ಪಹಣಿಗಳ ಆಧಾರ್ ಸೀಡಿಂಗ್ ಶೇ. 100 ಪ್ರಗತಿ ಸಾಧಿಸಿ: ಸುನೀಲ್ ಕುಮಾರ್

| Published : Sep 25 2024, 12:59 AM IST

ಸಾರಾಂಶ

ಜಿಲ್ಲೆಯಲ್ಲಿ 21,24,728 ಆರ್‌ಟಿಸಿಗಳಿಗೆ ಆಧಾರ್ ಜೋಡಣೆ ಕಾರ್ಯ ಮಾಡಬೇಕಿದ್ದು, ಇದುವರೆಗೆ 11,69,620 ಆರ್‌ಟಿಸಿಗಳಿಗೆ ಆಧಾರ್ ನೋಂದಣಿ ಮಾಡಿ ಶೇ. 75ರಷ್ಟು ಪ್ರಗತಿ ಸಾಧಿಸಲಾಗಿದೆ.

ಕಾರವಾರ: ಪಹಣಿಗಳಿಗೆ ಆಧಾರ್ ಜೋಡಣೆ ಮಾಡುವುದು ಸರ್ಕಾರದ ಅತ್ಯಂತ ಪ್ರಮುಖ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಈ ಯೋಜನೆಯಡಿ ಇದುವರೆಗೆ ಶೇ. 75ರಷ್ಟು ಪ್ರಗತಿಯಾಗಿದ್ದು, ಈ ಯೋಜನೆಯಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸಲು ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳು ಹೆಚ್ಚಿನ ಗಮನಹರಿಸುವಂತೆ ರಾಜ್ಯದ ಕಂದಾಯ ಇಲಾಖೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಸೂಚಿಸಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ 21,24,728 ಆರ್‌ಟಿಸಿಗಳಿಗೆ ಆಧಾರ್ ಜೋಡಣೆ ಕಾರ್ಯ ಮಾಡಬೇಕಿದ್ದು, ಇದುವರೆಗೆ 11,69,620 ಆರ್‌ಟಿಸಿಗಳಿಗೆ ಆಧಾರ್ ನೋಂದಣಿ ಮಾಡಿ ಶೇ. 75ರಷ್ಟು ಪ್ರಗತಿ ಸಾಧಿಸಲಾಗಿದೆ. ಬಾಕಿ ಇರುವ ಪಹಣಿದಾರರನ್ನು ಸಂಪರ್ಕಿಸಿ ಶೀಘ್ರದಲ್ಲಿ ಇದನ್ನು ಪೂರ್ಣಗೊಳಿಸುವಂತೆ ತಿಳಿಸಿದ ಅವರು ಮೂಲ ಪಹಣಿದಾರರು ಮರಣ ಹೊಂದಿದ್ದರೆ ಅವರ ವಾರಸುದಾರರಿಗೆ ಮಾಲೀಕತ್ವವನ್ನು ವರ್ಗಾಯಿಸುವ ಕುರಿತಂತೆ ಕ್ರಮ ಕೈಗೊಳ್ಳಿ. ಮೃತರ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಪೌತಿ ಖಾತೆ ಆಂದೋಲನ ಕಾರ್ಯಕ್ರಮಗಳನ್ನು ಎಲ್ಲ ತಾಲೂಕುಗಳಲ್ಲಿ ಆಯೋಜಿಸುವಂತೆ ತಿಳಿಸಿದರು.

ಜಿಲ್ಲೆಯ ಎಲ್ಲ ತಾಲೂಕು ಕಚೇರಿಗಳಲ್ಲಿ ಇ- ಆಫೀಸ್ ತಂತ್ರಾಂಶವನ್ನು ಸಂಪೂರ್ಣವಾಗಿ ಬಳಕೆಮಾಡುವ ಮೂಲಕ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣದ ಮೂಲಕವೇ ವಿಲೇವಾರಿ ಮಾಡುವ ಮೂಲಕ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ಇರುವಂತೆ ನೋಡಿಕೊಳ್ಳಬೇಕು ಹಾಗೂ ಸಾರ್ವಜನಿಕರ ಅರ್ಜಿಗಳನ್ನು ನಿಗದಿತ ಅವಧಿಯೊಳಗೇ ವಿಲೇವಾರಿ ಮಾಡುವಂತೆ ಸೂಚಿಸಿದರು.

ರಾಜ್ಯದಲ್ಲಿನ ಕಂದಾಯ ಇಲಾಖೆಯ ದಾಖಲೆಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ಕಾರ್ಯದ ಅಂಗವಾಗಿ ಪೈಲಟ್ ತಾಲೂಕಾಗಿ ಆಯ್ಕೆ ಮಾಡಿರುವ ಶಿರಸಿ ತಾಲೂಕಿಗೆ ಸಂಬಂಧಪಟ್ಟ ಎಲ್ಲ ಕಂದಾಯ ದಾಖಲೆಗಳು ಮತ್ತು ಕಡತಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡುವ ಕಾರ್ಯವನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳನ್ನು ಗುರುತಿಸಿ ಸಂರಕ್ಷಿಸುವ ಲ್ಯಾಂಡ್ ಬೀಟ್ ಯೋಜನೆಯಡಿ, ಎಲ್ಲ ಸರ್ಕಾರಿ ಜಮೀನುಗಳನ್ನು ಸರ್ವೇ ಮಾಡಿ, ಅವುಗಳನ್ನು ಗುರುತು ಮಾಡುವ ಪ್ರಕ್ರಿಯೆಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರು ಮತ್ತು ತಹಸೀಲ್ದಾರ್‌ಗಳು ಆದ್ಯತೆಯಲ್ಲಿ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಬೆಳಗಾವಿ ವಿಭಾಗದ ಭೂ ದಾಖಲೆಗಳ ಜಂಟಿ ನಿರ್ದೇಶಕಿ ನಜ್ಮಾ ಎಂ. ಪೀರಜಾದೆ, ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್‌ಗಳು, ಭೂದಾಖಲೆಗಳ ಸಹಾಯಕ ನಿರ್ದೇಶಕರು ಇದ್ದರು.