ದನ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ಯುವಕ ಸಾವು

| Published : Nov 04 2024, 12:20 AM IST

ದನ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ಯುವಕ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಯುವಕನ ಮೇಲೆ ಏಕಾಏಕಿ ದಾಳಿ ನಡೆಸಿದ ಹೋರಿಯೊಂದು ಎದೆಯ ಭಾಗಕ್ಕೆ ತೀವ್ರವಾಗಿ ತಿವಿದು ಗಾಯಗೊಳಿಸಿತು. ಗಾಯಾಳು ಯುವಕನನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಮುಂಡಗೋಡ: ದನ ಬೆದರಿಸುವ ಸ್ಪರ್ಧೆ ವೀಕ್ಷಿಸುತ್ತಿದ್ದ ಯುವಕನಿಗೆ ಹೋರಿ ತಿವಿದು ಸಾವಿಗೀಡಾದ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ. ಪರಮೇಶ ಸಿದ್ದಪ್ಪ ಹರಿಜನ (೨೧) ಮೃತಪಟ್ಟ ದುರ್ದೈವಿ.

ದೀಪಾವಳಿ ಬಲಿಪಾಡ್ಯ ಪ್ರಯುಕ್ತ ಚಿಗಳ್ಳಿ ಗ್ರಾಮದಲ್ಲಿ ದನ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಸುತ್ತಮುತ್ತ ಪ್ರದೇಶಗಳಿಂದ ನೂರಾರು ಹೋರಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಇದನ್ನು ವೀಕ್ಷಿಸುತ್ತಿದ್ದ ಯುವಕನ ಮೇಲೆ ಏಕಾಏಕಿ ದಾಳಿ ನಡೆಸಿದ ಹೋರಿಯೊಂದು ಎದೆಯ ಭಾಗಕ್ಕೆ ತೀವ್ರವಾಗಿ ತಿವಿದು ಗಾಯಗೊಳಿಸಿತು. ಗಾಯಾಳು ಯುವಕನನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಮುಂಡಗೋಡ: ವ್ಯಕ್ತಿಯೋರ್ವ ಪತ್ನಿಯ ತವರು ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ತಾಲೂಕಿನ ಇಂದೂರಕೊಪ್ಪ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ನಂದಿಕಟ್ಟಾ ಗ್ರಾಮದ ಅರವಿಂದ ಚಿತ್ತರಗಿ (೩೫) ಎಂಬುವರೇ ಬೆಂಕಿಗಾಹುತಿಯಾದ ವ್ಯಕ್ತಿ.ದೀಪಾವಳಿ ಹಬ್ಬದ ನಿಮಿತ್ತ ಶನಿವಾರ ಬೆಂಗಳೂರಿನಿಂದ ಸ್ವಗ್ರಾಮ ನಂದಿಕಟ್ಟಾ ಗ್ರಾಮಕ್ಕೆ ಆಗಮಿಸಿದ್ದ ಈತ ಅದೇ ರಾತ್ರಿ ಪತ್ನಿಯ ತವರು ತಾಲೂಕಿನ ಇಂದೂರಕೊಪ್ಪ ಗ್ರಾಮದ ಮನೆಗೆ ತೆರಳಿ ಮಾವನ ಮನೆಯ ಮುಂಭಾಗದಲ್ಲೇ ಪೆಟ್ರೋಲ್ ಸುರಿದುಕೊಂಡಿದ್ದಾನೆ.

ದೀಪಾವಳಿ ನಿಮಿತ್ತ ಹಚ್ಚಿಡಲಾಗಿದ್ದ ದೀಪದಿಂದ ಬೆಂಕಿ ತಗುಲಿ ಏಕಾಏಕಿ ಹೊತ್ತಿ ಉರಿದಿದೆ. ತಕ್ಷಣ ಮನೆಯವರು ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸಿ, ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾನೆ. ಅರವಿಂದ ಅವರಿಗೆ ಪತ್ನಿ ಹಾಗೂ ಓರ್ವ ಪುತ್ರಿ, ಓರ್ವ ಪುತ್ರ ಇದ್ದಾರೆ. ಕಳೆದ ೫ ವರ್ಷಗಳ ಹಿಂದೆ ಇಂದೂರಕೊಪ್ಪ ಗ್ರಾಮದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣವಿರಬಹುದು ಎನ್ನಲಾಗುತ್ತಿದೆ. ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.