ಸಾರಾಂಶ
ಸೊರಬ: ಮಕ್ಕಳಿಗೆ ಸಂಸ್ಕಾರ ಕಲಿಸುವವಳು ಹೆಣ್ಣು. ಈ ಕಾರಣದಿಂದ ಭಾರತೀಯರಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನವಿದ್ದು, ಅವರ ಮೊಗದಲ್ಲಿ ದೇವತೆಗಳ ಶಕ್ತಿ ಕಾಣುತ್ತೇವೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.ಪಟ್ಟಣದ ಡಾ.ರಾಜ್ ಕಲಾಮಂದಿರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸೊರಬ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.ಮಕ್ಕಳಿಗೆ ಲಾಲನೆ, ಪಾಲನೆ ಜೊತೆಗೆ ಕೈಹಿಡಿದು ಸರಿದಾರಿಗೆ ನಡೆಸುವ ದೀವಿಗೆಯಾಗುವ ಮಹಿಳೆ ಎಲ್ಲಾ ಕಷ್ಟಗಳನ್ನು ನುಂಗಿ ಸಮಾಜದಲ್ಲಿ ಒಬ್ಬ ಸತ್ಪ್ರಜೆಯನ್ನಾಗಿ ರೂಪಿಸುವ ಶಿಲ್ಪಿಯಾಗುತ್ತಾಳೆ ಎಂದರು.
ಇಂದು ಅವಿಭಕ್ತ ಕುಟುಂಬಗಳು ವಿಘಟಿತವಾಗುತ್ತಿರುವುದು ಸರಿಯಲ್ಲ. ಇದರಿಂದ ಪರಸ್ಪರ ಮನುಷ್ಯ ಸಂಬಂಧದಲ್ಲಿ ಬಿರುಕು ಬಿಡುತ್ತಿದ್ದು, ಮಾನವೀಯ ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಿದೆ. ಇದಕ್ಕೆ ಕಡಿವಾಣ ಹಾಕಲು ಕುಟುಂಬದಲ್ಲಿ ಭ್ರಾತೃತ್ವ, ಮಾತೃತ್ವಗಳು ಗಟ್ಟಿಯಾದಾಗ ಕುಟುಂಬ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಇಂಥ ಬೆಳವಣಿಗೆ ಮತ್ತೊಮ್ಮೆ ಮುನ್ನೆಲೆಗೆ ಬರಲು ಮಹಿಳೆಯರಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಅಮ್ಮ ಆಸ್ಪತ್ರೆಯ ಡಾ.ಬಿ.ಎಂ.ಸೌಭಾಗ್ಯ, ಇಂದು ಆಧುನಿಕತೆಯ ನೆಪದಲ್ಲಿ ಜೀವನ ಶೈಲಿ ಬದಲಾಗುತ್ತಿದ್ದು, ಜಂಕ್ ಪುಡ್ ಸೇವನೆಯಿಂದ ಹತ್ತು ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಮಹಿಳೆಯರಲ್ಲಿ ಮುಟ್ಟು ನಿಲ್ಲುವವರೆಗೂ ಅಂಡಾಶಯ ಗರ್ಭ ಕ್ಯಾನ್ಸರ್ ಇತ್ಯಾದಿ ರೋಗಳಿಗೆ ತುತ್ತಾಗುತ್ತಲಿದ್ದಾರೆ. ಇದಕ್ಕೆ ಆಹಾರದ ನಿರ್ಲಕ್ಷ್ಯತನವೂ ಕಾರಣವಾಗುತ್ತದೆ. ಬೆಳಿಗ್ಗೆ ಎದ್ದು ತನ್ನ ದಿನಚರಿಗಳನ್ನು ಪ್ರಾರಂಭಿಸುವುದರ ಜೊತೆಗೆ ಯೋಗ ಧ್ಯಾನಗಳನ್ನು ಮತ್ತು ಪೌಷ್ಟಿಕಾಂಶದ ಆಹಾರ ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.ಸಾಹುಕಾರ್ ಆರೋಗ್ಯಕ್ಕಾಗಿ ಆಹಾರ ಎಂಬ ವಿಷಯದ ಕುರಿತು ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರಭು.ಕೆ, ಸಂಸ್ಕರಿಸಿದ ಆಹಾರಕ್ಕಿಂತ ನೈಸರ್ಗಿಕ ಆಹಾರವನ್ನು ತೆಗೆದುಕೊಳ್ಳಬೇಕು. ಅತಿ ಹೆಚ್ಚು ಪಾಲಿಶ್ ಮಾಡದಿರುವ ಅಕ್ಕಿಯನ್ನು ಬಳಸುವುದರಿಂದ ಕಾರ್ಬೋಹೈಡ್ರೆಟ್ ಜೊತೆಗೆ ಪ್ರೋಟಿನ್ಸ್, ವಿಟಮಿನ್ಸ್ ಮತ್ತು ಮಿನರಲ್ಸ್ ದೊರೆಯುತ್ತವೆ. ತುಪ್ಪವನ್ನು ಬಳಸಬೇಕು. ತರಕಾರಿ, ಮೊಳಕೆ ಪದಾರ್ಥಗಳು, ಕೆನೆ ತೆಗೆದ ಹಾಲು ಸೇವಿಸುವುದರಿಂದ ಆರೋಗ್ಯ ಕಾಪಾಡಲು ಸಾಧ್ಯ ಎಂದು ತಿಳಿಸಿದರು.
ಇದೇ ವೇಳೆ ಸಾಧಕ ಮಹಿಳೆಯರಾದ ಸುಮಾ ಆನವಟ್ಟಿ (ಬ್ಯುಟಿಪಾರ್ಲರ್), ಲಲಿತಮ್ಮ ಗೆಂಡ್ಲಾ (ಹೈನುಗಾರಿಕೆ), ಸುಧಾ ಹೊಸಬಾಳೆ (ಜಾನಪದಕಲೆ) ಮತ್ತು ಸ್ವ-ಉದ್ಯೋಗಿಳಾದ ಶಶಿಕಲಾ, ಚಂದ್ರಕಲಾ, ಸುವರ್ಣಮ್ಮ ಇಂಡುವಳ್ಳಿ, ಅನಿತಾ ಸೊರಬ, ಕವಿತಾ ಜಡೆ, ತತ್ತೂರು, ಜಯತುಂಬಿ ತಿಮ್ಮಾಪುರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನೆಯ ಯೋಜನಾಧಿಕಾರಿ ಜಯಂತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಕೆಆರ್‌ಡಿಪಿ ಶಿರಸಿ ಜಿಲ್ಲಾ ನಿರ್ದೇಶಕ ಕೆ.ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ.ಪಂ. ಮಾಜಿ ಅಧ್ಯಕ್ಷ ಪ್ರಶಾಂತ ಮೇಸ್ತ್ರಿ, ಹಿರೇಶಕುನ ಗ್ರಾಮ ಸಮಿತಿ ಅಧ್ಯಕ್ಷ ಗುರುಮೂರ್ತಿ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಪ್ರಭಾವತಿ, ಉಮೇಶ ಪೂಜಾರಿ ಜಯಂತಿ ಮೊದಲಾದವರು ಹಾಜರಿದ್ದರು.