ಲಿ ಪ್ರಮುಖವಾದವು ಎಂದರು.ಪುಸ್ತಕ ಪರಿಚಯಿಸಿದ ಕಾವ್ಯಶ್ರೀ ನಾಯ್ಕ, ಸುತ್ತಲಿನ ಸಮಸ್ಯೆಗಳಿಗೆ ದಿಟ್ಟವಾಗಿ ಪ್ರತಿಕ್ರಿಯಿಸುವ ಕಥೆಗಳು ಕೆಲವೊಮ್ಮೆ ಓದುಗರನ್ನು ಕಂಗೆಡಿಸಿ ಬಿಡುವಷ್ಟು ತೀವ್ರವಾಗಿ ಮೂಡಿ ಬಂದಿವೆ ಎಂದರು.

ಡಾ. ಎನ್.ಆರ್. ನಾಯಕ ಮಾತನಾಡಿ, ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಒಳ್ಳೆಯ ಅಭಿರುಚಿಯ ಓದಿಗೆ ಹೊಸ ತಲೆಮಾರು ತೆರೆದುಕೊಳ್ಳಬೇಕು ಎಂದು ಹೇಳಿದರು. ಶಾಂತಿ ನಾಯಕ, ಮಹಿಳೆಯರು ಜಾಗೃತ ಪ್ರಜ್ಞೆ ಹೊಂದಿದಾಗ ಮಾತ್ರವೇ ಶೋಷಣೆಯಿಂದ ಮುಕ್ತರಾಗಲು ಸಾಧ್ಯ ಎಂದು ಹೇಳಿದರು.

ಎಸ್.ಡಿ. ಹೆಗಡೆ, ಸಮಾಜದಲ್ಲಿ ಸತ್ಯ ಸ್ವೀಕರಿಸುವ ಮನಸ್ಥಿತಿ ಇಂದು ಇಲ್ಲವಾಗಿದೆ. ಸುಳ್ಳುಗಳನ್ನು ಪುರಸ್ಕರಿಸುವ ಜನ ಸತ್ಯ ಸ್ವೀಕರಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲರಾದ ಡಾ. ಶಬಾನಾ ಯಾಸ್ಮಿನ್ ಶೇಖ್ ಮತ್ತು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಚ್. ಗೌಡ ಶುಭ ಹಾರೈಸಿದರು. ಬಂಡಾಯ ಪ್ರಕಾಶನದ ಪ್ರಕಾಶಕಿ ಸಹಯಾನದ ಯಮುನಾ ಗಾಂವ್ಕರ್‌, ಸಂಕಲನದ ಕಥೆಗಾರ್ತಿ ಮಾಧವಿ ಭಂಡಾರಿ, ಲಿಖಿತ, ಪೃಥ್ವಿ ಸೇರಿದಂತೆ ಇತರರು ಇದ್ದರು.