ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಮ್ ಆದ್ಮಿ ಪಕ್ಷ ಒತ್ತಾಯ

| Published : May 05 2024, 02:01 AM IST

ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಮ್ ಆದ್ಮಿ ಪಕ್ಷ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಅಪರ ಜಿಲ್ಲಾಧಿಕಾರಿಗೆ ಮನವಿ । ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮೇಲೂ ಕ್ರಮಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ, ಚಿತ್ರದುರ್ಗಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಸಂಸದ ಪ್ರಜ್ವಲ ರೇವಣ್ಣ ಹಾಗೂ ಅವರ ತಂದೆ ಎಚ್‌.ಡಿ. ರೇವಣ್ಣ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್, ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳನ್ನು ಪೂಜಿಸುತ್ತೇವೆ, ಗೌರವದಿಂದ ಕಾಣುತ್ತೇವೆ. ಆದರೆ ಪ್ರಜ್ವಲ್ ರೇವಣ್ಣ ಅವರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಿ ನಂತರ ವಿಡಿಯೋ ಮಾಡಿ ಮಾನಹಾನಿ ಮಾಡಿದ್ದಾರೆ. ಇಂತಹ ನೀಚ ಕೃತ್ಯ ಅಕ್ಷಮ್ಯವಾಗಿದ್ದು ಆರೋಪಿಗಳು ಯಾವುದೇ ಕಾರಣದಿಂದ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಬಾರದು ಎಂದರು.

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮೊಮ್ಮಕ್ಕಳು ದೇಶಕ್ಕೆ ಹಾಗೂ ಮಹಿಳಾ ಕುಲಕ್ಕೆ ಕಳಂಕ ತಂದಿದ್ದಾರೆ. ದೇವೇಗೌಡರು ಮೊಮ್ಮಕ್ಕಳನ್ನು ಹೇಗೆ ಬೆಳೆಸಿದ್ದಾರೆ ಎನ್ನುವುದನ್ನು ಸಮಾಜ ನೋಡುತ್ತಿದೆ. ಹಣ ಹಾಗೂ ಅಧಿಕಾರದ ಮನೋಭಾವ ಮನುಷ್ಯನನ್ನು ಅದೆಷ್ಟು ಕೀಳು ಮಟ್ಟಕ್ಕೆ ಒಯ್ಯುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.

ರೇವಣ್ಣ ಹಾಗೂ ಪ್ರಜ್ವಲ್‌ ರೇವಣ್ಣ ಹೊರಗಡೆ ಇದ್ದರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದ್ದು, ಹಣದಿಂದ ಸಂತ್ರಸ್ತರನ್ನು ಕೊಂಡುಕೊಳ್ಳುವ ಹುನ್ನಾರ ನಡೆಯುತ್ತಿದೆ. ಜೆಡಿಎಸ್‍ನವರು ಇಂತಹ ಕೃತ್ಯಗಳಿಂದ ಹೊರಬರುವ ಸಲುವಾಗಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಹೆಣ್ಣು ಮಕ್ಕಳ ಮೇಲಿನ ಪ್ರಕರಣಗಳಲ್ಲಿ ಗಂಭೀರವಾದ ಶಿಕ್ಷೆಗಳು ಆಗುತ್ತಿಲ್ಲ. ರಮೇಶ್ ಜಾರಕಿಹೊಳಿರವರ ಪ್ರಕರಣ ಹಾಗೆ ನಿಂತುಹೋಗಿದೆ. ಮಹಿಳೆಯರಿಗೆ ನ್ಯಾಯ ಎನ್ನುವುದು ಬರೀ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಮಾತನಾಡಿ, ಪ್ರಜ್ವಲ್ ಕುಟುಂಬದಲ್ಲಿ ತಾತ ಮಾಜಿ ಪ್ರಧಾನಿ, ತಂದೆ ಮಾಜಿ ಸಚಿವ, ಚಿಕ್ಕಪ್ಪ ಮಾಜಿ ಮುಖ್ಯಮಂತ್ರಿ, ಚಿಕ್ಕಮ್ಮ ಮಾಜಿ ಶಾಸಕಿ, ತಾಯಿ ಮಾಜಿ ಜಿಪಂ ಸದಸ್ಯೆ, ತಮ್ಮ ಎಂಎಲ್‍ಸಿಯಾಗಿದ್ದಾರೆ. ಅಧಿಕಾರ, ಹಣ ಹಾಗೂ ಯೌವ್ವನದ ಮದದಿಂದ ಈ ರೀತಿ ಆಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದರು.

ಈ ವೇಳೆ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳಾದ ಲಕ್ಷ್ಮೀ, ವಿನೋಧಮ್ಮ, ರಾಮಣ್ಣ, ಹೇಮಾ, ಕುಂಬನಾಯ್ಕ್, ಪ್ರಹ್ಲಾದ್, ರವಿ, ತಿಪ್ಪೇಶ್, ತನ್ವೀರ್ ಇದ್ದರು.