ದೇಶಾಭಿಮಾನ ಸೇರಿದಂತೆ ಇನ್ನಿತರ ಯಾವುದೇ ಗೋಜಿಗೆ ಹೋಗುವುದಿಲ್ಲ.
ಹೂವಿನಹಡಗಲಿ: ಇಂದಿನ ಯುವ ಜನಾಂಗಕ್ಕೆ ಸುತ್ತಾಡಲೊಂದು ಬೈಕ್, ಕೈಗೆ ಮೊಬೈಲ್ ಇದ್ದರೆ ಸಾಕು ಅವರಿಗೆ ದೇಶದಲ್ಲಿರುವ ಜೀವ ವೈವಿಧ್ಯಮ ಪರಿಸರ, ದೇಶಾಭಿಮಾನ ಸೇರಿದಂತೆ ಇನ್ನಿತರ ಯಾವುದೇ ಗೋಜಿಗೆ ಹೋಗುವುದಿಲ್ಲ. ಇಂತಹ ವಾತಾವರಣದಲ್ಲಿ ಇಲ್ಲೊಬ್ಬ ಗ್ರಾಮೀಣ ಭಾಗದ ವಿದ್ಯಾವಂತ 26 ವರ್ಷದ ಯುವಕ ಸೈಕಲ್ ಸವಾರಿ ಮೂಲಕ ಪಂಜಾಬ್ ರಾಜ್ಯದ ಭಗತ್‌ಸಿಂಗ್ ಜನ್ಮ ಸ್ಥಳ ಬಂಗಾಕ್ಕೆ ಹೋಗುತ್ತಿದ್ದಾನೆ.ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಅನತಿ ದೂರದ ಮುದೇನೂರು ಗ್ರಾಮದ ಯುವಕ ನವೀನಕುಮಾರ ಕಡಾರಿ, ಚಿತ್ರಕಲೆಯಲ್ಲಿ ಡಿಪ್ಲೋಮಾ ಪಡೆದಿದ್ದಾನೆ. ಈ ಯುವಕ ರಂಗಾಯಣ, ನಿನಾಸಂ ಸೇರಿದಂತೆ ಸಿನಿಮಾ ಮತ್ತು ಕಿರುತೆರೆಯ ತಾಂತ್ರಿಕ ಶಾಖೆ ನಿರ್ವಹಣೆಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಮುದೇನೂರಿನಿಂದ ಡಿ.24ರಂದು ಸೈಕಲ್ ಪ್ರಯಾಣ ಬೆಳೆಸಿದ ನವೀನ್, ಕಳೆದ ಬಾರಿ 2024ರ ಫೆಬ್ರವರಿ 18ರಂದು ಸುಭಾಶ್ಚಂದ್ರ ಭೋಷ್ ಅವರ ಜನ್ಮಸ್ಥಳ ಓಡಿಶಾ ರಾಜ್ಯದ ಕಟಕ್ ನಗರಕ್ಕೆ ಸೈಕಲ್ ಸವಾರಿ ಮಾಡಿದ್ದ. ಇವರ ಜತೆ ಕೊಪ್ಪಳ ಜಿಲ್ಲೆಯ ಹಿರೇ ಸಿಂದೋಗಿಯ ಶಿವರಾಯಪ್ಪ ನೀರಲೂಟಿ ಕೂಡ ಇವರ ಜತೆ ಸೈಕಲ್ ಸವಾರಿ ಮೂಲಕ ತೆರಳಿದ್ದರು. ಈ ಬಾರಿಯೂ ಒಟ್ಟಿಗೆ ಇಬ್ಬರೂ ಸೈಕಲ್ ಪ್ರಯಾಣ ಮಾಡುತ್ತಿದ್ದಾರೆ.ಪರಿಸರ ಜಾಗೃತಿ:
ದೇಶದಲ್ಲಿ ಅರಣ್ಯ ಪ್ರದೇಶ ನಾಶ ಹಿನ್ನೆಲೆಯಲ್ಲಿ ತಾಪಮಾನದಲ್ಲಿ ಬಹಳಷ್ಟು ಏರುಪೇರು ಆಗುತ್ತಿದೆ. ಸೈಕಲ್ ಪ್ರಯಾಣದ ಜತೆಗೆ ಜನರಲ್ಲಿ ಪರಿಸರ ಬೆಳೆಸಿ, ಜೀವ ವೈವಿಧ್ಯಮ ಉಳಿಸಿ ಎಂಬ ನಾಮಫಲಕ ಹಾಕಿಕೊಂಡು, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಮಯ ಬದುಕು ಮತ್ತು ಮೌಲ್ಯಗಳನ್ನು ಬಿತ್ತುವಂತಹ ಕೆಲಸ ಮಾಡುತ್ತಿದ್ದಾನೆ.ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ ಮೂಲಕ ಪಂಜಾಬ್ ರಾಜ್ಯದ ಭಗತ್‌ಸಿಂಗ್ ಜನ್ಮ ಸ್ಥಳ ಬಂಗಾ 2300 ಕಿ.ಮೀ ದೂರವಿದೆ. 15 ದಿನಗಳವರೆಗೆ ಪ್ರಯಾಣ ಮಾಡಲಿದ್ದಾನೆ. ಯುವಕನ ಪ್ರಯಾಣಕ್ಕೆ ಪ್ರಜ್ಞಾವಂತ ಯುವ ಸಮೂಹ ಶುಭ ಹಾರೈಸಿದ್ದಾರೆ.
ದೇಶದಲ್ಲಿ ವಿಭಿನ್ನ ರೀತಿಯಲ್ಲಿ ಸಾಧನೆ ಮಾಡಿರುವ ಸಾಧಕರನ್ನು ನೋಡಿದ್ದೇನೆ. ಕೆಲವರು ಸೈಕಲ್ ಮೂಲಕ ದೇಶ ಪರ್ಯಟನೆ ಮಾಡಿದ್ದಾರೆ. ಅವರಿಂದ ಸ್ಫೂರ್ತಿ ಪಡೆದು ನಾನು ಕೂಡ ಸೈಕಲ್ ಸವಾರಿ ಮಾಡಬೇಕೆಂಬ ಉದ್ದೇಶದಿಂದ ಕಳೆದ ಬಾರಿ 1600 ಕಿಮೀ ಓಡಿಶಾದ ಕಟಕ್ ನಗರಕ್ಕೆ ಹೋಗಿದ್ದೆ. ಈ ಬಾರಿ ಭಗತ್‌ಸಿಂಗ್ ಜನ್ಮ ಸ್ಥಳ ಬಂಗಾಕ್ಕೆ ಹೋಗುತ್ತಿರುವೆ ಎನ್ನುತ್ತಾರೆ ಸೈಕಲ್ ಸವಾರ ನವೀನಕುಮಾರ್ ಕಡಾರಿ.