ಸಾರಾಂಶ
ಯುವತಿ ರಸ್ತೆಯಲ್ಲಿ ನಡೆದು ಬರುವಾಗ ದ್ವಿಚಕ್ರ ವಾಹನದಲ್ಲಿ ಬಂದ ಕಾಮುಕ ಆಕೆಯ ಬೆನ್ನಿನ ಕೆಳಭಾಗಕ್ಕೆ ಕೈನಿಂದ ಎರಡು ಬಾರಿ ಹೊಡೆದು ಅಸಭ್ಯವಾಗಿ ವರ್ತಿಸಿ ಪರಾರಿ
ಬೆಂಗಳೂರು : ಯುವತಿ ರಸ್ತೆಯಲ್ಲಿ ನಡೆದು ಬರುವಾಗ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದ ಕಾಮುಕನೊಬ್ಬ ಆಕೆಯ ಬೆನ್ನಿನ ಕೆಳಭಾಗಕ್ಕೆ ಕೈನಿಂದ ಎರಡು ಬಾರಿ ಹೊಡೆದು ಅಸಭ್ಯವಾಗಿ ವರ್ತಿಸಿ ಪರಾರಿಯಾಗಿರುವ ಘಟನೆ ಮಾರತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೇವರಬೀಸನಹಳ್ಳಿ ಇಕೋ ವಲ್ಡ್ ಮುಖ್ಯ ಗೇಟ್ ಬಳಿ ಏ.30ರಂದು ರಾತ್ರಿ ಸುಮಾರು 11.40ಕ್ಕೆ ಈ ಘಟನೆ ನಡೆದಿದೆ. 26 ವರ್ಷದ ನೊಂದ ಯುವತಿ ನೀಡಿದ ದೂರಿನ ಮೇರೆಗೆ ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಿ ಆತನ ಪತ್ತೆಗೆ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?:
ದೂರುದಾರ ಯುವತಿ ಇಕೋ ವಲ್ಡ್ ಮುಖ್ಯ ಗೇಟ್ ಬಳಿ ನಡೆದು ಹೋಗುತ್ತಿದ್ದರು. ಈ ವೇಳೆ ನೇರಳೆ ಬಣ್ಣದ ಟಿ ಶರ್ಟ್ ಧರಿಸಿದ್ದ ಅಪರಿಚಿತ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಬಂದಿದ್ದಾನೆ. ಈ ವೇಳೆ ಏಕಾಏಕಿ ಯುವತಿ ಬೆನ್ನ ಕೆಳ ಭಾಗಕ್ಕೆ ಕೈನಿಂದ ಜೋರಾಗಿ ಹೊಡೆದು ಮುಂದೆ ಹೋಗಿದ್ದಾನೆ. ಸ್ವಲ್ಪ ದೂರು ಮುಂದೆ ಹೋಗಿ ತಿರುವು ಪಡೆದು ಮತ್ತೆ ಯುವತಿ ಬಳಿ ಬಂದಿರುವ ಅಪರಿಚಿತ, ಮತ್ತೊಮ್ಮೆ ಯುವತಿ ಹಿಂಭಾಗಕ್ಕೆ ಕೈನಿಂದ ಜೋರಾಗಿ ಹೊಡೆದು ಪರಾರಿಯಾಗಿದ್ದಾನೆ. ಅಪರಿಚಿತ ವ್ಯಕ್ತಿಯ ಧರಿಸಿದ್ದ ನೇರಳೆ ಬಣ್ಣದ ಟಿ ಶರ್ಟ್ ಮೇಲೆ ಈಟ್ ಕ್ಲಬ್ ಎಂಬ ಬರಹ ಇರುವುದು ಕಂಡು ಬಂದಿದೆ.
ದಾರಿಹೋಕರು ಸಹಾಯಕ್ಕೆ ಬರಲಿಲ್ಲ:
ಘಟನೆ ಬಳಿಕ ಯುವತಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಕಪ್ಪು ಬಣ್ಣದ ಸಮವಸ್ತ್ರ ಧರಿಸಿದ್ದ ಕೆಲವು ವ್ಯಕ್ತಿಗಳ ಸಹಾಯ ಕೇಳಿದ್ದಾರೆ. ಆದರೆ, ಯಾರೊಬ್ಬರೂ ಸಹಾಯ ಮಾಡಿಲ್ಲ. ಈ ಸಂಬಂಧ ನೊಂದ ಯುವತಿ ಮಾರತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಾರ್ವಜನಿಕ ಸ್ಥಳದಲ್ಲಿ ತನ್ನ ಘನತೆಗೆ ಧಕ್ಕೆ ಉಂಟು ಮಾಡಿದ ಅಪರಿಚಿತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಅಪರಿಚಿತನ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.