ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಆನ್‌ಲೈನ್ ಗೇಮ್ ನಿಂದ ಹಣ ಕಳೆದುಕೊಂಡು ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಲೂರು ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಪುಷ್ಪಗಿರಿ ಲಾಡ್ಜ್ ನಲ್ಲಿ ನಡೆದಿದೆ.23 ವರ್ಷದ ರಾಕೇಶ್ ಗೌಡ ಎಂಬ ಯುವಕ ನೇಣಿಗೆ ಶರಣಾಗಿದ್ದಾನೆ. ಮೃತ ರಾಕೇಶ್ ಗೌಡ ತಾಲೂಕಿನ ಚೋಕನಹಳ್ಳಿ ಗ್ರಾಮದವನಾಗಿದ್ದು, ಇವನು ಟಾಟಾ ಕ್ಯಾಪಿಟಲ್ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಹಲವಾರು ತಿಂಗಳಿಂದ ಆನ್‌ಲೈನ್ ಗೇಮ್ ನಲ್ಲಿ ರಾಕೇಶ್ ಗೌಡ ಮಗ್ನನಾಗಿದ್ದ. ರಮ್ಮಿ ಆನ್‌ಲೈನ್ ಗೇಮ್ ನಲ್ಲಿ ಆಟವಾಡಿ ಲಕ್ಷಾಂತರ ರುಪಾಯಿ ಕಳೆದುಕೊಂಡಿದ್ದ. ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಚೋಕನಹಳ್ಳಿಯಿಂದ ಬೇಲೂರಿನ ಪುಷ್ಪಗಿರಿ ಲಾಡ್ಜ್ ಗೆ ಬಂದಿದ್ದಾನೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಡೆತ್ ನೋಟ್ ನಲ್ಲಿ ಅವರ ತಾಯಿಗೆ ಕ್ಷಮೆ ಕೇಳಿ, ರಮ್ಮಿ ಆನ್‌ಲೈನ್ ಗೇಮ್ ಬ್ಯಾನ್ ಮಾಡಬೇಕು, ಯಾರೂ ಆನ್ ಲೈನ್ ಗೇಮ್ ಆಡಬೇಡಿ ಎಂದು ಮನವಿ ಮಾಡಿದ್ದು, ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ನನ್ನ ಅಂತಿಮ ದರ್ಶನಕ್ಕೆ ಬರಬೇಕು ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಜೆಯಾದರೂ ರೂಮ್ ನಿಂದ ಯುವಕ ಹೊರಬಂದಿಲ್ಲ. ಲಾಡ್ಜ್ ನವರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೇಲೂರು ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದಾಗ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.