ಆಧಾರ್ ಕಾರ್ಡ್‌ನ್ನು ತಪ್ಪದೇ ಹತ್ತು ವರ್ಷಗಳಿಗೊಮ್ಮೆಯಾದರೂ ಕಡ್ಡಾಯ ಅಪ್ ಡೇಟ್ ಮಾಡಿಸಬೇಕು

| Published : Sep 19 2024, 01:58 AM IST / Updated: Sep 19 2024, 01:05 PM IST

ಆಧಾರ್ ಕಾರ್ಡ್‌ನ್ನು ತಪ್ಪದೇ ಹತ್ತು ವರ್ಷಗಳಿಗೊಮ್ಮೆಯಾದರೂ ಕಡ್ಡಾಯ ಅಪ್ ಡೇಟ್ ಮಾಡಿಸಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಸವಲತ್ತು, ಯೋಜನೆ, ಸಹಾಯಧನ ಪಡೆಯುವಾಗ, ಬ್ಯಾಂಕ್‌ನಲ್ಲಿ ಖಾತೆಗೆ ಆಧಾರ್ ಜೋಡಣೆ ಮಾಡುವುದು ಸರ್ವೆ ಸಾಮಾನ್ಯ. ಆಧಾರ್ ಕಾರ್ಡ್‌ನ್ನು ತಪ್ಪದೇ ಹತ್ತು ವರ್ಷಗಳಿಗೊಮ್ಮೆಯಾದರೂ ಅಪ್ ಡೇಟ್ ಮಾಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎಲ್. ನಾಗರಾಜು ತಿಳಿಸಿದರು.

  ಮಂಡ್ಯ :  ಸರ್ಕಾರಿ ಸವಲತ್ತು, ಯೋಜನೆ, ಸಹಾಯಧನ ಪಡೆಯುವಾಗ, ಬ್ಯಾಂಕ್‌ನಲ್ಲಿ ಖಾತೆಗೆ ಆಧಾರ್ ಜೋಡಣೆ ಮಾಡುವುದು ಸರ್ವೆ ಸಾಮಾನ್ಯ. ಆಧಾರ್ ಕಾರ್ಡ್‌ನ್ನು ತಪ್ಪದೇ ಹತ್ತು ವರ್ಷಗಳಿಗೊಮ್ಮೆಯಾದರೂ ಅಪ್ ಡೇಟ್ ಮಾಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎಲ್. ನಾಗರಾಜು ತಿಳಿಸಿದರು.

ಅವರು ಇತ್ತೀಚೆಗೆ ಆಧಾರ್ ಅಪ್ ಡೇಟ್ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದರು. 10 ವರ್ಷಕೊಮ್ಮೆಯಾದರೂ ಆಧಾರ್ ಅಪ್ ಡೇಟ್ ಮಾಡಿಸಿಕೊಳ್ಳದಿದ್ದಲ್ಲಿ ಸರ್ಕಾರ ಆರ್.ಟಿ.ಜಿ.ಎಸ್ ಮೂಲಕ ನೀಡುವ ಸಹಾಯಧನ, ಪಿಂಚಣಿಗಳು ಖಾತೆಗೆ ಪಾವತಿಯಾಗದೇ ಇಲಾಖೆಗಳ ಬಳಿಯೇ ಉಳಿದು ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ತಪ್ಪದೇ ಸಾರ್ವಜನಿಕರು ಆಧಾರ್ ಅಪ್ ಡೇಟ್ ಮಾಡಿಸಿ ಎಂದು ಮನವಿ ಮಾಡಿದರು.

1.40 ಲಕ್ಷ ಜನರ ಅಪ್‌ಡೇಟ್‌ ಬಾಕಿ:

ಜಿಲ್ಲೆಯಲ್ಲಿ 19,83,248 ಜನರು ಆಧಾರ್ ಕಾರ್ಡ್‌ ಹೊಂದಿದ್ದು, ಅದರಲ್ಲಿ 0- 5 ವರ್ಷದೊಳಗಿನವರು- 68,783, 5-18 ವರ್ಷದೊಳಗಿನವರು- 3,10, 032 ಹಾಗೂ 18 ವರ್ಷ ಮೇಲ್ಪಟ್ಟ- 16, 04, 433 ಜನರು ಆಧಾರ್ ಕಾರ್ಡ್‌ ಹೊಂದಿದ್ದಾರೆ. ಆಧಾರ್ ಕಾರ್ಡ್‌ನಲ್ಲಿ ಮುಖ್ಯವಾಗಿ ಬಯೋಮೆಟ್ರಿಕ್ ಅಪ್ ಡೇಟ್ ಮಾಡಬೇಕಿದ್ದು, ಜಿಲ್ಲೆಯಲ್ಲಿ 5 ವರ್ಷ ಮೇಲ್ಪಟ್ಟ- 84,637 ಹಾಗೂ 15 ವರ್ಷ ಮೇಲ್ಪಟ್ಟ- 56, 029 ಒಟ್ಟು 1,40,666 ಆಧಾರ್ ಕಾರ್ಡ್‌ ಹೊಂದಿರುವವರ ಆಧಾರ್ ಕಾರ್ಡ್‌ ಬಯೋಮೆಟ್ರಿಕ್ ಅಪ್ ಡೇಟ್ ಬಾಕಿ ಇರುತ್ತದೆ.

1.31 ಲಕ್ಷ ಮಂದಿ ಮೊಬೈಲ್‌ ಸಂಖ್ಯೆ ಜೊಡಣೆ ಬಾಕಿ:

ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಜೋಡಣೆಗೆ ಸಂಬಂಧಿಸಿದಂತೆ 18,51,821 ಜನರು ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿದ್ದು, ಇನ್ನೂ1,31,427 ಜನರ ಮೊಬೈಲ್ ಸಂಖ್ಯೆ ಜೋಡಣೆ ಬಾಕಿ ಇರುತ್ತದೆ. ಡಿ.14ರೊಳಗಾಗಿ ಆಧಾರ್ ಅಪ್ ಡೇಟ್ ಮಾಡಿಸಿ ಜಿಲ್ಲೆಯಲ್ಲಿ ಒಟ್ಟು 5,13,941 ಆಧಾರ್ ಅಪ್ ಡೇಟ್ ಆಗಬೇಕಿರುತ್ತದೆ. ಈವರೆಗೆ 1,44,148 ಜನರು ಮಾತ್ರ ಆಧಾರ್ ಅಪ್ ಡೇಟ್ ಮಾಡಿಸಿಕೊಂಡಿದ್ದು, ಉಳಿದವರು ಡಿಸೆಂಬರ್‌ 14 ರೊಳಗಾಗಿ ತಮ್ಮ ಆಧಾರ್ ಕಾರ್ಡ್‌ಗಳನ್ನು ಅಪ್ ಡೇಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ 141 ಆಧಾರ್ ಕೇಂದ್ರಗಳಿದ್ದು, 50 ರು. ಪಾವತಿಸಿ ಆಧಾರ್ ಅಪ್ ಡೇಟ್ ಮಾಡಿಸಿಕೊಳ್ಳಬಹುದು. ಜಿಲ್ಲೆಯಲ್ಲಿ ಅಕ್ರಮ ಆಧಾರ್ ನೋಂದಣಿ ಕಂಡು ಬಂದಲ್ಲಿ ಆಧಾರ್ ಜಿಲ್ಲಾ ಸಮಿತಿಯವರ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್ ಕುಮಾರ್, ಪೊಲೀಸ್ ಇನ್ಸ್ ಪೆಕ್ಟರ್ ಮಂಜೇಗೌಡ, ಎಚ್.ಜಿ,ಆಧಾರ್ ಕೋ-ಆರ್ಡಿನೇಟರ್ ವೇಣುಗೋಪಾಲ್ ಸೇರಿದಂತೆ ಇದ್ದರು.