ಸಾರಾಂಶ
- ಜೆಸ್ಕಾಂ ನಿರ್ಲಕ್ಷ್ಯತನ ಆರೋಪ: ನಾರಾಯಣಪುರ ಗ್ರಾಮಸ್ಥರ ಆಕ್ರೋಶ
----ಕನ್ನಡಪ್ರಭ ಕೊಡೇಕಲ್ ವಾರ್ತೆ
ತುಂಡರಿಸಿ ಬಿದ್ದ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಷದಿಂದ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಾರಾಯಣಪುರ ಗ್ರಾಮದ ಹೊರವಲಯದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.ನಾರಾಯಣಪುರ ಗ್ರಾಮದ ಸಾಬಣ್ಣ ತಂದೆ ಗಂಗಪ್ಪ (21) ಶನಿವಾರ ಬೆಳಿಗ್ಗೆ ಪೊರಕೆ ತಯಾರಿಸಲು ಬೇಕಾಗುವ ಹುಲ್ಲನ್ನು ಕೊಯ್ದುಕೊಂಡು ಬರಲು ಹೊರವಲಯದ ಚೆಕ್ ಪೋಸ್ಟ್ ಬಳಿಯ ಹಳ್ಳಕ್ಕೆ ತೆರಳಿದಾಗ, ಅಲ್ಲಿ ತುಂಡರಿಸಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ತಂಡೋಪತಂಡವಾಗಿ ಘಟನಾ ಸ್ಥಳಕ್ಕೆ ತೆರಳಿದ ಗ್ರಾಮಸ್ಥರು ಯುವಕನ ಶವ ನೋಡಿ ಆಘಾತಕ್ಕೊಳಗಾದರು. ಕುಟುಂಬ ವರ್ಗದ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ವಿದ್ಯುತ್ ತಂತಿ ತಗುಲಿ ಯುವಕ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸ್ ಠಾಣೆ, ಜೆಸ್ಕಾಂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೈದ್ಯರು ಶವಪರೀಕ್ಷೆ ನಡೆಸಿದ್ದಾರೆ. ಈ ಕುರಿತು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ರಾಜಶೇಖರ ರಾಠೋಡ ತಿಳಿಸಿದರು.ಜೆಸ್ಕಾಂ ವಿರುದ್ಧ ಆಕ್ರೋಶ: ಮುಂಗಾರು ಪೂರ್ವ ಏಕಾಏಕಿ ಬಿರುಗಾಳಿಯಿಂದ ಕೂಡಿದ ಅಕಾಲಿಕ ಮಳೆಯಿಂದ ವಿದ್ಯುತ್ ತಂತಿ ತುಂಡಾಗುವುದು ಸಾಮಾನ್ಯ. ಗುರುವಾರ ರಾತ್ರಿಯಂದು ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ವಿದ್ಯುತ್ ತಂತಿ ತುಂಡರಿಸಿದ್ದರೂ ಅದನ್ನು ದುರಸ್ತಿಗೊಳಿಸದೇ ಜೆಸ್ಕಾಂನವರು ನಿರ್ಲಕ್ಷ್ಯ ವಹಿಸಿರುವುದೇ ಯುವಕನ ಸಾವಿಗೆ ಕಾರಣ ಎಂದು ಸ್ಥಳೀಯರು ಮತ್ತು ಕುಟುಂಬ ವರ್ಗದವರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದರು. ಮೃತ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಕುಟುಂಬಸ್ಥರು, ಸ್ಥಳೀಯರು ಒತ್ತಾಯಿಸಿದ್ದಾರೆ.
--12ವೈಡಿಆರ್11 : ಸಾಬಣ್ಣ ಕೊರವರ, ಮೃತ ಯುವಕ.
12ವೈಡಿಆರ್12 : ತುಂಡರಿಸಿ ಬಿದ್ದ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಷದಿಂದ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಸಮೀಪದ ನಾರಾಯಣಪುರ ಗ್ರಾಮದ ಹೊರವಲಯದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.