ಸಾರಾಂಶ
ಅನೈತಿಕ ಸಂಬಂಧ ಹೊಂದಿದ್ದಾನೆಂದು ತಿಳಿದು ವಿಜಯಪುರಕ್ಕೆ ಬಂದಿದ್ದ ಪುಣೆ ಮೂಲದ ಯುವಕನನ್ನು ಮದುವೆ ಮಂಟಪದಲ್ಲಿ ಅಟ್ಟಾಡಿಸಿ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ತಾನು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ತಿಳಿದು ವಿಜಯಪುರಕ್ಕೆ ಬಂದಿದ್ದ ಪುಣೆ ಮೂಲದ ಯುವಕನನ್ನು ಮದುವೆ ಮಂಟಪದಲ್ಲಿ ಅಟ್ಟಾಡಿಸಿ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.ಪುಣೆ ಮೂಲದ ಅಯಾನ್ ಶೇಖ ಹತ್ಯೆಯಾದ ಯುವಕ. ವಿಜಯಪುರ ಚಪ್ಪರಬಂದ್ ಕಾಲೋನಿಯ ನಿವಾಸಿಯಾದ ಆರೋಪಿ ಹುಸೇನ್‌ಸಾಬ್ ನಂದಿಹಾಳ ಹತ್ಯೆ ಮಾಡಿದ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಹುಸೇನ್ ಸಾಬ್ ನಂದಿಹಾಳನಿಗೂ ಪುಣೆ ಮೂಲದ ಯುವತಿಗೂ ಮದುವೆ ನಿಶ್ಚಿತಾರ್ಥ ನಡೆದಿತ್ತು. ಬಳಿಕ ಆ ಯುವತಿ ಪುಣೆಯ ಅಯಾನ್ ಶೇಖ ಜೊತೆಗೆ ಅಕ್ರಮ ಸಂಬಂಧ ಹೊಂದಿರುವ ವಿಷಯ ಗೊತ್ತಾಗಿದೆ. ಹಿರಿಯರು ಸೇರಿ ಬುದ್ಧಿವಾದ ಹೇಳಿ ವಿವಾದ ಮುಗಿಸಿದ್ದಾರೆ. ಆದರೂ ಅಯಾನ್ ತನ್ನ ಚಾಳಿ ಮುಂದುವರಿಸಿದ್ದರಿಂದ ಹುಸೇನಸಾಬ್ ಆಕ್ರೋಶಗೊಂಡಿದ್ದ. ಸಂಬಂಧಿಕರ ಮದುವೆಗೆ ವಿಜಯಪುರಕ್ಕೆ ಬಂದಿದ್ದ ಅಯಾನ್ ನನ್ನು ಕಲ್ಯಾಣ ಮಂಟಪದ ಬಳಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.ಮದುವೆ ಮಂಟಪದಲ್ಲಿ ಎಲ್ಲರ ಮುಂದೆಯೇ ಅಟ್ಟಾಡಿಸಿಕೊಂಡು ಹೋಗಿ ಹೊಟ್ಟೆ, ಎದೆ ಹಾಗೂ ದೇಹದ ವಿವಿಧ ಭಾಗಗಳಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆಯನ್ನು ಹಲವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಕೊಲೆಯ ಬಳಿಕ ಆರೋಪಿ ಓಡಿ ಹೋಗಿ ತಲೆಮರೆಸಿಕೊಂಡಿದ್ದ. ಘಟನೆ ನಡೆದ 6 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಗೋಳಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.