ದುಡಿಯುವ ವರ್ಗದ ಎಸ್‌ಯುಸಿಐ ಅಭ್ಯರ್ಥಿ ಗೆಲ್ಲಿಸಿ: ರಾಮಾಂಜನಪ್ಪ ಆಲ್ದಳ್ಳಿ

| Published : Apr 25 2024, 01:06 AM IST

ದುಡಿಯುವ ವರ್ಗದ ಎಸ್‌ಯುಸಿಐ ಅಭ್ಯರ್ಥಿ ಗೆಲ್ಲಿಸಿ: ರಾಮಾಂಜನಪ್ಪ ಆಲ್ದಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ದುಡಿಯುವ ವರ್ಗದ ಪಕ್ಷ ಎಸ್‌ಯುಸಿಐ ದೇಶ ವ್ಯಾಪಿ ಜನಗಳ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟದ ನೇತೃತ್ವ ವಹಿಸಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ದುಡಿಯುವ ವರ್ಗದ ಹಿತ ಕಾಪಾಡುವ ಕಮ್ಯುನಿಸ್ಟ್‌ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಹೇಳಿದರು.

ಕೊಪ್ಪಳದ ನಗರದ ಲೇಬರ್ ಸರ್ಕಲ್‌ನಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯ ಆಟೋ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ದಿನನಿತ್ಯ ನೂರಾರು ಜನ ದಿನಗೂಲಿ ಕಾರ್ಮಿಕರು ಹೊಟ್ಟೆಪಾಡಿಗಾಗಿ ಬುತ್ತಿ ಕಟ್ಟಿ ಕೆಲಸಕ್ಕಾಗಿ ಕಾಯುತ್ತಿರುವ ಈ ಸ್ಥಳ ಲೇಬರ್ ಸರ್ಕಲ್ ಆಗಿ ಹೆಸರುವಾಸಿಯಾಗಿದೆ. ದುಡಿಯುವ ಜನಗಳ ರಕ್ತ ಕೆಂಪು, ನಮ್ಮ ಪಕ್ಷದ ಹೋರಾಟದ ಬಾವುಟ ಕೂಡ ಕೆಂಪಾಗಿದೆ. ದುಡಿಯುವ ವರ್ಗದವರದ್ದು ಒಂದು ಜಾತಿ, ದುಡಿಯುವ ವರ್ಗದ ಜನರನ್ನು ಶೋಷಣೆ ಮಾಡುತ್ತಿರುವವರು ಇನ್ನೊಂದು ಜಾತಿ. ಇವೆರಡೇ ಜಾತಿಗಳಿರುವುದು. ಹಾಗಾಗಿ, ದುಡಿಯುವ ವರ್ಗದ ಪಕ್ಷ ಎಸ್‌ಯುಸಿಐ ದೇಶ ವ್ಯಾಪಿ ಜನಗಳ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟದ ನೇತೃತ್ವ ವಹಿಸಿದೆ. ಚುನಾವಣೆಯನ್ನು ಹೋರಾಟದ ಭಾಗವೆಂದು ಭಾವಿಸಿದೆ ಎಂದರು.

ಎಸ್‌ಯುಸಿಐ ಪಕ್ಷದ ಅಭ್ಯರ್ಥಿ ಶರಣು ಗಡ್ಡಿ ಮಾತನಾಡಿ, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು ಜನಗಳ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿಲ್ಲ. ಮುಖ್ಯವಾಗಿ ತುಂಗಭದ್ರಾ ನದಿ ಪಕ್ಕದಲ್ಲಿದ್ದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಲ್ಲ. ಕೃಷಿಗೆ ಅವಶ್ಯಕತೆ ಇರುವ ಕೆರೆಗಳಿಗೆ ನದಿಯಿಂದ ನೀರು ತುಂಬಿಸುವ ಭರವಸೆ ಸುಳ್ಳಾಗಿದೆ. ನೂರಾರು ಕೈಗಾರಿಕೆಗಳಿದ್ದರೂ ಯುವಕರಿಗೆ ಕೆಲಸವಿಲ್ಲ.

ಹಲವಾರು ಹಳ್ಳಿಗಳಲ್ಲಿ ಈಗಲೂ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗ ಖಾತ್ರಿ ಯೋಜನೆಯನ್ನು ಕನಿಷ್ಠ 200 ದಿನಕ್ಕೆ ಹೆಚ್ಚಿಸಿ, ಕನಿಷ್ಠ ಕೂಲಿ 600 ನಿಗದಿ ಮಾಡಿ, ಉದ್ಯೋಗ ಖಾತ್ರಿ ಕೆಲಸ ನಗರಕ್ಕೂ ವಿಸ್ತರಿಸಬೇಕಾಗಿದೆ. ಇಂಥ ಜನರ ಬದುಕಿನ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರ ಹೋರಾಟ ಕಟ್ಟುತ್ತಿರುವ ಎಸ್‌ಯುಸಿಐ ಪಕ್ಷದ ಗುರುತು ಆಟೋ ರಿಕ್ಷಾ ಗುರುತಿಗೆ ಮತ ನೀಡಬೇಕೆಂದು ವಿನಂತಿ ಮಾಡಿದರು. ಈ ಬೀದಿಬದಿ ಸಭೆಯಲ್ಲಿ ಎಸ್‌ಯುಸಿಐ ಪಕ್ಷದ ಮುಖಂಡರಾದ ಶರಣಪ್ಪ ಉದ್ಬಾಳ್, ಸಿದ್ದಲಿಂಗ ರೆಡ್ಡಿ, ಶರಣು ಪಾಟೀಲ್, ರಮೇಶ್, ಗಂಗರಾಜ್ ಅಳ್ಳಳ್ಳಿ, ಶಾರದಾ ಗಡ್ಡಿ, ದೇವರಾಜ್, ಮಂಜುಳಾ ಮಜ್ಜಿಗೆ ಮುಂತಾದವರು ಭಾಗವಹಿಸಿದ್ದರು.24ಕೆಪಿಎಲ್28

ಕಮ್ಯುನಿಸ್ಟ್‌ ಪಕ್ಷದ ಅಭ್ಯರ್ಥಿ ಶರಣು ಗಡ್ಡಿ ಪರವಾಗಿ ಕೊಪ್ಪಳ ನಗರದ ಲೇಬರ್ ಸರ್ಕಲ್‌ನಲ್ಲಿ ಪ್ರಚಾರ ನಡೆಯಿತು.