ಕನ್ನಡಪ್ರಭ ವಾರ್ತೆ ತುರುವೇಕೆರೆ
ಕ್ಷೇತ್ರದ ಯುವಕನೋರ್ವ ಬಿಜೆಪಿಯ ಮಾಜಿ ಶಾಸಕ ಮಸಾಲಾ ಜಯರಾಮ್ 2028ಕ್ಕೆ ಶಾಸಕರಾಗಿ ಆಯ್ಕೆಯಾಗಲಿ ಎಂದು ಹರಕೆ ಹೊತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗಿದ್ದಾರೆ.ಪಟ್ಟಣದ ಗಿರೀಶ್ ಆಚಾರ್ ಎಂಬ ಯುವಕ ಮಸಾಲಾ ಜಯರಾಮ್ ಶಾಸಕರಾಗಲಿ ಎಂಬ ಫಲಕ ಹಿಡಿದು ಕೊಟ್ಟಿಗೆ ಹಾರದಲ್ಲಿರುವ ಅಣ್ಣಪ್ಪಸ್ವಾಮಿಯ ಪಾದಕ್ಕೆ ಈ ಫಲಕವನ್ನಿಟ್ಟು ಪೂಜೆ ಮಾಡಿಸಿ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿದ್ದಾರೆ.
ಈ ವೇಳೆ ಅವರು ಮಾತನಾಡಿ, ನಾನು ಈ ಹಿಂದೆ ಬೇರೆ ಪಕ್ಷದಲ್ಲಿದ್ದೆ. ಕಳೆದ ಚುನಾವಣೆಯಲ್ಲಿ ಮಸಾಲಾ ಜಯರಾಮ್ ವಿರುದ್ಧವೇ ಪ್ರಚಾರ ಮಾಡಿದ್ದೆ. ಆದರೆ ನಾನು ಮಾಡಿದ್ದು ತಪ್ಪು ಎಂಬ ಭಾವನೆ ಕಾಡುತ್ತಿದೆ. ಮಸಾಲಾ ಜಯರಾಮ್ ಶಾಸಕರಾಗಿದ್ದ ವೇಳೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರು. ಆದರೂ ಸಹ ನಾನು ನಂಬಿದ್ದ ಜನಪ್ರತಿನಿಧಿ ಜಯರಾಮ್ ಗಿಂತಲೂ ಉತ್ತಮ ಕಾರ್ಯ ಮಾಡಬಹುದು ಎಂದೆಣಿಸಿದ್ದೆ. ಆದರೆ ಅದು ಹುಸಿಯಾಯಿತು. ನಾನು ಮಾಡಿದ್ದ ತಪ್ಪು ಅರಿವಾಗಿದೆ. ಪಶ್ಚಾತ್ತಾಪಕ್ಕಾಗಿ ನಾನು ಪಾದಯಾತ್ರೆ ಮಾಡಿ ದೇವರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದರು.ಸುಮಾರು 50 ಕಿಮೀ ದೂರ ಪಾದಯಾತ್ರೆಯ ಮೂಲಕ ಕ್ರಮಿಸಿದ ಗಿರೀಶ್ ದಾರಿಯುದ್ದಕ್ಕೂ ಸಿಗುವ ಹಲವಾರು ದೇವಾಲಯಗಳಿಗೆ ತೆರಳಿ ಮಸಾಲಾ ಜಯರಾಮ್ ಫಲಕಕ್ಕೆ ಪೂಜೆ ಸಲ್ಲಿಸಿದ್ದಾರೆ.
ಮಂಜುನಾಥಸ್ವಾಮಿಗೆ ಮುಡಿ ಕೊಡುವೆ:
ಮುಂಬರುವ 2028ರ ಚುನಾವಣೆಯಲ್ಲಿ ಮಸಾಲಾ ಜಯರಾಮ್ ಗೆಲುವು ನೂರಕ್ಕೆ ನೂರು ಸತ್ಯ. ನಮ್ಮ ಹರಕೆಯನ್ನು ಶ್ರೀ ಮಂಜುನಾಥೇಶ್ವರ ಈಡೇರಿಸಿದರೆ ನಾನು ಹಾಗೂ ನನ್ನ ಸ್ನೇಹಿತರು ಮಂಜುನಾಥ ಸ್ವಾಮಿಗೆ ಮುಡಿ ಕೊಡುತ್ತೇವೆ. ಅಲ್ಲದೇ ಪಾದಯಾತ್ರೆ ಮಾಡುವ ಭಕ್ತರಿಗೆ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ದೇವರಲ್ಲಿ ಹರಕೆ ಹೊತ್ತಿದ್ದೇನೆ ಎಂದು ಗಿರೀಶ್ ಆಚಾರ್ ಹೇಳಿದರು.
ಇವರೊಂದಿಗೆ ಲಕ್ಷ್ಮಣ್, ಹೇಮಂತ್, ಗುರುಸಿದ್ದಪ್ಪ, ನವೀನ್ ಸೇರಿ ಹಲವಾರು ಮಂದಿ ಮಸಾಲಾ ಜಯರಾಮ್ ಶಾಸಕರಾಗಲಿ ಎಂದು ಹಾರೈಸಿ ಪಾದಯಾತ್ರೆಯಲ್ಲಿ ತೆರಳಿದ್ದಾರೆ.