ಪಂಪ್‌ಸೆಟ್‌ಗೆ ಆಧಾರ್ ವಿರೋಧಿಸಿ ಬೆಸ್ಕಾಂಗೆ ಮುತ್ತಿಗೆ

| Published : Sep 05 2024, 12:33 AM IST

ಪಂಪ್‌ಸೆಟ್‌ಗೆ ಆಧಾರ್ ವಿರೋಧಿಸಿ ಬೆಸ್ಕಾಂಗೆ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಿ, ಬೆಸ್ಕಾಂ ಅಧೀಕ್ಷಕ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಿರುವುದು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೃಷಿ ಪಂಪ್‌ಸೆಟ್‌ಗೆ ಆಧಾರ್‌ ಜೋಡಣೆ ವಿರೋಧಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಮತ್ತು ಜಿಲ್ಲಾ ಘಟಕದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಯಿತು.

ನಗರದದ ತಾಲೂಕು ಕಚೇರಿ ಬಳಿಯಿಂದ ಹಳೆ ಪಿಬಿ ರಸ್ತೆ, ಗಾಂಧಿ ವೃತ್ತ, ಶ್ರೀ ಜಯದೇವ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಬೆಸ್ಕಾಂ ಅಧೀಕ್ಷಕ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಕೃಷಿ ಪಂಪ್‌ಸೆಟ್‌ಗೆ ಆಧಾರ್‌ ಜೋಡಣೆ ಆದೇಶದ ಪ್ರತಿ ಸುಡುವ ಮೂಲಕ ಆಕ್ರೋಶ ಹೊರ ಹಾಕಿದರು.

ಇದೇ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚಿನ್ನಸಮುದ್ರ ಶೇಖರ ನಾಯ್ಕ, ರಾಜ್ಯ ಸರ್ಕಾರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮೂಲಕ ಮೀಟರ್ ಅಳವಡಿಸಿ ಶುಲ್ಕ ವಿಧಿಸುವ ಹುನ್ನಾರ ನಡೆಸಿದೆ. ರೈತರು ಕೇವಲ ತಮ್ಮ ಮನೆಗೆ ಮಾತ್ರ ಬೆಳೆ ಬೆಳೆಯುವುದಿಲ್ಲ. ಇಡೀ ಸಮಾಜ, ದೇಶಕ್ಕಾಗಿ ಅನ್ನ ನೀಡುವ ಅನ್ನದಾತರ ವಿರೋಧಿ ಕ್ರಮ ಅನುಸರಿಸುತ್ತಿದೆ. ಮೀಟರ್ ಅಳವಡಿಕೆ, ಶುಲ್ಕ ವಿಧಿಸುವ ಮೂಲಕ ಮುಂದಿನ ದಿನಗಳಲ್ಲಿ ವಿದ್ಯುತ್ ವಲಯವನ್ನೇ ಖಾಸಗೀಕರಣ ಮಾಡಲು ಹೊರಟಿದೆ. ತಕ್ಷಣವೇ ಆಧಾರ್ ಜೋಡಣೆ ಆದೇಶ ಹಿಂಪಡೆಯಬೇಕು. ಇಲ್ಲವಾದರೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಎಲ್ಲ ರೈತ ವಿರೋಧಿ ನೀತಿ, ಕಾನೂನು ರದ್ದಪಡಿಸುವ ಭರವಸೆ ನೀಡಿದ್ದರು. ಈಗ ಅಂತಹವರೇ ರೈತ ವಿರೋಧಿ ನೀತಿ, ನಿಲುವು, ಕಾನೂನು ಜಾರಿಗೆ ತರುತ್ತಿದ್ದಾರೆ. ವಿದ್ಯುತ್ ಉತ್ಪಾದಕ ಖಾಸಗಿ ಕಂಪನಿಗಳ ಗುಲಾಮಗಿರಿ ಪ್ರತೀಕವಾಗಿ ಕೃಷಿ ಪಂಪ್‌ಸೆಟ್‌ಗೆ ಆಧಾರ್ ಜೋಡಣೆಗೆ ಆದೇಶ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಶೇ.90ರಷ್ಟು ಆಧಾರ್ ಜೋಡಣೆ ಮಾಡಲಾಗಿದೆ. ಕೂಡಲೇ ಇಂತಹ ಆದೇಶ ರದ್ದುಪಡಿಸಬೇಕು ಎಂದು ತಾಕೀತು ಮಾಡಿದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಮಾತನಾಡಿ, ಅಕ್ರಮ-ಸಕ್ರಮ ಯೋಜನೆಯಡಿ ದಾವಣಗೆರೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಬೆಸ್ಕಾಂ ಅಧಿಕಾರಿಗಳು ಕೆಲ ಗುತ್ತಿಗೆದಾರರ ಮೂಲಕ ಹಣ ಪಡೆದು, ಯಾವುದೇ ಸೌಲಭ್ಯ ಒದಗಿಸದೇ ಇರುವುದು ಸಂಘದ ಗಮನದಲ್ಲಿದೆ. ಅಕ್ರಮ-ಸಕ್ರಮದಡಿ ರೈತರಿಂದ ಹಣ ವಸೂಲಿ ಮಾಡಬಾರದು. ಅಕ್ರಮ-ಸಕ್ರಮ ಯೋಜನೆ ಮುಂದುವರಿಸಬೇಕು. 2023ರ ಸೆಪ್ಟಂಬರ್‌ನಿಂದ ಕೃಷಿ ಕೊಳವೆ ಬಾವಿಗಳಿಗೆ ಬೇಕಾದ ವಿದ್ಯುತ್ ವೈರ್, ಟೀಸಿ, ಕಂಬಗಳನ್ನು ರೈತರೇ ಖರೀದಿ ಮಾಡಬೇಕೆಂಬ ಆದೇಶ ಮಾಡಿರುವುದು ರೈತ ವಿರೋಧಿ ನೀತಿಯಾಗಿದೆ ಎಂದು ದೂರಿದರು.

ತಕ್ಷಣವೇ ರೈತ ವಿರೋಧಿ ನೀತಿ, ನಿಲುವು, ಕಾನೂನು, ಕಾಯ್ದೆಗಳ ಆದೇಶ ಹಿಂಪಡೆಯಬೇಕು. ಹಿಂದಿನಂತೆ ಸರ್ಕಾರವೇ ರೈತರಿಗೆ ಅಗತ್ಯವಾದ ವೈರ್, ಟಿಸಿ, ಕಂಬಗಳನ್ನು ನೀಡಬೇಕು. ಮುಂದೆ ಏನಾದರೂ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆಗೆ ಬರುವಂತಹ ಬೆಸ್ಕಾಂ ಸಿಬ್ಬಂದಿಯನ್ನು ಅಲ್ಲಿಯೇ ವಿದ್ಯುತ್ ಕಂಬಗಳಿಗೆ ಕಟ್ಟಿ ಹಾಕುವ ಹೋರಾಟವನ್ನು ದಾವಣಗೆರೆ ಜಿಲ್ಲೆಯಿಂದಲೇ ಪ್ರಾರಂಭ ಮಾಡಲಾಗುವುದು. ಮುಂದೆ ಆಗುವ, ಆಗಬಹುದಾದ ಅನಾಹುತಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಬೇಕಾದೀತು ಎಂದು ಅವರು ಎಚ್ಚರಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷೆ ಮಹಾದೇವಿ ಎಸ್. ಬೇವಿನಾಳಮಠ್, ಜಿಲ್ಲಾಧ್ಯಕ್ಷ ಶತಕೋಟಿ ಬಸಪ್ಪ, ಎನ್. ಬಸವರಾಜ ದಾಗಿನಕಟ್ಟೆ, ಕಾನೂನು ಸಲಹೆಗಾರ, ಯುವ ವಕೀಲ ವೀರನಗೌಡ ಪಾಟೀಲ್, ಹುಚ್ಚವ್ವನಹಳ್ಳಿ ಗಣೇಶ, ಚೇತನಕುಮಾರ, ವಿಶ್ವನಾಥ ಮಂಡ್ಲೂರು, ಯಲ್ಲೋದಹಳ್ಳಿ ಕಾಳೇಶ, ಬಾಬುರಾವ್, ರಂಗನಾಥ ಬಸಾಪುರ, ಖಲೀಂವುಲ್ಲಾ, ಸಂತೋಷ ದಾಗಿನಕಟ್ಟೆ, ಭರಮಪ್ಪ ಮಾಸಡಿ, ದಾಗಿನಕಟ್ಟೆ ಯೋಗೇಶ, ನಿರಂಜನಗೌಡ ಇತರರು ಇದ್ದರು. ನಂತರ ಬೆಸ್ಕಾಂ ಅಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.