ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಅಮೆರಿಕದಲ್ಲಿರುವ ಮಗಳು ಮುಧೋಳದಲ್ಲಿರುವ ತನ್ನ ಮನೆ ದೋಚುವುದನ್ನು ನೋಡಿ ಮನೆಯವರಿಗೆ ವಿಷಯ ತಿಳಿಸಿ ಚಡ್ಡಿ ಕಳ್ಳರ ಗ್ಯಾಂಗ್‌ಗೆ ಚಳ್ಳೆಹಣ್ಣು ತಿನ್ನಿಸಿದ ಘಟನೆ ನಡೆದಿದೆ. ಈ ರೋಚಕ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ಸಿದ್ದರಾಮೇಶ್ವರ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಮುಧೋಳ ಸಿದ್ದರಾಮೇಶ್ವರ ನಗರದಲ್ಲಿ ನಿವೃತ್ತ ಪಿಡಬ್ಲ್ಯುಡಿ ಅಭಿಯಂತರ ಹನುಮಂತಗೌಡ ಸಂಕಪ್ಪನವರ ಅವರು ಪತ್ನಿಯೊಂದಿಗೆ ವಾಸವಿದ್ದಾರೆ. ಈ ವೃದ್ಧ ದಂಪತಿಗೆ ಶ್ರುತಿ ಎಂಬ ಮಗಳಿದ್ದು ಸಾಫ್ಟವೇರ್ ಎಂಜಿಯರ್ ಆಗಿರುವ ಅವರು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತ ಅಮೆರಿಕದಲ್ಲಿ ನೆಲೆಸಿದ್ದಾರೆ. ವೃದ್ಧ ತಂದೆ-ತಾಯಿ ಅಷ್ಟೇ ಮನೆಯಲ್ಲಿ ಇರುವುದರಿಂದ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಿ ಸಾಫ್ಟವೇರ್ ಮೂಲಕ ತನ್ನ ಮೊಬೈಲ್‌ನಲ್ಲಿ ವೀಕ್ಷಣೆ ಮಾಡುವಂತೆ ಮಾಡಿಕೊಂಡಿದ್ದರು. ಈ ಮಧ್ಯೆ ಚಡ್ಡಿ ಕಳ್ಳರ ಗ್ಯಾಂಗ್ ಎಂದೇ ಕುಖ್ಯಾತಿ ಗಳಿಸಿರುವ (ಒಬ್ಬನ ಮುಖಕ್ಕೆ ಮಂಕಿ ಕ್ಯಾಪ್, ಮತ್ತೊಬ್ಬನ ಮುಖದಲ್ಲಿ ಮಾಸ್ಕ್, ಮೈಮೇಲೆ ಶರ್ಟ್ ಇದೆ. ಆದರೆ ಪ್ಯಾಂಟೇ ಇಲ್ಲ, ಇರೋದು ಬರೀ ಚಡ್ಡಿ). ಅದಾಗಲೇ ಒಂದು ಮನೆ ದೋಚಿದ್ದ ಕಳ್ಳರ ಗ್ಯಾಂಗ್ ರಾತ್ರಿ 1 ಗಂಟೆ ಸುಮಾರಿಗೆ ಹನುಮಂತಗೌಡರ ಮನೆಯತ್ತ ಧಾವಿಸಿದೆ. ಇವರು ಮನೆ ಬಳಿಗೆ ಬರುತ್ತಲೇ ಅಮೆರಿಕದಲ್ಲಿದ್ದ ಮಗಳ ಮೊಬೈಲ್‌ಗೆ ಅಲರ್ಟ್ ಬೆಲ್ ಬಾರಿಸಿದ್ದು, ಆಗ ಎಚ್ಚರಗೊಂಡು ದೃಶ್ಯ ಗಮನಿಸಿ ತಕ್ಷಣ ಮನೆಯವರಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ಮನೆಯೊಳಗಿಂದ ಮನೆ ಬಾಗಿಲು ತೆರೆಯುತ್ತಿದ್ದಂತೆ ಕಳ್ಳರ ಗ್ಯಾಂಗ್ ಅಲ್ಲಿಂದ ಎಸ್ಕೇಪ್ ಆಗಿದೆ. ಯಾವುದೇ ಭಯವಿಲ್ಲದೇ ರಾಜಾರೋಷವಾಗಿ ಕಳ್ಳರು ಮನೆಗೆ ಬರುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ದೃಶ್ಯಾವಳಿ ಸೆರೆಯಾಗಿದೆ. ಇದಕ್ಕೂ ಮುಂಚೆ ಈ ಚಡ್ಡಿ ಕಳ್ಳರ ಗ್ಯಾಂಗ್ ಅದೇ ನಗರದ ಅಶೋಕ ಕರಿಹೊನ್ನ ಎಂಬುವರ ಮನೆಗೆ ಕನ್ನ ಹಾಕಿ ೧೧ ಗ್ರಾಂ ಚಿನ್ನ ೪೦ ಸಾವಿರ ನಗದು ದೋಚಿದ್ದರು. ಈ ಕುರಿತು ಮುಧೋಳ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.