ಸಾರಾಂಶ
ಓರವಿಲ್ ಫರ್ನಾಂಡಿಸ್
ಹಳಿಯಾಳ: ರಾಜಕೀಯದ ಹೈವೋಲ್ಟೆಜ್ ಕ್ಷೇತ್ರವೆಂದೇ ಗುರುತಿಸಿಲ್ಪಡುವ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯ ಜಿದ್ದಾಜಿದ್ದಿ, ಪೈಪೋಟಿ ಇನ್ನೂವರೆಗೆ ಗೋಚರಿಸಿಲ್ಲ.ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವ ಈ ಕ್ಷೇತ್ರದ ಬಹುತೇಕ ಮತದಾರರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಪರಿಪಾಠ ಬೆಳೆಸಿಕೊಂಡು ಬಂದಿರುವಂತಿದೆ. ಹಾಗಾಗಿ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಲೀಡ್ ಪಡೆಯುತ್ತಿದೆ. ಬಿಜೆಪಿ ಹಳೆಯ ಪರಿಪಾಠ ಮುಂದುವರಿಯುವ ನಂಬಿಕೆಯಲ್ಲಿದೆ. ಇತ್ತ ಕಾಂಗ್ರೆಸ್ ಲೋಕಸಭಾ ಚುನಾವಣೆ ಸಮಯದಲ್ಲಿ ಹಳಿಯಾಳ ಕ್ಷೇತ್ರದಲ್ಲಿ ಬದಲಾಗುವ ಟ್ರೆಂಡನ್ನು ನಿಯಂತ್ರಿಸಲು ಕೈಗೊಳ್ಳುವ ತಂತ್ರವನ್ನು ಇನ್ನೂ ಬಿಚ್ಚಿಟ್ಟಿಲ್ಲ.ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಸ್ಥಳೀಯ ಶಾಸಕ ದೇಶಪಾಂಡೆ ಅವರೊಂದಿಗೆ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನಲ್ಲಿ ಒಂದು ಸುತ್ತಿನ ಕಾರ್ಯಕರ್ತರ ಸಮಾವೇಶ ಹಾಗೂ ಪ್ರಚಾರ ಸಭೆಯನ್ನು ಮುಗಿಸಿದ್ದಾರೆ. ಅಲ್ಲದೇ ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆಯವರು ಹಳಿಯಾಳ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಪ್ರಚಾರವನ್ನು ನಡೆಸಿ ಕಾಂಗ್ರೆಸ್ ಪರ ಮತಯಾಚಿಸಿದ್ದಾರೆ.ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಹ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಸುತ್ತಿನ ಕಾರ್ಯಕರ್ತರ ಸಮಾವೇಶ ಮತ್ತು ಪ್ರಚಾರ ಸಭೆ ನಡೆಸಿದ್ದಾರೆ.
ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿ ಆದ ಮೈತ್ರಿಯ ಪರಿಣಾಮ ಹಳಿಯಾಳದಲ್ಲಿ ಕಂಡುಬಂದಿದೆ. ರಾಜಕೀಯದ ಕಟ್ಟಾ ಎದುರಾಳಿಗಳಾಗಿರುವ ಎಸ್.ಎಲ್. ಘೋಟ್ನೇಕರ ಹಾಗೂ ಸುನೀಲ ಹೆಗಡೆ ಪರಸ್ಪರ ತಮ್ಮ ರಾಜಕೀಯ ವೈರತ್ವವನ್ನು ಬದಿಗಿಟ್ಟು ಕಾಗೇರಿ ಅವರನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಇಬ್ಬರೂ ಜತೆಗೂಡಿ ಪ್ರಚಾರ ಮಾಡಿ ಕಾಗೇರಿ ಗೆಲುವಿಗೆ ಶ್ರಮಿಸುತ್ತಿದ್ದಾರೆ.ಪ್ರಚಾರದಲ್ಲಿ ಬಿಜೆಪಿ ಮುಂದೆ: ಹಳಿಯಾಳ ಕ್ಷೇತ್ರದಲ್ಲಿ ಸದ್ಯದ ಮಟ್ಟಿಗೆ ಪ್ರಚಾರದಲ್ಲಿ ಹಾಗೂ ಸಭೆಗೆ ಮತದಾರರನ್ನು ಸೇರಿಸುವಲ್ಲಿ ಬಿಜೆಪಿಯು ಕಾಂಗ್ರೆಸ್ಸಿನಿಂದ ತುಸು ಮುಂದಿರುವಂತೆ ಕಂಡುಬರುತ್ತಿದೆ. ವಿಧಾನಸಭೆ ಚುನಾವಣೆಯ ಸಮಯದಲ್ಲಿ ತೋರಿದ ಪೈಪೋಟಿ, ತುರುಸಿನ ಪ್ರಚಾರದ ಹುಮ್ಮಸ್ಸು ಕಾಂಗ್ರೆಸಿನಲ್ಲಿ ಕುಸಿದಂತೆ ಕಂಡುಬರುತ್ತಿದೆ.
ಏ. 26ರಿಂದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಎರಡನೇ ಸುತ್ತಿನ ಪ್ರಚಾರ ಸಭೆಯನ್ನು ಆರಂಭಿಸಲಿದ್ದಾರೆ. ಕ್ಷೇತ್ರದ ಮೂರು ತಾಲೂಕುಗಳಲ್ಲಿ ಜಿಪಂ ವ್ಯಾಪ್ತಿಯಲ್ಲಿ ಪ್ರಚಾರ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇನ್ನೂ ಚುನಾವಣೆಗೆ ರಂಗು ಬರಲಿದೆಯೇ ಎಂದು ಕಾದು ನೋಡಬೇಕಿದೆ.ಕಾಂಗ್ರೆಸ್ ಸೇರುವ ಇಂಗಿತ: ಗ್ರಾಪಂ, ಜಿಪಂ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ, ಮತದಾರರ ಸಭೆ ನಡೆಸಿ ಪ್ರಚಾರವನ್ನು ಆರಂಭಿಸಿದ್ದೇವೆ. ಬಿಜೆಪಿಯೊಂದಿಗೆ ಮೈತ್ರಿಯಾದ ಹಿನ್ನೆಲೆ ಸಾಕಷ್ಟು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿ ಸಂಪರ್ಕದಲ್ಲಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಸುಭಾಸ್ ಕೊರ್ವೇಕರ ತಿಳಿಸಿದರು.ಅಭಿಯಾನ: ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿ. ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಭೆಯನ್ನು ನಡೆಸಿ ಸಂಘಟನೆ ಮತ್ತು ಪ್ರಚಾರವನ್ನು ನಡೆಸಿದ್ದಾರೆ. ನಮ್ಮ ಅಭ್ಯರ್ಥಿ ಕಾಗೇರಿಯವರು ಈಗಾಗಲೇ ಎರಡು ಸುತ್ತು ಪ್ರಚಾರವನ್ನು ಮುಗಿಸಿದ್ದಾರೆ. ಸದ್ಯ ಎಲ್ಲೆಡೆ ಮನೆ ಮನೆಗೆ ಸಂಪರ್ಕ ಅಭಿಯಾನವನ್ನು ಆರಂಭಿಸಿದ್ದೇವೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ತಿಳಿಸಿದರು.