ಕಾವೇರಿ ನದಿಯ ಮಾಲಿನ್ಯ ನಿವಾರಣೆ, ತ್ಯಾಜ್ಯ ನಿಯಂತ್ರಣ ಮತ್ತು ನದಿಯ ಹೂಳೆತ್ತುವ ಕಾರ್ಯಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಮ್‌ ಆದ್ಮಿ ಪಾರ್ಟಿ ಒತ್ತಾಯಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಾವೇರಿ ನದಿ ಮಾಲಿನ್ಯ ನಿವಾರಣೆ, ತ್ಯಾಜ್ಯ ನಿಯಂತ್ರಣ ಮತ್ತು ನದಿಯ ಹೂಳೆತ್ತುವ ಕಾರ್ಯಕ್ಕೆ ರಾಜ್ಯ ಸರಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ಒತ್ತಾಯಿಸಿದೆ.ಪತ್ರಿಕಾ ಪ್ರಕಟಣೆ ನೀಡಿರುವ ಪಕ್ಷದ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಅವರು ದಕ್ಷಿಣ ಭಾರತದ ಜೀವನಾಡಿಯಾಗಿರುವ ಕಾವೇರಿ ನದಿ ಕರ್ನಾಟಕ, ಪುದುಚೇರಿ ಮತ್ತು ತಮಿಳುನಾಡು ರಾಜ್ಯಗಳ ಲಕ್ಷಾಂತರ ಜನರಿಗೆ ಕುಡಿಯುವ ನೀರು, ಕೃಷಿ ನೀರಾವರಿ ಮತ್ತು ಜೀವನೋಪಾಯದ ಮೂಲವಾಗಿದೆ. ಆದರೆ ಕಳೆದ ಕೆಲವು ದಶಕಗಳಿಂದ ನದಿ ಕಲುಷಿತಗೊಂಡು ಕುಡಿಯಲು ಯೋಗ್ಯವಲ್ಲದ ಸ್ಥಿತಿಗೆ ಬಂದು ತಲುಪಿದೆ. ನದಿಯನ್ನು ಆವರಿಸಿರುವ ತ್ಯಾಜ್ಯದಿಂದ ಶುದ್ಧ ನೀರಿನ ಲಭ್ಯತೆ ಮತ್ತು ಪರಿಸರ ಸಮತೋಲನ ಎರಡಕ್ಕೂ ಭಾರೀ ಧಕ್ಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ನದಿ ತೀರ ಪ್ರದೇಶಗಳಲ್ಲಿ ಬೆಳೆಯುತ್ತಿರುವ ಕೈಗಾರಿಕೆಗಳು ಮತ್ತು ನಗರ ಪ್ರದೇಶಗಳಿಂದ ನೇರವಾಗಿ ನದಿಗೆ ಹರಿಯುತ್ತಿರುವ ರಾಸಾಯನಿಕ ತ್ಯಾಜ್ಯ, ಪ್ಲಾಸ್ಟಿಕ್ ಮತ್ತು ಒಳಚರಂಡಿಯ ಕಲುಷಿತ ನೀರು ನದಿಯ ಜೀವವೈವಿಧ್ಯವನ್ನು ಹಾಳುಮಾಡಿದೆ. ವಿಶೇಷವಾಗಿ ಕೊಡಗು, ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ ಮತ್ತು ಚಾಮರಾಜನಗರ ಪ್ರದೇಶಗಳಲ್ಲಿ ನದಿಯ ನೀರಿನ ಗುಣಮಟ್ಟ ಕುಸಿತಗೊಂಡಿದೆ. ನದಿ ನೀರು ಬಳಕೆ ಮಾಡುವ ಬೆಂಗಳೂರು ನಗರ, ಮೈಸೂರು ಮತ್ತಿತರ ಜಿಲ್ಲೆಗಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅಲ್ಲದೆ ಪ್ರತಿವರ್ಷ ಮಳೆಗಾಲದ ನಂತರ ನದಿಯಲ್ಲಿ ಹೂಳು ತುಂಬಿ ನೀರಿನ ಹರಿವು ಕುಂಠಿತವಾಗುತ್ತಿದೆ ಮತ್ತು ಪ್ರವಾಹದ ಅಪಾಯ ಹೆಚ್ಚುತ್ತಿದೆ. ಹೂಳು ತೆರವು ಕಾರ್ಯ ಕೈಗೊಳ್ಳದ ಕಾರಣ ನದಿಯ ನೈಸರ್ಗಿಕ ಹರಿವು ಹದಗೆಟ್ಟು ಜಲಜೀವಿಗಳ ವಾಸಸ್ಥಾನ ನಾಶವಾಗುತ್ತಿದೆ ಎಂದು ಭೋಜಣ್ಣ ಸೋಮಯ್ಯ ಗಮನ ಸೆಳೆದಿದ್ದಾರೆ.ಈ ಕ್ರಮಗಳು ಕೈಗೊಳ್ಳುವ ಮೂಲಕ ಕಾವೇರಿ ನದಿ ಪುನಃ ಶುದ್ಧವಾಗಲು, ಜಲಮೂಲಗಳು ಜೀವಂತವಾಗಲು ಮತ್ತು ಮುಂದಿನ ಪೀಳಿಗೆಯೂ ಅದರ ಪ್ರಯೋಜನವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸರ್ಕಾರ ವಿಳಂಬ ಮಾಡದೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.