ಸಾರಾಂಶ
ಬೆಂಗಳೂರು : ಕೋಲಾರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರಲ್ಲಿ ಬಾಲಕಿಯರು ಬಟ್ಟೆ ಬದಲಿಸುವ ಸಮಯದ 5000ಕ್ಕೂ ಹೆಚ್ಚು ಫೋಟೋ ಹಾಗೂ ನೂರಾರು ವಿಡಿಯೋ ಸೆರೆಹಿಡಿದ ಆರೋಪದ ಮೇಲೆ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿಯಲ್ಲಿ ಚಿತ್ರಕಲಾ ಶಿಕ್ಷಕನೊಬ್ಬನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.ಪ್ರಕರಣ ಸಂಬಂಧ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಚಿತ್ರಕಲಾ ಶಿಕ್ಷಕ ಮುನಿಯಪ್ಪ (46) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಸಾರಾಸಗಟಾಗಿ ತಿರಸ್ಕರಿಸಿ, ಶಿಕ್ಷಕನ ಕೃತ್ಯವು ನಿಜಕ್ಕೂ ಅಸಭ್ಯ ಹಾಗೂ ಭಯಾನಕವಾಗಿದೆ. ಇಂತಹ ಪ್ರಕರಣವನ್ನು ರದ್ದುಪಡಿಸಲಾಗದು ಎಂದಿದೆ.
ಪೋಕ್ಸೋ ಕಾಯ್ದೆ ಸೆಕ್ಷನ್ 11 ಪ್ರಕಾರ, ಮಕ್ಕಳ ದೇಹ ಅಥವಾ ದೇಹದ ಯಾವುದೇ ಭಾಗವನ್ನು ಅಸಭ್ಯ ರೀತಿಯಲ್ಲಿ ಪ್ರದರ್ಶಿಸುವುದು ಲೈಂಗಿಕ ಕಿರುಕುಳವಾಗುತ್ತದೆ. ಈ ಅಪರಾಧವು ಕಾಯ್ದೆಯ ಸೆಕ್ಷನ್ 12ರಡಿ ಶಿಕ್ಷಾರ್ಹವಾಗಿದೆ. ಪ್ರಕರಣದ ತನಿಖೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ದಾಖಲೆಗಳ ಪ್ರಕಾರ, ಅರ್ಜಿದಾರ ಐದು ಮೊಬೈಲ್ ಫೋನ್ ಹೊಂದಿದ್ದಾರೆ. ಪ್ರತಿ ಮೊಬೈಲ್‌ನಲ್ಲೂ ಸುಮಾರು ಒಂದು ಸಾವಿರ ಚಿತ್ರ ಮತ್ತು ಸಾವಿರಾರು ವಿಡಿಯೋಗಳಿರುವುದು ಆಘಾತ ಮೂಡಿಸಿದೆ. ಇಷ್ಟು ಮೊಬೈಲ್‌ಗಳನ್ನು ಓರ್ವ ಚಿತ್ರಕಲಾ ಶಿಕ್ಷಕ ಏಕೆ ಹೊಂದಿದ್ದ? ಆ ವಿಡಿಯೋ ಹಾಗೂ ಚಿತ್ರಗಳು ಯಾವುವು? ಎಂಬುದು ಪೂರ್ಣ ಪ್ರಮಾಣದ ತನಿಖೆ ಮತ್ತು ವಿಚಾರಣೆಯಿಂದ ಬಹಿರಂಗವಾಗಬೇಕಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಅರ್ಜಿದಾರನ ಕೃತ್ಯವು ಭಯಾನಕತೆಗಿಂತ ಹೆಚ್ಚಿನ ಛಾಯೆ ಹೊಂದಿದೆ. ಒಬ್ಬ ಶಿಕ್ಷಕನಾಗಿ ಇಂತಹ ವಿಡಿಯೋ ಚಿತ್ರೀಕರಿಸಿರುವುದು ನಿಜಕ್ಕೂ ಅಸಭ್ಯ. ಶಿಕ್ಷಕನ ಈ ಕೃತ್ಯ ಕ್ಷಮಿಸುವಂಥದ್ದಲ್ಲ. ಈ ಕೃತ್ಯವಲ್ಲದೆ ಮತ್ಯಾವುದು ಅಪರಾಧವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಅರ್ಜಿದಾರ ಪೂರ್ಣ ಪ್ರಮಾಣದ ವಿಚಾರಣೆಯಿಂದ ಆರೋಪಮುಕ್ತವಾಗಿ ಬರಲಿ. ಅದು ಬಿಟ್ಟು ಈ ಹಂತದಲ್ಲಿ ಪ್ರಕರಣ ರದ್ದುಪಡಿಸಿದರೆ ಶಿಕ್ಷಕನ ಅಕ್ರಮ ಚಟುವಟಿಕೆಗಳನ್ನು ಉತ್ತೇಜಿಸಿದಂತಾಗುತ್ತದೆ ಎಂದು ತೀಕ್ಷ್ಣವಾಗಿ ನುಡಿದ ನ್ಯಾಯಪೀಠ, ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದೆ.
ಪ್ರಕರಣವೇನು?:
ಕೋಲಾರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರಲ್ಲಿ ಚಿತ್ರಕಲಾ ಶಿಕ್ಷಕನಾಗಿ ಮುನಿಯಪ್ಪ ನೇಮಕಗೊಂಡಿದ್ದರು. ಈಗಲೂ ಅದೇ ಹುದ್ದೆಯಲ್ಲಿದ್ದಾರೆ. ವಸತಿ ಶಾಲೆಯಲ್ಲಿ ಬಟ್ಟೆ ಬದಲಿಸುವ ಸಮಯದಲ್ಲಿ ಬಾಲಕಿಯರ ಚಿತ್ರ ಹಾಗೂ ವಿಡಿಯೋವನ್ನು ತೆಗೆದ ಆರೋಪದ ಮೇಲೆ ಅರ್ಜಿದಾರರ ಬಗ್ಗೆ 2023ರ ಡಿ.15ರಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ನಿಯಂತ್ರಣ ಕೊಠಡಿ ಮೂಲಕ ದೂರು ಸ್ವೀಕರಿಸಿದ್ದರು. ನಂತರ ಮಾಸ್ತಿ ಪೊಲೀಸ್ ಠಾಣೆಯಲ್ಲಿ 2023ರ ಡಿ.17ರಂದು ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಎಫ್‌ಐಆರ್ ಮತ್ತು ಆ ಕುರಿತ ಕೋಲಾರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಪೋಕ್ಸೋ ವಿಶೇಷ ಕೋರ್ಟ್)ದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಮುನಿಯಪ್ಪ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
5 ಫೋನ್, ಸಾವಿರಾರು ವಿಡಿಯೋ
- ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ ಎಂಬುವನ ವಿರುದ್ಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ಕೇಸ್
- ಹೆಣ್ಣುಮಕ್ಕಳು ಬಟ್ಟೆ ಬದಲಿಸುವಾಗ ಫೋಟೋ, ವಿಡಿಯೋ ಸೆರೆಹಿಡಿದ ಬಗ್ಗೆ ದೂರು ನೀಡಿದ್ದ ಸಮಾಜ ಕಲ್ಯಾಣ ಇಲಾಖೆ
- ಪೋಕ್ಸೋ ಕೇಸ್ ದಾಖಲು: ಪೊಲೀಸ್ ತನಿಖೆಯ ವೇಳೆ ಆರೋಪಿ ಬಳಿ 5 ಮೊಬೈಲ್, ಸಾವಿರಾರು ವಿಡಿಯೋಗಳು ಪತ್ತೆ
- ಎಫ್‌ಐಆರ್ ಹಾಗೂ ಪೋಕ್ಸೋ ವಿಶೇಷ ಕೋರ್ಟ್‌ನ ವಿಚಾರಣೆ ರದ್ದತಿ ಕೋರಿ ಹೈಕೋರ್ಟ್‌ಗೆ ಶಿಕ್ಷಕನಿಂದ ಅರ್ಜಿ
- ಇದು ಭಯಾನಕ ಕೃತ್ಯ, ಪೂರ್ಣ ವಿಚಾರಣೆ ನಡೆಯಲಿ ಎಂದು ಶಿಕ್ಷಕನ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಪೀಠ------