ಹುಬ್ಬಳ್ಳಿಯಲ್ಲಿ 2019ರಿಂದ 2025ರ ವರೆಗೆ ಆಧಾರ್ ಕೇಂದ್ರವು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಹಳೆಯ ಟೆಂಡರ್ ಅವಧಿ ಮುಗಿದ ನಂತರ, ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಈಗ ಕೇಶ್ವಾಪುರದಲ್ಲಿ ಕೇಂದ್ರವನ್ನು ಮತ್ತೆ ತೆರೆಯಲಾಗಿದೆ.

ಹುಬ್ಬಳ್ಳಿ:

ಅವಳಿನಗರದ ನಾಗರಿಕರ ಸೇವೆಗಾಗಿ ನಗರದಲ್ಲಿ ಆಧಾರ ಸೇವಾ ಕೇಂದ್ರವನ್ನು ಸೋಮವಾರದಿಂದ ಆರಂಭಿಸಿದ್ದು ಧಾರವಾಡದಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ನಗರದ ಕೇಶ್ವಾಪುರ ವ್ಯಾಪ್ತಿಯ ಭವಾನಿನಗರದ ಎಸ್‌ಬಿಐ ಬ್ಯಾಂಕ್ ಹಿಂಭಾಗದ ಜೋಳದ ಕಾಂಪ್ಲೆಕ್ಸ್‌ನಲ್ಲಿ ನೂತನ ಆಧಾರ್ ಸೇವಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ನಗರದಲ್ಲಿ 2019ರಿಂದ 2025ರ ವರೆಗೆ ಆಧಾರ್ ಕೇಂದ್ರವು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಹಳೆಯ ಟೆಂಡರ್ ಅವಧಿ ಮುಗಿದ ನಂತರ, ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಈಗ ಕೇಶ್ವಾಪುರದಲ್ಲಿ ಕೇಂದ್ರವನ್ನು ಮತ್ತೆ ತೆರೆಯಲಾಗಿದೆ. ಈ ಹಿಂದೆ ರಾಜ್ಯದಲ್ಲಿ ಒಟ್ಟು 8 ಕೇಂದ್ರಗಳಿದ್ದವು, ಪುನಾರಂಭದ ನಂತರ ಅವುಗಳನ್ನು 22 ಪ್ರಮುಖ ಕೇಂದ್ರಗಳಾಗಿ ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ ಕೇಂದ್ರದ ಟೆಂಡರ್ ಅವಧಿ ಮುಗಿದಿದ್ದರಿಂದ ತಾತ್ಕಾಲಿಕವಾಗಿ ಸೇವೆ ನಿಲ್ಲಿಸಿದ್ದು, ಹೊಸ ಟೆಂಡರ್ ಮೂಲಕ ಶೀಘ್ರವಾಗಿ ಧಾರವಾಡದಲ್ಲೂ ಕೇಂದ್ರ ಆರಂಭಿಸಲಾಗುವುದು ಎಂದರು.

ನೂತನ ಕೇಂದ್ರದಲ್ಲಿ ಹೊಸ ಆಧಾರ ಕಾರ್ಡ್‌ ನೋಂದಣಿ, ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಜನ್ಮ ದಿನಾಂಕ ತಿದ್ದುಪಡಿ, ಬಯೋಮೆಟ್ರಿಕ್ ಅಪ್‌ಡೇಟ್, ಫೋಟೋ, ಫಿಂಗರ್ ಪ್ರಿಂಟ್ ಮತ್ತು ಕಣ್ಣಿನ ಸ್ಕ್ಯಾನ್ ಇತರ ಆಧಾರ್ ಸಂಬಂಧಿತ ಸೇವೆಗಳು ಲಭಿಸುತ್ತದೆ ಎಂದು ಹೇಳಿದರು.

ಜನರು ಸಣ್ಣ-ಸಣ್ಣ ಸಮಸ್ಯೆಗಳಿಗೆ ಪದೇ ಪದೇ ಬರುತ್ತಾರೆ. ನಿಯಮಗಳ ಕುರಿತು ಮಾಹಿತಿಯನ್ನು ಸೂಚನಾ ಫಲಕಕ್ಕೆ ಹಾಕಬೇಕು. ಜನರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಆಧಾರ ಸೇವಾ ಕೇಂದ್ರದ ಸೇವೆಗಳ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ತಿಳಿಸಿದರು.

ಕನ್ನಡದಲ್ಲಿ ಸೇವೆಗಳ ಕುರಿತು ಪ್ರಶ್ನೋತ್ತರ (ಎಫ್‌ಎಕ್ಯೂ) ಮಾಡಬೇಕು. ನೂತನ ಕೇಂದ್ರದಲ್ಲಿ ಒಟ್ಟು ನಾಲ್ಕು ಕೌಂಟರ್‌ಗಳಿದ್ದು, ಸುಗಮ ನಿರ್ವಹಣೆಗಾಗಿ ಯುಐಡಿಎಐ ವತಿಯಿಂದ ಆಪರೇಷನ್ ಮ್ಯಾನೇಜರ್ ಅವರನ್ನು ನೇಮಿಸಲಾಗಿದೆ ಎಂದರು.

ಈ ವೇಳೆ ಹುಬ್ಬಳ್ಳಿ ನಗರ ತಹಸೀಲ್ದಾರ್‌ ಮಹೇಶ ಗಸ್ತೆ, ಯುಐಡಿಎಐ ನಿರ್ದೇಶಕ ಮನೋಜ್ ಕುಮಾರ, ಪ್ರೊಟಿನ್ ಕಂಪನಿ ಸಿನಿಯರ್ ಮ್ಯಾನೇಜರ್ ಸಮ್ಯೂಲ್ ರಾಯ್, ಜಿಲ್ಲಾ ಆಧಾರ್‌ ಸಂಯೋಜಕ ರುದ್ರೇಶ ಎಂ., ಯುಐಡಿಎಐ ಪ್ರೊಜೆಕ್ಟ್ ಮ್ಯಾನೇಜರ್ ವಿಜಯಕುಮಾರ ಹಾಗೂ ಇತರರು ಇದ್ದರು.