ಹಸೆಮಣೆ ಏರಬೇಕಿದ್ದ ಯುವತಿ ಅನುಮಾನಸ್ಪದ ಸಾವು

| Published : Nov 21 2023, 12:45 AM IST

ಸಾರಾಂಶ

ನಗರದ ಟಿಬಿ ಡ್ಯಾಂ ಪ್ರದೇಶದ ನಿವಾಸಿ ಐಶ್ವರ್ಯ (೨೭) ಮೃತಪಟ್ಟ ಯುವತಿ. ತಾನು ಮದುವೆಯಾಗಬೇಕಿದ್ದ ಯುವಕ ಅಶೋಕ್ ಎಂಬವನ ಅಜ್ಜಿಯ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿದ್ದ ಯುವತಿಯನ್ನು ಬಳಿಕ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಹೊಸಪೇಟೆಇನ್ನೂ ಮೂರು ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿಯೋರ್ವಳು ನಗರದಲ್ಲಿ ಭಾನುವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ನಗರದ ಟಿಬಿ ಡ್ಯಾಂ ಪ್ರದೇಶದ ನಿವಾಸಿ ಐಶ್ವರ್ಯ (೨೭) ಮೃತಪಟ್ಟ ಯುವತಿ. ತಾನು ಮದುವೆಯಾಗಬೇಕಿದ್ದ ಯುವಕ ಅಶೋಕ್ ಎಂಬವನ ಅಜ್ಜಿಯ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿದ್ದ ಯುವತಿಯನ್ನು ಬಳಿಕ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಅಶೋಕ್ ಮತ್ತು ಮೃತ ಯುವತಿ ಇಬ್ಬರೂ ಕಳೆದ ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಖಾಸಗಿ ಕಂಪನಿಯ ಉದ್ಯೋಗಿಗಳಾಗಿರುವ ಇಬ್ಬರ ಮದುವೆಗೆ ಜಾತಿ ಅಡ್ಡಿ ಬಂದಿತ್ತು. ಆಗ, ಮಾತುಕತೆ ನಡೆದು ಯುವತಿಯನ್ನು ಒಂದು ವಾರ ಮೊದಲೇ ಕಳಿಸಿಕೊಡಬೇಕು. ಮದುವೆಗೆ ಯಾರೂ ಬರಬಾರದು. ಹುಡುಗಿಯ ತಂದೆ, ತಂಗಿ ಮಾತ್ರ ಬರಬೇಕು. ಸಂಬಂಧಿಕರು ಬರಕೂಡದು ಎಂದು ಹೇಳಿದಂತೆ ನ. ೨೩ರಂದು ನಗರದ ಸಾಯಿಲೀಲಾ ರಂಗಮಂದಿರದಲ್ಲಿ ಮದುವೆ ನಡೆಯಬೇಕಿದ್ದ ಹಿನ್ನೆಲೆಯಲ್ಲಿ ನ. ೧೫ರಂದು ಯುವಕ ಅಶೋಕನ ಅಜ್ಜಿ ರಾಜೇಶ್ವರಿ ಅವರ ಮನೆಯಲ್ಲಿ ಯುವತಿ ಐಶ್ವರ್ಯಳನ್ನು ತಂದು ಬಿಡಲಾಗಿತ್ತು.

ಯುವತಿಯನ್ನು ಕರೆತಂದು ಯಾರೂ ಮಾತನಾಡಿಸದೇ ಇರುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದು, ಆರೋಪಿತರು ನೀಡಿದ ಮಾನಸಿಕ ಹಿಂಸೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪಿಸಲಾಗಿದ್ದು, ಅಶೋಕ್, ಅಂಬರೀಶ್ವರನ್, ಕೃಷ್ಣವೇಣಿ, ರಾಜೇಶ್ವರಿ, ಲೋಕನಾಥನ್, ರಘು ಹಾಗೂ ಇತರರ ಮೇಲೆ ಸಂಶಯವಿದೆ ಎಂದು ಇಲ್ಲಿನ ಟಿಬಿ ಡ್ಯಾಂ ಪೊಲೀಸ್ ಠಾಣೆಯಲ್ಲಿ ಯುವತಿಯ ತಂದೆ ಸುಬ್ರಮಣಿ ದಾಖಲಿಸಿರುವ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಶ್ರೀಹರಿಬಾಬು, ಡಿವೈಎಸ್ಪಿ ಟಿ. ಮಂಜುನಾಥ, ಟಿಬಿ ಡ್ಯಾಂ ಪೊಲೀಸ್ ಠಾಣೆ ಪಿಐ ವಿಶ್ವನಾಥ ಹಿರೇಗೌಡರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.೬ ಜನರ ವಶ:

ಯುವತಿಯ ಆತ್ಮಹತ್ಯಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ೬ ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶವ ಹಸ್ತಾಂತರ:

ಇನ್ನೂ ಮೂರು ದಿನದಲ್ಲಿ ಮದುವೆಯಾಗಬೇಕಿದ್ದ ಯುವತಿಯ ಸಾವಿಗೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆಗೆ ನೀಡಿದ ಆರೋಪದಡಿ ಯುವಕ ಅಶೋಕ್ ಸೇರಿ ೬ ಜನರನ್ನು ವಶಕ್ಕೆ ಪಡೆಯಲಾಗಿದೆ. ಶವ ಪರೀಕ್ಷೆ ಬಳಿಕ ಮೃತರ ಕುಟುಂಬಕ್ಕೆ ಶವ ಹಸ್ತಾಂತರ ಮಾಡಲಾಗಿದೆ. ತನಿಖೆ ಮುಂದುವರಿದಿದೆ ಎಂದು ಎಸ್ಪಿ ಬಿ.ಎಲ್. ಶ್ರೀಹರಿಬಾಬು ತಿಳಿಸಿದರು.