ಎಎಪಿ ಸಂಸದನ ಬಂಧನಕ್ಕೆ ವಿರೋಧ-ಎಎಪಿ ಪ್ರತಿಭಟನೆ

| Published : Oct 08 2023, 12:00 AM IST

ಸಾರಾಂಶ

ಎಎಪಿ ಸಂಸದ ಸಂಜಯ್‌ ಸಿಂಗ್‌ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಅಬಕಾರಿ ನೀತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ಎಎಪಿ ಸಂಸದ ಸಂಜಯ್‌ ಸಿಂಗ್‌ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಶುಕ್ರವಾರ ಸಂಜೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ, ಮೇಣದ ಬತ್ತಿಯ ಜೊತೆಗೆ ಶಾಂತಿಯುತ ಪ್ರತಿಭಟನೆ ನಡೆಸಿದರು.

ಈ ವೇಳೆ ಜಿಲ್ಲಾಧ್ಯಕ್ಷ ಪ್ರವೀಣಕುಮಾರ ನಡಕಟ್ಟಿನ ಮಾತನಾಡಿ, ಮುಂಬರುವ 5 ವಿಧಾನಸಭೆ ಚುನಾವಣೆಗಳು ಸೇರಿದಂತೆ 2024ರ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ತರಹದ ಅಕ್ರಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಸರ್ವಾಧಿಕಾರದ ಅಮಲಿನಲ್ಲಿ ಕೇಂದ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅವರು ಎಷ್ಟೇ ದಾಳಿ ನಡೆಸಿದರೂ ನಾವು ಹೆದರುವುದಿಲ್ಲ. ಭೀತಿ ಎಂಬುದು ಕೇವಲ ತಪ್ಪಿತಸ್ಥರ ಎದೆಯಲ್ಲಿರುತ್ತದೆ. ನಮ್ಮ ಎದೆಯಲ್ಲಿ ಹೋರಾಟದ ಕಿಚ್ಚಿದೆ ಎಂದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ತೇರದಾಳ ಮಾತನಾಡಿ, ನಡೆದಿದೆ ಎನ್ನಲಾಗುತ್ತಿರುವ ಅಬಕಾರಿ ಹಗರಣದ ತನಿಖೆಯನ್ನು ಸುಮಾರು 15 ತಿಂಗಳಿಂದ ನಡೆಸಲಾಗುತ್ತಿದೆ. ನೂರಾರು ಅಧಿಕಾರಿಗಳು ಹಗಲು ರಾತ್ರಿ ಶೋಧ ನಡೆಸುತ್ತಿದ್ದಾರೆ. ಸುಮಾರು 1 ಸಾವಿರ ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ. ಪಕ್ಷದ ಮುಖಂಡರಾದ ಸತ್ಯೇಂದ್ರ ಜೈನ್‌, ಮನೀಶ್‌ ಸಿಸೋಡಿಯಾ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ. ಬಂಧನದಲ್ಲಿಟ್ಟು ಕಿರುಕುಳ ನೀಡಿದ್ದಾರೆ. ಸಲ್ಲದ ಆರೋಪಗಳನ್ನು ಮಾಡಿ ಹಿಂಸಿಸಿದ್ದಾರೆ. ಆದರೆ, ಇದುವರೆಗೆ ಒಂದೇ ಒಂದು ಪೈಸೆ ಭ್ರಷ್ಟಾಚಾರದ ಹಣವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೂ ಅವರನ್ನು ಬಂಧಿಸಿರುವುದು ಬಿಜೆಪಿ ಪಕ್ಷದಲ್ಲಿ ಹುಟ್ಟಿರುವ ಭೀತಿ ಎಂದು ವಾಗ್ದಾಳಿ ನಡೆಸಿದರು.

ನಂತರ ಜಿಲ್ಲಾ ಮಾಧ್ಯಮ ಉಸ್ತುವಾರಿ ಮಲ್ಲಿಕಾರ್ಜುನಯ್ಯ ಹಿರೇಮಠ ಮಾತನಾಡಿದರು. ಈ ಸಂದರ್ಭದಲ್ಲಿ ರೇವಣಸಿದ್ದಪ್ಪ ಹುಬ್ಬಳ್ಳಿ, ಮಲ್ಲಪ್ಪ ತಡಸದ, ಅವಿನಾಶ ಸದಾನಂದ, ಸುನಂದಾ ವಿಶ್ವನಾಥ, ಡೇನಿಯಲ್ ಏಕೊಸ್, ವಿಶ್ವನಾಥ ಕರಡಿಗುಡ್ಡ ಮತ್ತಿತರರು ಉಪಸ್ಥಿತರಿದ್ದರು.