ನಗರದ ವರದರಾಜ ಕಾಲೇಜಿನ ಸಭಾಂಗಣದಲ್ಲಿ ದಾರಿಬುತ್ತಿ ಬಳಗ ಮತ್ತು ಪ್ರಕಾಶನದಿಂದ ಹಮ್ಮಿಕೊಂಡಿದ್ದ ಆಸರೆಯಾಗು ಬದುಕೇ ಕನ್ನಡ ಭಾವಗೀತೆಗಳ ಗೀತಗುಚ್ಛ ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರುನಗರದ ವರದರಾಜ ಕಾಲೇಜಿನ ಸಭಾಂಗಣದಲ್ಲಿ ದಾರಿಬುತ್ತಿ ಬಳಗ ಮತ್ತು ಪ್ರಕಾಶನದಿಂದ ಹಮ್ಮಿಕೊಂಡಿದ್ದ ಆಸರೆಯಾಗು ಬದುಕೇ ಕನ್ನಡ ಭಾವಗೀತೆಗಳ ಗೀತಗುಚ್ಛ ಬಿಡುಗಡೆ ಮಾಡಲಾಯಿತು. ಪತ್ರಕರ್ತರಾದ ಎಸ್‌. ರಶ್ಮಿ ಮಾತನಾಡಿ ನೋವನ್ನು ಅಪ್ಪಿದಾಗ ಬರವಣಿಗೆ ಹುಟ್ಟುತ್ತದೆ. ಬಾಯಿಯಿಂದ ಹೊರಬೀಳುವ ಮಾತುಗಳೇ ಅಕ್ಷರವಾಗೋದು, ಮಾತು ಅಕ್ಷರ ರೂಪಕ್ಕಳಿಸಿದರೆ ಅದು ದಾಖಲೆಯಾಗಿ ಉಳಿಯುತ್ತದೆ, ಜೀವನ ಬಂದಂತೆ ಸ್ವೀಕರಿಸುತ್ತಾ, ಪ್ರೀತಿಸಬೇಕು ಎಂದರು. ಬರಹಗಾರ ರವೀಂದ್ರನಾಯಕ ಸಣ್ಣಕ್ಕಿಬೆಟ್ಟು ಮಾತನಾಡಿ ಕವಿತೆ ಕವಿತೆಯಾಗಿ ಗೆಲ್ಲಬೇಕು. ನಂತರ ಅದು ಗೀತೆಯಾಗಿ ಗೆಲ್ಲುತ್ತದೆ. ಮಲ್ಲಿಗೆ ಎನ್ನುವುದನ್ನೇ ಬೇರೆ ಬೇರೆ ಕವಿಗಳು ಹೇಗೆ ಅವರ ಕವಿತೆಗಳಲ್ಲಿ ವಿಭಿನ್ನವಾಗಿ ಅರ್ಥೈಸಿದ್ದಾರೆ ಎಂದು ಹೇಳುತ್ತಾ, ನಾವು ಅದೇ ವಿಷಯವನ್ನು ಆಯ್ಕೆ ಮಾಡಿಕೊಂಡು ಭಿನ್ನವಾಗಿ ಬರೆಯಬಹುದು ಎಂದರು.ಕವಯಿತ್ರಿ ರಂಗಮ್ಮ ಹೊದೇಕಲ್‌ ಮಾತನಾಡಿ ಭಾವಗೀತೆಗಳು ಹುಟ್ಟಿದ ಬಗೆಯನ್ನು ವಿವರಿಸುತ್ತಾ, ನನಗೆ ಈಗಿನಷ್ಟು ಅವಕಾಶ ಮೊದಲು ದಕ್ಕಲಿಲ್ಲ, ಈಗ ಎಲ್ಲವೂ ಅಂಗೈಯಲ್ಲೇ ಸಿಗುತ್ತದೆ. ಕವಿತೆ ಹಾಡಿನ ರೂಪ ಪಡೆದದ್ದು ಖುಷಿಯಾಗಿದೆ ಎಂದರು. ಕಾರ್ಯ ಕ್ರಮದಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ, ಸಂಗೀತ ನಿರ್ದೇಶಕ ಧನ್ ಪಾಲ್ ಸಿಂಗ್ ರಜಪೂತ್, ವರದರಾಜ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಮುಬಾರಕ್‌, ಪ್ರಾಂಶುಪಾಲರಾದ ಪ್ರೊ. ಆರ್ಷಿಯಾಬಾನು, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ವೈ. ಶ್ರೀನಿವಾಸ್‌, ತುಮಕೂರು ವಿವಿ ‌ಪ್ರಾಧ್ಯಾಪಕಿ ಕೆ.ಎಸ್‌ ಗಿರಿಜಾ, ದಾದಾಫೀರ್‌ ಸೇರಿದಂತೆ ದಾರಿಬುತ್ತಿ ಬಳಗದ ಸದಸ್ಯರು ಉಪಸ್ಥಿತರಿದ್ದರು. ಗಾಯಕ ಆರ್ಯನ್ ಹಾಗೂ ಶಿಕ್ಷಕಿ ವಿವೇಕ ನಿರೂಪಿಸಿದರು, ಶಿಕ್ಷಕಿ ಮೇಘನಾ ಸ್ವಾಗತಿಸಿ, ಶೈಲಜಾ ವಂದಿಸಿದರು.