ಖಾಕಿ ದರ್ಪಕ್ಕೆ ಹೆದರಿದ ಮಹಿಳೆ: ಠಾಣೆಯಲ್ಲೇ ಆತ್ಮಹತ್ಯೆ ಯತ್ನ

| Published : Jun 18 2024, 12:48 AM IST

ಖಾಕಿ ದರ್ಪಕ್ಕೆ ಹೆದರಿದ ಮಹಿಳೆ: ಠಾಣೆಯಲ್ಲೇ ಆತ್ಮಹತ್ಯೆ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳದಲ್ಲೇ ಇದ್ದ ಪೊಲೀಸರು ತಡೆದು ನಂತರ ಇಬ್ಬರನ್ನೂ ಠಾಣೆಗೆ ಕರೆಸಿಕೊಂಡಾಗ ಎರಡೂ ಕುಟುಂಬಗಳು ಭಾನುವಾರ ಆಗಮಿಸಿವೆ. ಠಾಣೆಯಲ್ಲಿ ನ್ಯಾಯ ಪಂಚಾಯ್ತಿ ಮಾಡುವಾಗ ಪೊಲೀಸ್ ಸಿಬ್ಬಂದಿ ಸುಬ್ರಹ್ಮಣ್ಯ, ಅಕ್ರಂ ಇವರು ನಾವು ಹೇಳಿದ ರೀತಿಯಲ್ಲಿ ಮುಚ್ಚಳಿಕೆ ಪತ್ರ ಬರೆದು ಕೊಡು ಎಂದು ಧಮ್ಕಿ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಪೊಲೀಸ್ ಠಾಣೆಯಲ್ಲಿ ಗೋಳಾಡಿದರೂ ನ್ಯಾಯ ಸಿಗದ ಕಾರಣಕ್ಕೆ ಮನನೊಂದು ಮಹಿಳೆಯೊಬ್ಬರು ಖಾಕಿ ದರ್ಪಕ್ಕೆ ಹೆದರಿ ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ನಡೆದಿದೆ.

ಚಂದಗಾಲು ಗ್ರಾಮದ ನಾಲ್ವರ ಆತ್ಮಹತ್ಯೆ ಯತ್ನ ಮತ್ತು ಇಬ್ಬರ ಸಾವಿನ ಪ್ರಕರಣ ಮಾಸುವ ಮುನ್ನವೇ ಈ ಘಟನೆ ನಡೆದಿದ್ದು, ಮಹಿಳೆ ನನಗೆ ನ್ಯಾಯ ಸಿಗುವುದಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ಟವಲ್ ನಿಂದ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಮಹಿಳೆ ಯತ್ನಿಸಿದ್ದರಿಂದ ಕೂಡಲೇ ಆಕೆಯನ್ನು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಲೂಕಿನ ಗದ್ದೆಹೊಸಳ್ಳಿ ಗ್ರಾಮದ ವಿಧವೆ ಚಂದ್ರಕಲಾ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಹುಣಸೂರು ತಾಲೂಕು ಅಯರಹಳ್ಳಿಯ ಅರಸೇಗೌಡ- ಪ್ರೇಮಮ್ಮ ದಂಪತಿ ಮಗಳು ಚಂದ್ರಕಲಾಳನ್ನು ಗದ್ದೆಹೊಸಳ್ಳಿಯ ಲೋಕೇಶ್ ಎಂಬುವರಿಗೆ 15 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು.

ಲೋಕೇಶ್ ಹಿರಿಯ ಪತ್ನಿ ಭಾರತಿ ತೀರಿಕೊಂಡ ಹಿನ್ನೆಲೆ ಚಂದ್ರಕಲಾ 2ನೇ ಪತ್ನಿಯಾಗಿದ್ದು, ಭಾರತಿಗೆ ಇಬ್ಬರು ಮಕ್ಕಳಿದ್ದು, ಚಂದ್ರಕಲಾಗೆ ಗಂಡು ಮಗು ಇದೆ. ಲೋಕೇಶ್ ಸತ್ತ ನಂತರ ಅವರ ಹೆಸರಲ್ಲಿದ್ದ 10 ಗುಂಟೆ ಗದ್ದೆ ಚಂದ್ರಕಲಾ ಅವರಿಗೆ ಪೌತಿ ಖಾತೆ ಆಗಿದೆ. ಆದರೂ 10 ಗುಂಟೆಯಲ್ಲಿ ಬರುವ ಆದಾಯವನ್ನು ನಮಗೇ ಕೊಡಿ ಎಂದು ಭಾರತಿ ಅವರ ಮಕ್ಕಳು ಹಾಗೂ ತಾಯಿ ಪ್ರೇಮ ಚಂದ್ರಕಲಾಗೆ ಚಿತ್ರಹಿಂಸೆ ಕೊಡುತ್ತಿದ್ದರು ಎನ್ನಲಾಗಿದೆ.

ಈ ಸಂಬಂಧ ಚಂದ್ರಕಲಾ ಅನೇಕ ಬಾರಿ ಸ್ಥಳೀಯ ಠಾಣೆಗೆ ದೂರು ನೀಡಿದ್ದರು.ನಂತರ ಎರಡೂ ಕಡೆಯವರನ್ನು ಕರೆಸಿ ಪೊಲೀಸರು ಬುದ್ಧಿವಾದ ಹೇಳಿ ಮುಚ್ಚಳಿಕೆ ಬರೆಸಿದ್ದರು, ಆದರೆ ಯಾವುದೇ ಕ್ರಮ ಜರುಗಿಸಿರಲಿಲ್ಲ.

ಮತ್ತದೆ ಖ್ಯಾತೆ:

ಇದೇ ವಿಚಾರಕ್ಕೆ ಪ್ರೇಮ ಹಾಗೂ ಇತರರು ಶನಿವಾರ ಮನೆಯಲ್ಲಿ ಜಗಳ ಮಾಡಿ ಅಸಭ್ಯವಾಗಿ ಚಂದ್ರಕಲಾಗೆ ಬೈಯ್ದಿದ್ದಾರೆ. ನಿನಗೆ ಅಕ್ರಮ ಸಂಬಂಧವಿದೆ ಎಂದು ನಿಂದಿಸಿದ್ದಾರೆ. ಸುದ್ದಿ ತಿಳಿದ ಪೊಲೀಸರು ಮನೆ ಹತ್ತಿರ ಹೋಗಿದ್ದಾರೆ. ಖಾಕಿ ಸಮ್ಮುಖದಲ್ಲೇ ಎರಡು ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಬೇಸತ್ತ ಚಂದ್ರಕಲಾ ಮನೆಯ ಫ್ಯಾನಿಗೆ ನೇಣು ಬಿಗಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಸ್ಥಳದಲ್ಲೇ ಇದ್ದ ಪೊಲೀಸರು ತಡೆದು ನಂತರ ಇಬ್ಬರನ್ನೂ ಠಾಣೆಗೆ ಕರೆಸಿಕೊಂಡಾಗ ಎರಡೂ ಕುಟುಂಬಗಳು ಭಾನುವಾರ ಆಗಮಿಸಿವೆ. ಠಾಣೆಯಲ್ಲಿ ನ್ಯಾಯ ಪಂಚಾಯ್ತಿ ಮಾಡುವಾಗ ಪೊಲೀಸ್ ಸಿಬ್ಬಂದಿ ಸುಬ್ರಹ್ಮಣ್ಯ, ಅಕ್ರಂ ಇವರು ನಾವು ಹೇಳಿದ ರೀತಿಯಲ್ಲಿ ಮುಚ್ಚಳಿಕೆ ಪತ್ರ ಬರೆದು ಕೊಡು ಎಂದು ಧಮ್ಕಿ ಹಾಕಿದ್ದಾರೆ.

ಬೆದರಿಕೆಯಿಂದ ನೊಂದ ಚಂದ್ರಕಲಾ ಹೆಚ್ಚುವರಿ ಎಸ್ಪಿ ಅವರಿಗೆ ಮೊಬೈಲ್ ನಲ್ಲಿ ಕರೆ ಮಾಡಿ ಪೊಲೀಸರ ವಿರುದ್ಧ ದೂರು ಹೇಳುವಾಗ ಅಲ್ಲಿದ್ದ ಮಹಿಳಾ ಪೇದೆ ತಾಯಮ್ಮ ಅವರು ಆಕೆಯ ಮೊಬೈಲ್ ಕಸಿದು ಚಂದ್ರಕಲಾ ತಾಯಿ ಪ್ರೇಮಮ್ಮ ಅವರ ಜಡೆಯನ್ನು ಹಿಡಿದು ಕೊಂಡು ಠಾಣೆಯೊಳಗೆ ಎಳೆದೊಯ್ಯುವಾಗ ಚಂದ್ರಕಲಾ ಮನನೊಂದು ಟವಲ್ ನಿಂದ ಕುತ್ತಿಗೆ ಬಿಗಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಈ ಎಲ್ಲ ಬೆಳವಣಿಗೆಗೆ ಪೊಲೀಸ್ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದ್ದು, ಆನಂತರ ಪೊಲೀಸರೆ ಆಂಬ್ಯುಲೆನ್ಸ್ ಕರೆಸಿ ಚಂದ್ರಕಲಾ ಅವರನ್ನು ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ:

ಕೆ.ಆರ್. ನಗರ ಪಟ್ಟಣದಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದ್ದು, ನೊಂದ ಜನರಿಗೆ ನ್ಯಾಯ ಸಿಗುತ್ತಿಲ್ಲ ಜತೆಗೆ ಇತ್ತೀಚೆಗೆ ಚಂದಗಾಲು ಗ್ರಾಮದ ಎಸ್ಟಿ ಸಮುದಾಯದ ಕುಟುಂಬ ನ್ಯಾಯ ಸಿಗದೆ ಆತ್ಮಹತ್ಯೆಗೆ ಯತ್ನಿಸಿ ಇಬ್ಬರು ಮೃತಪಟ್ಟಿರುವುದು ಸಾಕ್ಷಿಯಾಗಿದೆ. ಇಲ್ಲಿರುವ ಪೊಲೀಸರು ಹಣ ಕೊಟ್ಟವರು ಮತ್ತು ರಾಜಕೀಯ ಬೆಂಬಲ ಇದ್ದವರ ಪರ ನಿಂತಿದ್ದಾರೆ ಎಂಬ ಗಂಭೀರ ಆರೋಪವಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಮನಹರಿಸಬೇಕು ಎಂದು ನಾಗರೀಕರು ಅಗ್ರಹಿಸಿದ್ದಾರೆ.