ಹೊಟ್ಟೆನೋವೆಂದು ಬಂದಿದ್ದ ಯುವಕ ಆಸ್ಪತ್ರೆಯಲ್ಲಿ ಸಾವು

| Published : Sep 12 2025, 12:06 AM IST

ಸಾರಾಂಶ

ನುಗ್ಗೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮೃತ ಯುವಕನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಕೆ.ಆರ್.ಎಸ್ ಪಕ್ಷದ ನಾಯಕರು ಮತ್ತು ಸಾಮಾಜಿಕ ಹೋರಾಟಗಾರರು ಜಿಲ್ಲಾಧಿಕಾರಿ ಲತಾ ಕುಮಾರಿ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ. ಇದು ಕೇವಲ ವೈದ್ಯಕೀಯ ದುರಂತವಲ್ಲ, ನಿರ್ಲಕ್ಷ್ಯದ ಮೂಲಕ ನಡೆದ ಕೊಲೆ. ತಕ್ಷಣವೇ ಡಾ. ಪ್ರವೀಣ್ ಮತ್ತು ನರ್ಸ್ ತ್ರಿವೇಣಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ನುಗ್ಗೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮೃತ ಯುವಕನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಕೆ.ಆರ್.ಎಸ್ ಪಕ್ಷದ ನಾಯಕರು ಮತ್ತು ಸಾಮಾಜಿಕ ಹೋರಾಟಗಾರರು ಜಿಲ್ಲಾಧಿಕಾರಿ ಲತಾ ಕುಮಾರಿ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.ಪ್ರಕರಣ ಸಂಬಂಧ ಸಾಮಾಜಿಕ ಹೋರಾಟಗಾರ ಎಚ್.ಡಿ. ಪ್ರಖ್ಯಾತ್ ಗೌಡ ಮಾಧ್ಯಮಗಳೊಂದಿಗೆ ಮಾತನಾಡಿ, ಚನ್ನರಾಯಪಟ್ಟಣ ತಾಲೂಕು, ನುಗ್ಗೇಹಳ್ಳಿ ಹೋಬಳಿ, ಜಂಬೂರು ಗ್ರಾಮದ ಅಭಿಲಾಷ್ (೨೫ ವರ್ಷ) ಸೆಪ್ಟೆಂಬರ್ ೯ರಂದು ಬೆಳಿಗ್ಗೆ ಹೊಟ್ಟೆನೋವಿನಿಂದಾಗಿ ಚಿಕಿತ್ಸೆಗಾಗಿ ನುಗ್ಗೇಹಳ್ಳಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆದರೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಪ್ರವೀಣ್ ಕುಮಾರ್ ಯಾವುದೇ ಸೂಕ್ತ ವೈದ್ಯಕೀಯ ಪರೀಕ್ಷೆ ಮಾಡದೇ, ನರ್ಸ್ ತ್ರಿವೇಣಿ ಅವರಿಗೆ "ಇಂಜೆಕ್ಷನ್ ನೀಡಿ " ಎಂದು ಸೂಚನೆ ನೀಡಿದರು ಎನ್ನಲಾಗಿದೆ. ನರ್ಸ್ ತ್ರಿವೇಣಿ ಸಹ ವೈದ್ಯರ ಲಿಖಿತ ಪ್ರಿಸ್ಕ್ರಿಪ್ಪನ್ ಪಡೆಯದೇ ನೇರವಾಗಿ ಇಂಜೆಕ್ಷನ್ ನೀಡಿದ ಪರಿಣಾಮ, ಅಭಿಲಾಷ್ ಕ್ಷಣಾರ್ಧದಲ್ಲಿ ಸಾವನ್ನಪ್ಪಿದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಘಟನೆಯ ನಂತರ, ಆತಂಕಗೊಂಡ ಡಾ. ಪ್ರವೀಣ್ ಮತ್ತು ಸಿಬ್ಬಂದಿ, ಮೃತದೇಹವನ್ನು ಕುಟುಂಬದವರ ಗಮನ ತಪ್ಪಿಸಿ ಆ್ಯಂಬುಲೆನ್ಸ್ ಮೂಲಕ ಚನ್ನರಾಯಪಟ್ಟಣ ಆಸ್ಪತ್ರೆಗೆ ಕಳುಹಿಸಲು ಯತ್ನಿಸಿದ್ದಾರೆ. ಮಾರ್ಗ ಮಧ್ಯೆ, "ಇದೀಗ ಅಭಿಲಾಷ್ ಮೃತಪಟ್ಟಿದ್ದಾನೆ " ಎಂದು ವೃದ್ಧ ತಾಯಮ್ಮಗೆ ಸುಳ್ಳು ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ತಾಯಮ್ಮ ಸ್ವತಃ ಮಗನ ಸಾವನ್ನು ಕಣ್ಣಾರೆ ನೋಡಿ ಅಳಲು ತೋಡಿಕೊಂಡಾಗ ಸ್ಥಳೀಯರು ಆ್ಯಂಬುಲೆನ್ಸ್ ತಡೆದು ಮೃತದೇಹವನ್ನು ಮತ್ತೆ ನುಗ್ಗೇಹಳ್ಳಿ ಆಸ್ಪತ್ರೆಗೆ ಹಿಂತಿರುಗಿಸಲು ಒತ್ತಾಯಿಸಿದರು.

ಕುಟುಂಬಸ್ಥರು ಸಾವಿಗೆ ಸಂಬಂಧಿಸಿದ ಪ್ರಶ್ನೆ ಕೇಳಿದಾಗ, ಡಾ. ಪ್ರವೀಣ್ ಕುಮಾರ್ ಅಸಹಕಾರಿಯಾಗಿ ವರ್ತಿಸಿ, "ನನಗೂ ಇದಕ್ಕೂ ಸಂಬಂಧವಿಲ್ಲ, ನಿಮ್ಮ ಮಗನ ಗ್ರಹಚಾರ ಕೆಟ್ಟಿತ್ತು. ನಾನು ಏನು ಮಾಡಲಿ? ಬೇಕಾದರೆ ಪೊಲೀಸ್, ಕೋರ್ಟ್‌ಗೆ ಹೋಗಿ ಕೇಸು ಹಾಕಿಕೊಳ್ಳಿ " ಎಂದು ಅವಹೇಳನಕಾರಿ ಶಬ್ಧ ಬಳಸಿ ಸಾರ್ವಜನಿಕವಾಗಿ ಕುಟುಂಬವನ್ನು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಭಿಲಾಷ್ ಸಾವಿಗೆ ಕಾರಣರಾದ ನರ್ಸ್ ತ್ರಿವೇಣಿ, ಇತ್ತೀಚೆಗೆ ಹಾಸನ ಜಿಲ್ಲಾಡಳಿತದಿಂದಲೇ ಕರ್ತವ್ಯ ಲೋಪದ ಆರೋಪದಡಿ ವರ್ಗಾವಣೆಗೊಂಡಿದ್ದರು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಸಹ ನಿರ್ಲಕ್ಷ್ಯ ಮುಂದುವರಿದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇದು ಕೇವಲ ವೈದ್ಯಕೀಯ ದುರಂತವಲ್ಲ, ನಿರ್ಲಕ್ಷ್ಯದ ಮೂಲಕ ನಡೆದ ಕೊಲೆ. ತಕ್ಷಣವೇ ಡಾ. ಪ್ರವೀಣ್ ಮತ್ತು ನರ್ಸ್ ತ್ರಿವೇಣಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಕಿಡಿಕಾರಿದರು. ತಕ್ಷಣವೇ ಇಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇಲಾಖಾ ಮಟ್ಟದಲ್ಲಿ ಗಂಭೀರ ವಿಚಾರಣೆ ನಡೆಯಬೇಕು. ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಲಾಗಿದೆ. ಈ ಘಟನೆ ಜಿಲ್ಲೆಯಾದ್ಯಂತ ವೈದ್ಯಕೀಯ ವ್ಯವಸ್ಥೆಯ ಮೇಲಿನ ನಂಬಿಕೆಗೆ ದೊಡ್ಡ ಹೊಡೆತ ನೀಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದರೆ ಜನರು ಎಲ್ಲಿ ಹೋಗಬೇಕು? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೀ ಸಂದರ್ಭದಲ್ಲಿ ಕೆ.ಆರ್.ಎಸ್. ಪಕ್ಷದ ಉಮೇಶ್ ಬೆಳಗುಂಬ, ಮುಖಂಡ ರಮೇಶ್, ಪ್ರಧಾನ ಕಾರ್ಯದರ್ಶಿ ಮಧು ಇತರರು ಉಪಸ್ಥಿತರಿದ್ದರು.