ಚಿರತೆ ದಾಳಿಗೆ ಪ್ರಾಣಾಪಾಯದಿಂದ ಪಾರಾದ ಯುವಕ

| Published : Feb 08 2024, 01:36 AM IST

ಸಾರಾಂಶ

ಧಿಕಾರಿಗಳು ಚಿರತೆ ಶೋಧ ಕಾರ್ಯಕ್ಕೆ ತೆರಳುವಾಗ ಗ್ರಾಮಸ್ಥರ ಹಿಂಡಿನೊಂದಿಗೆ ಮುದಕಪ್ಪ ರಾಮಪ್ಪ ಕನಗೇರಿ ತೆರಳಿದ್ದಾಗ ಚಿರತೆ ದಾಳಿ ನಡೆಸಿದೆ. ಸ್ಥಳದಲ್ಲಿದ್ದ ಜನರ, ಅಧಿಕಾರಿಗಳ ಗದ್ದಲದಿಂದ ಚಿರತೆ ಓಡಿ ಹೋಗಿದೆ

ಗಜೇಂದ್ರಗಡ: ಸಮೀಪದ ಜೀಗೇರಿ ಗ್ರಾಮದ ಬಾಳೆತೋಟದಲ್ಲಿ ಕೂಲಿಕೆಲಸ ಮಾಡುತ್ತಿದ್ದ ಯುವಕನೋರ್ವನ ಮೇಲೆ ಬುಧವಾರ ಬೆಳಗ್ಗೆ ಚಿರತೆ ದಾಳಿ ಮಾಡಿದ್ದು, ಕೂದಲೆಳೆ ಅಂತರದಲ್ಲಿ ಉದಯ ಶರಣಪ್ಪ ನಿಡಶೇಸಿ (೧೭) ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಶರಣಪ್ಪ ಆವಾರಿ ಅವರಿಗೆ ಸೇರಿದ ಬಾಳೆತೋಟದಲ್ಲಿ ಬಾಳೆ ಗೊನೆ ಕಡಿಯುವಾಗ ಏಕಾಯೇಕಿ ಚಿರತೆ ದಾಳಿ ಮಾಡಿದ್ದು, ಇದರಿಂದ ಭಯಗೊಂಡ ಇನ್ನುಳಿದ ಕೂಲಿ ಕಾರ್ಮಿಕರು ಜೋರಾಗಿ ಕೂಗಿದ್ದರಿಂದ ಚಿರತೆ ಸ್ಥಳದಿಂದ ಓಡಿ ಹೋಗಿದೆ. ಚಿರತೆ ದಾಳಿಗೆ ತುತ್ತಾಗಿದ್ದ ಯುವಕನನ್ನು ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಕಳೆದ ಕೆಲ ತಿಂಗಳಿನಿಂದ ಪಟ್ಟಣ ಸೇರಿದಂತೆ ಸುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿನ ಗ್ರಾಮಗಳಲ್ಲಿ ಚಿರತೆ ಓಡಾಡುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಜೀಗೇರಿ ಗ್ರಾಮದ ಯಲ್ಲಪ್ಪ ಕಾಡಾದ ಎಂಬುವರರ ಜಮೀನಿನಲ್ಲಿ ಶನಿವಾರ ಅರಣ್ಯ ಇಲಾಖೆಯಿಂದ ಒಂದು ಬೋನ್ ಇಡುವುದರ ಜತೆಗೆ ಗಸ್ತು ಕಾರ್ಯ ನಡೆಸಲಾಗಿದೆ.

ಆದರೆ ಬುಧವಾರ ಬೆಳಗ್ಗೆ ಬೋನ್ ಇಟ್ಟಿದ್ದ ಸ್ಥಳದಿಂದ ಅರ್ಧ ಕಿಮಿ ದೂರದಲ್ಲಿನ ಬಾಳೆತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ ಮಾಡಿದೆ. ಗಾಯಾಳುವಿಗೆ ಚಿಕಿತ್ಸೆ ನೀಡಿದ ವೈದ್ಯಾಧಿಕಾರಿಗಳು ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದರು.

ಜೀಗೇರಿ ಗ್ರಾಮದಲ್ಲಿ ಯುವಕನ ಮೇಲೆ ಚಿರತೆ ದಾಳಿ ಮಾಡಿದ ಘಟನೆ ಮಾಹಿತಿ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ತಾಲೂಕು ಉಪವಲಯ ಅರಣ್ಯ ಅಧಿಕಾರಿ ಪ್ರವೀಣಕುಮಾರ ಸಾಸಿವಿಹಳ್ಳಿ, ಗಾಯಾಳುವಿನ ಆರೋಗ್ಯ ವಿಚಾರಿಸಿ ಸಾಂತ್ವನ ತಿಳಿಸಿದ ಬಳಿಕ ಮೇಲಾಧಿಕಾರಿಗಳಿಗೆ ಘಟನೆಯ ಕುರಿತು ಮಾಹಿತಿ ನೀಡಿದರು.

ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಆಸ್ಪತ್ರೆಯ ವೈದ್ಯಾಧಿಕಾರಿಯೊಂದಿಗೆ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಲ್ಲದೇ ಜೀಗೇರಿ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೈಗೊಂಡಿರುವ ಕ್ರಮ ಮತ್ತು ಘಟನೆ ಬಗ್ಗೆ ಮಾಹಿತಿ ಪಡೆದರು. ಜಿಗೇರಿ ಗ್ರಾಮಕ್ಕೆ ಇನ್ನೂ 2 ಬೋನು ಕಳುಹಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಚಿರತೆ ಶೋಧಕ್ಕೆ ಪೊಲೀಸರನ್ನು ನಿಯೋಜಿಸುವ ಕುರಿತೂ ಭರವಸೆ ನೀಡಿದರು.

ತಾಲೂಕಿನ ಬೈರಾಪೂರ ತಾಂಡಾ, ಬೆಣಚಮಟ್ಟಿ ಕ್ರಾಸ್, ಪ್ಯಾಟಿ, ನಾಗೇಂದ್ರಗಡ, ಕಾಲಕಾಲೇಶ್ವರ ಸೇರಿದಂತೆ ಇನ್ನಿತರ ಗುಡ್ಡಗಾಡು ಪ್ರದೇಶದ ಗ್ರಾಮಗಳಲ್ಲಿ ಚಿರತೆ ಓಡಾಡುತ್ತಿವೆ ಎಂದು ಗ್ರಾಮಸ್ಥರು ಆಗಾಗ ದೂರುತ್ತಿದ್ದಾರೆ. ಕಳೆದ ವರ್ಷ ಭೈರಾಪೂರ ತಾಂಡಾದಲ್ಲಿ ಚಿರತೆ ದನ, ನಾಯಿಗಳ ಮೇಲೆ ದಾಳಿ ಮಾಡಿತ್ತು. ಬಳಿಕ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿತ್ತು. ಈಗ ಜೀಗೇರಿ ಗ್ರಾಮದಲ್ಲಿ ಯುವಕನ ಮೇಲೆ ಚಿರತೆ ದಾಳಿ ಮಾಡಿದ್ದು ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕದ ಜತೆಗೆ ಭಯದ ವಾತಾವರಣ ನಿರ್ಮಾಣವಾಗಿದೆ.

ಮತ್ತೊಬ್ಬ ಕುರಿಗಾಹಿ ಮೇಲೆ ದಾಳಿ: ಜೀಗೇರಿ ಗ್ರಾಮದ ಉದಯ ನಿಡಶೇಸಿ ಮೇಲೆ ದಾಳಿ ನಡೆಸಿದ ಕೆಲ ಸಮಯದ ಅಂತರದಲ್ಲಿ ಅದೇ ಗ್ರಾಮದ ಕುರಿಗಾಹಿ ಉಮೇಶ ದೇವಪ್ಪ ಜಿಗಳೂರ (೨೮) ಎಂಬುವವರ ಮೇಲೂ ಚಿರತೆ ದಾಳಿ ನಡೆಸಿದೆ. ಉಮೇಶ ಅವರ ಕಾಲಿಗೆ ಚಿರತೆ ಕಚ್ಚಿ ಗಾಯಗೊಳಿಸಿದ್ದು, ಆತನಿಗೆ ಗಜೇಂದ್ರಗಡ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

ಕಾರ್ಯಾಚರಣೆ ವೇಳೆ ಚಿರತೆ ದಾಳಿ: ಸಮೀಪದ ಜೀಗೇರಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಚಿರತೆ ದಾಳಿ ಮಾಡಿದ ಬಳಿಕ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಡ್ರೋನ್ ಕ್ಯಾಮೆರಾ ಮೂಲಕ ಚಿರತೆ ಪತ್ತೆ ಕಾರ್ಯ ನಡೆಸಿದ್ದಾರೆ.ಈ ವೇಳೆ ಅಧಿಕಾರಿಗಳು ಚಿರತೆ ಶೋಧ ಕಾರ್ಯಕ್ಕೆ ತೆರಳುವಾಗ ಗ್ರಾಮಸ್ಥರ ಹಿಂಡಿನೊಂದಿಗೆ ಮುದಕಪ್ಪ ರಾಮಪ್ಪ ಕನಗೇರಿ ತೆರಳಿದ್ದಾಗ ಚಿರತೆ ದಾಳಿ ನಡೆಸಿದೆ. ಸ್ಥಳದಲ್ಲಿದ್ದ ಜನರ, ಅಧಿಕಾರಿಗಳ ಗದ್ದಲದಿಂದ ಚಿರತೆ ಓಡಿ ಹೋಗಿದೆ. ದಾಳಿಗೆ ಒಳಗಾದ ಮುದಕಪ್ಪ ಕನಗೇರಿ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಒಂದೇ ದಿನದಲ್ಲಿ ಚಿರತೆ 3 ಜನರ ಮೇಲೆ ದಾಳಿ ನಡೆಸಿದ್ದು, ಜನತೆಗೆ ಮತ್ತಷ್ಟು ಆತಂಕ ಸೃಷ್ಠಿಯಾಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ಕಳೆದ ಒಂದು ತಿಂಗಳಿನಿಂದ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರೂ ಸಹ ಅರಣ್ಯ ಇಲಾಖೆ ಶನಿವಾರ ಬೋನ್ ಅಳವಡಿಸಿದ್ದಾರೆ. ಹಿಂದೆಯೇ ಕಾರ್ಯಾಚರಣೆ ಕೈಗೊಂಡಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ನಿವಾಸಿ ಸಂಜೀವ ದೇಸಾಯಿ ಅರಣ್ಯ ಇಲಾಖೆ ಕಾರ್ಯ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.