ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ ಜೊಮ್ಯಾಟೋ ಡೆಲಿವರಿ ಬಾಯ್‌ ಸೆರೆ

| Published : Jul 17 2024, 01:21 AM IST

ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ ಜೊಮ್ಯಾಟೋ ಡೆಲಿವರಿ ಬಾಯ್‌ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆಯಲ್ಲಿ ಸಂಚರಿಸುವ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಕೃತ್ಯದಲ್ಲಿ ತೊಡಗಿದ್ದ ಜೊಮ್ಯಾಟೋ ಡಿಲಿವರಿ ಬಾಯ್‌ವೊಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಸ್ತೆಯಲ್ಲಿ ಸಂಚರಿಸುವ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಕೃತ್ಯದಲ್ಲಿ ತೊಡಗಿದ್ದ ಜೊಮ್ಯಾಟೋ ಡಿಲಿವರಿ ಬಾಯ್‌ವೊಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕುಂಬಳಗೋಡು ಸಮೀಪದ ಕೆ.ಗೊಲ್ಲಹಳ್ಳಿ ನಿವಾಸಿ ಸಂಜೀವ್ ಕುಮಾರ್ ಬಂಧಿತನಾಗಿದ್ದು, ಆರೋಪಿಯಿಂದ ₹7 ಲಕ್ಷ ಮೌಲ್ಯದ 104.5 ಗ್ರಾಂ ಚಿನ್ನಾಭರಣ ಹಾಗೂ 1 ಬೈಕ್ ಜಪ್ತಿ ಮಾಡಲಾಗಿದೆ. ದೊಡ್ಡಬೆಲೆ ಮೆಟ್ರೋ ನಿಲ್ದಾಣ ಸಮೀಪ ಆತನನ್ನು ಸೆರೆ ಹಿಡಿದು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಶಿವನಪುರದ ಸಂಜೀವ್, ನಗರದಲ್ಲಿ ಜೊಮ್ಯಾಟೋ ಡಿಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದ. ಹಣದಾಸೆಗೆ ರಸ್ತೆಯಲ್ಲಿ ಏಕಾಂಗಿಯಾಗಿ ಓಡಾಡುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಕೃತ್ಯ ಎಸಗುತ್ತಿದ್ದ. ಜೂನ್‌ 7ರಂದು ಕೋಡಿಪಾಳ್ಯ ಗ್ಲೋಬಲ್‌ ಬೇಕರಿ ಸಮೀಪ ತಮ್ಮ ಮಗಳನ್ನು ಶಾಲಾ ವಾಹನಕ್ಕೆ ಕಳುಹಿಸಿ ಮನೆಗೆ ಮರಳುತ್ತಿದ್ದ ಗೃಹಿಣಿಯೊಬ್ಬರಿಂದ ಸಂಜೀವ್ ಸರ ಅಪಹರಿಸಿದ್ದ. ಇದೇ ರೀತಿ ಕುಂಬಳಗೋಡು, ಕೆಂಗೇರಿ ಹಾಗೂ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ 7 ಕಡೆ ಸಂಜೀವ್ ಸರಗಳ್ಳತನ ಕೃತ್ಯ ಎಸಗಿದ್ದ. ಈ ಕೃತ್ಯದ ಬಗ್ಗೆ ತನಿಖೆಗಿಳಿದ ಕೆಂಗೇರಿ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ದೊಡ್ಡಬೆಲೆ ಮೆಟ್ರೋ ನಿಲ್ದಾಣ ಬಳಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.