ಸಾರಾಂಶ
ಕೂಡ್ಲಿಗಿ: ಸ್ನೇಹಿತರೊಂದಿಗೆ ಕೆರೆ ಕೊಡಿ ಬಳಿ ತೆರಳಿ ಸೆಲ್ಫಿ ತೆಗೆಯಲು ಹೋಗಿ ಗಂಡಬೊಮ್ಮನಹಳ್ಳಿ ಕೆರೆಯಲ್ಲಿ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ.
ಮೃತ ಯುವಕನನ್ನು ಕೂಡ್ಲಿಗಿ ತಾಲೂಕು ಕೆ.ದಿಬ್ಬದಹಳ್ಳಿ ಗ್ರಾಮದ ಚೇತನ್ ಕುಮಾರ್ (21) ಎಂದು ಗುರುತಿಸಲಾಗಿದೆ. ಕುಟುಂಬದವರ ಜತೆಗೂಡಿ ಕೋಡಿ ಬಿದ್ದ ಕೆರೆ ನೋಡಲು ತೆರಳಿದಾಗ ಇಬ್ಬರು ಸ್ನೇಹಿತರೊಂದಿಗೆ ತುಂಬಿದ ಕೆರೆ ಕೋಡಿ ಬಳಿ ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದು, ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಈ ವೇಳೆ ಆತನನ್ನು ರಕ್ಷಿಸುವ ಪ್ರಯತ್ನ ವಿಫಲವಾಗಿದೆ.ವಿಷಯ ತಿಳಿಯುತ್ತಿದ್ದಂತೆ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಶುಕ್ರವಾರ ರಾತ್ರಿ ಕೆ.ದಿಬ್ಬದಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಮೃತ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿದರು.ಅನೈತಿಕ ಸಂಬಂಧ: ಪತ್ನಿಯ ಪ್ರಿಯಕರನ ಕೊಲೆ
ಹಗರಿಬೊಮ್ಮನಹಳ್ಳಿ: ತಾಲೂಕಿನ ಚಿಲುಗೋಡು ಗ್ರಾಮದಲ್ಲಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆನಂದೇವನಹಳ್ಳಿ ಬಸವರಾಜ್ (೨೬) ಎಂಬಾತನನ್ನು ವಿಜಯದಶಮಿ ಹಬ್ಬದ ಶನಿವಾರ ಮಧ್ಯಾಹ್ನ ೧ ಗಂಟೆಗೆ ಕೊಡಲಿಯಿಂದ ಕೊಚ್ಚಿ ಕೊಲೆಮಾಡಿದ ಘಟನೆ ಜರುಗಿದೆ.ಕೊಲೆ ಮಾಡಿದ ವ್ಯಕ್ತಿಯನ್ನು ಚಿಲುಗೋಡು ಗ್ರಾಮದ ಬಸರಕೋಡು ಫಕ್ಕೀರಸ್ವಾಮಿ ಎಂದು ಗುರುತಿಸಲಾಗಿದೆ. ಕೊಲೆಯಾದ ಯುವಕ ಬಸವರಾಜ್ ಫಕ್ಕೀರಸ್ವಾಮಿ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ.
ಮೂರು ತಿಂಗಳ ಹಿಂದೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ತಾಲೂಕಿನ ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ನನ್ನ ಹೆಂಡತಿ ಕಾಣೆ ಆಗಿದ್ದಾಳೆ ಎಂದು ಬಸರಕೋಡು ಫಕ್ಕೀರಸ್ವಾಮಿ ದೂರು ನೀಡಿದ್ದರು. ದೂರು ನೀಡಿ ತಿಂಗಳ ಬಳಿಕ ಆನಂದೇವನಳ್ಳಿ ಬಸವರಾಜ್ ಮತ್ತು ಫಕ್ಕೀರಸ್ವಾಮಿ ಹೆಂಡತಿಯನ್ನು ಪೊಲೀಸರು ಪತ್ತೆ ಮಾಡಿ ಠಾಣೆಗೆ ಕರೆ ತಂದಿದ್ದರು. ನಂತರ ರಾಜಿ ಪಂಚಾಯ್ತಿ ಮೂಲಕ ಪರಸ್ಪರ ಮುಚ್ಚಳಿಕೆ ಪತ್ರ ಬರೆದು ಕೊಟ್ಟು, ಫಕ್ಕೀರಸ್ವಾಮಿ ತನ್ನ ಹೆಂಡತಿಯೊಂದಿಗೆ ಜೀವನ ನಡೆಸುತ್ತಿದ್ದರು. ಈ ಘಟನೆಯ ನಂತರ ಊರು ತೊರೆದಿದ್ದ ಬಸವರಾಜ್ ಕೆಲ ದಿನಗಳ ಹಿಂದೆ ಊರಿಗೆ ಬಂದಿದ್ದನು. ಮತ್ತೆ ತನ್ನ ಹೆಂಡತಿಯೊಂದಿಗೆ ಸಂಬಂಧ ಇದೆ ಎಂದು ಶಂಕೆಯಿಂದ ಕಣ್ಣಿಗೆ ಬಿದ್ದ ಬಸವರಾಜ್‌ನನ್ನು ಚೀಲಗೋಡು ಬಸ್ ನಿಲ್ದಾಣದ ಬಳಿ ತಂಬ್ರಹಳ್ಳಿ ಹಗರಿಬೊಮ್ಮನಹಳ್ಳಿ ಮುಖ್ಯ ರಸ್ತೆಯ ಪಕ್ಕದ ವೀರ ಯೋಧ ಮೌನೇಶ್ ಪುತ್ಥಳಿ ಮುಂಭಾಗದಲ್ಲೇ ಕೊಡಲಿಯಿಂದ ತಲೆ ಮತ್ತು ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ ೧೦೦ ಮೀಟರ್ ದೂರ ಓಡಿ ಹೋಗಿ ರಸ್ತೆಯಲ್ಲಿಯೇ ಕೊಡಲಿ ಬಿಟ್ಟು ತಂಬ್ರಹಳ್ಳಿ ಪೋಲಿಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.ಕೊಲೆಯಾದ ಶವದ ಮುಂದೆ ಕುಟುಂಬದವರು ರೋಧಿಸುತ್ತಿದ್ದದ್ದು ಕಂಡುಬಂತು. ಸ್ಥಳಕ್ಕೆ ಸಿಪಿಐ ವಿಕಾಸ್ ಲಮಾಣಿ, ತಂಬ್ರಹಳ್ಳಿ ಪಿಎಸ್‌ಐ ಗುರುಚಂದ್ರ ಯಾದವ್ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.ಒಂದೇ ಹಗ್ಗದ ಕುಣಿಕೆಗೆ ಶರಣಾದ ವಿವಾಹಿತ ಪ್ರೇಮಿಗಳು
ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿ ವಿವಾಹಿತ ಪ್ರೇಮಿಗಳಿಬ್ಬರು ಒಂದೇ ಹಗ್ಗದ ಕುಣಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ಜರುಗಿದೆ.ರಾಮನಗರ ತಾಲೂಕು ಕಾವೇರಿ ದೊಡ್ಡಿಯವರಾದ ಇಬ್ಬರೂ, ಬೇರೆ ಬೇರೆ ಮದುವೆಯಾಗಿದ್ದಾರೆ. ಆದರೆ, ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಮೃತ ಪುರುಷ ರಮೇಶ ದೊಡ್ಡಮಲ್ಲಯ್ಯ (34) ಮಹಿಳೆ ಪದ್ಮ (34) ಗಂಡ ವೆಂಕಟರಮಣ ಎಂದು ತಿಳಿದು ಬಂದಿದೆ.
ಅ. 9ರಂದು ಬುಧವಾರ ಮಧ್ಯಾಹ್ನ ಸ್ವಗ್ರಾಮದಿಂದ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿ, ಬೈಕ್ ಅನ್ನು ಚನ್ನಪಟ್ಟಣ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ, ಅಲ್ಲಿಂದ ಸಾರಿಗೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿ ಗುರುವಾರ ಸುಕ್ಷೇತ್ರ ಮೈಲಾರಕ್ಕೆ ಬಂದಿದ್ದಾರೆ.ಬೆಳಗ್ಗೆ ಮೈಲಾರದಲ್ಲಿ ಬಟ್ಟೆ ಖರೀದಿಸಿ ನಂತರ ದೇವರ ದರ್ಶನ ಪಡೆದು, ಪ್ರಸಾದವನ್ನು ಸ್ವೀಕರಿಸಿ ಸಂಜೆ ವರೆಗೂ ಸುಕ್ಷೇತ್ರದೆಲ್ಲೆಡೆ ಹಾಗೂ ನದಿಯ ತೀರದಲ್ಲಿ ಓಡಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ನಂತರ ಗುರುವಾರ ತಡರಾತ್ರಿ ಇವರಿಬ್ಬರು ತುಂಗಭದ್ರಾ ನದಿ ತೀರದಲ್ಲಿರುವ ಮರದ ಕೊಂಬೆಗೆ ಒಂದೆ ಹಗ್ಗದಲ್ಲಿ ನೇಣು ಬಿಗಿದುಕೊಂಡಿದ್ದಾರೆ.
ಮೃತ ರಮೇಶನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೃತ ಪದ್ಮಳಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಹಿರೇಹಡಗಲಿ ಪಿಎಸ್ಐ ಭರತ ರೆಡ್ಡಿ ಎಎಸ್ಐ ಮಲ್ಲಿಕಾರ್ಜುನ ನಾಯ್ಕ ಹಾಗೂ ಸಿಬ್ಬಂದಿ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.