ಮಣಿಪಾಲ: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿವಿ ಒಂದು ತಿಂಗಳ ಕಾಲ ‘ಆಟಿದ ತುಳು ಪರ್ಬ’ ಎಂಬ ಸರಣಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಿದ್ದು, ಶನಿವಾರ ಎಂಐಟಿಯ ಮುಕ್ತ ಸಭಾಂಗಣದಲ್ಲಿ ಸಂಭ್ರಮದ ತೆರೆ ಎಳೆಯಲಾಯಿತು.

ಮಣಿಪಾಲ ಮಾಹೆ 35 ವಿವಿಧ ಘಟಕ ಸಂಸ್ಥೆಗಳು ಸೇರಿದಂತೆ, ಮಂಗಳೂರು ಮಾಹೆ ಕ್ಯಾಂಪಸ್‌, ಕಟೀಲಿನ ಕೆಎಂಸಿ ಸಮೂಹದ ಆಸ್ಪತ್ರೆಯಲ್ಲಿಯೂ ಆಟಿದ ತುಳು ಪರ್ಬ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಾಹೆ ಮತ್ತು ಸ್ಥಳೀಯ ಸಂಸ್ಕೃತಿಗಳ ನಡುವಿನ ನಿಕಟ ‍ಸಂಬಂಧದ ದ್ಯೋತಕವಾಗಿ ಈ ಕಾರ್ಯಕ್ರಮ ಸರಣಿಯನ್ನು ರೂಪಿಸಲಾಗಿತ್ತು.

ಈ ಸರಣಿಯಲ್ಲಿ ಶೈಕ್ಷಣಿಕ ವಿಚಾರಗೋಷ್ಠಿಗಳ ಜೊತೆಗೆ ಸ್ಥಳೀಯ ತುಳು ಸಂಸ್ಕೃತಿ, ನಿಸರ್ಗದ ಜೊತೆಗಿನ ನಿಕಟತೆ, ತುಳುನಾಡಿನ ಪಾಕ ಸಂಪ್ರದಾಯ, ಆರಾಧನ ಪರಂಪರೆ, ಮನೋರಂಜನಾ ಕಾರ್ಯಕ್ರಮಗಳನ್ನೂ ಸಂಯೋಜಿಸಲಾಗಿತ್ತು. ಮಾಹೆಯ ಸಾವಿರಾರು ಉದ್ಯೋಗಿಗಳು, ತಮ್ಮ ಸ್ಥಾನಮಾನ, ಲಿಂಗಭೇದಗಳಿಲ್ಲದೇ ಸಕ್ರಿಯವಾಗಿ ಪಾಲ್ಗೊಂಡಿದ್ದು ವಿವಿಯ ಎಲ್ಲರನ್ನೂ ಒಳಗೊಳ್ಳುವ ಧ್ಯೇಯ ದ್ಯೋತಕವಾಗಿದೆ.ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹಕುಲಾಧಿಪತಿ ಡಾ. ಎಚ್‌. ಎಸ್‌. ಬಲ್ಲಾಳ್‌, ‘ಆಟಿ ತಿಂಗಳನ್ನು ತುಳುವರು ಕಷ್ಟದ ಕಾಲವೆಂದು ಭಾವಿಸುತ್ತಿದ್ದರು. ಈಗ ಅಂಥ ಸ್ಥಿತಿ ಇಲ್ಲ. ನಮ್ಮ ಆರ್ಥಿಕ ಸ್ಥಿತಿ ಬದಲಾಗಿದೆ. ಅಂದು ಮಣಿಪಾಲದಲ್ಲಿ ಉನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಡಾ. ಮಾಧವ ಪೈಗಳು ಲಕ್ಷಾಂತರ ಮಂದಿ ಸ್ಥಳೀಯರಿಗೆ ಉದ್ಯೋಗದಾತರಾದರು. ಸಾಮಾನ್ಯಜನರ ಕಷ್ಟ ದೂರಪಡಿಸುವ ಅವರ ಕನಸು ಇಂದು ನನಸಾಗಿದೆ. ಅದರ ದ್ಯೋತಕವಾಗಿ ಮಾಹೆಯಲ್ಲಿ ಸಂಭ್ರಮದ ಸ್ಥಳೀಯರ ಸಂಸ್ಕೃತಿಯಂತೆ ಆಟಿದ ತುಳು ಪರ್ಬವನ್ನು ಆಚರಿಸಿದ್ದೇವೆ. ಇದು ಮಣಿಪಾಲದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ದುಡಿದು ನೆಮ್ಮದಿಯ ಬದುಕು ಕಂಡಿರುವ ಉದ್ಯೋಗಿಗಳ ಸಂತಸದ ಅಭಿವ್ಯಕ್ತಿಯಾಗಿದೆ ಎಂದರು.ವೇದಿಕೆಯಲ್ಲಿ ಮಾಹೆಯ ಕುಲಪತಿಗಳಾದ ಡಾ. ಶರತ್‌ ಕೆ. ರಾವ್‌, ಕುಲಸಚಿವ ಡಾ. ಗಿರಿಧರ ಕಿಣಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಡಾ. ಪ್ರವೀಣ್‌ ಶೆಟ್ಟಿ ಸ್ವಾಗತಿಸಿದರು. ನಿತೀಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಪ್ರವೀಣ್‌ ಕುಮಾರ್‌ ಅವರು ವಂದಿಸಿದರು.

ಸಭಾಕಾರ್ಯಕ್ರಮದ ಬಳಿಕ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ತಂಡದಿಂದ ‘ಶಿವದೂತೆ ಗುಳಿಗೆ’ ನಾಟಕ ಪ್ರಸ್ತುತಿಗೊಂಡಿತು.ಇಂಡಿಜೀನಸ್‌ ನಾಲೆಡ್ಚ್‌ ಸಿಸ್ಟಮ್‌ ಕೂಡ ಬೇಕು: ಕುಲಪತಿ ಡಾ. ಶರತ್‌ ಕೆ. ರಾವ್‌, ‘ಇವತ್ತು ಇಂಡಿಯನ್‌ ನಾಲೆಡ್ಜ್‌ ಸಿಸ್ಟಮ್‌ ಜೊತೆಗೆ ಇಂಡಿಜೀನಸ್‌ ನಾಲೆಡ್ಚ್‌ ಸಿಸ್ಟಮ್‌ ಕೂಡ ಅಷ್ಟೇ ಮುಖ್ಯ ಎಂಬುದಕ್ಕೆ ಮಾಹೆದ ತುಳು ಪರ್ಬ ಸಾಕ್ಷಿಯಾಗಿದೆ. ನಾವು ಗದ್ದೆಗಿಳಿದು ಭತ್ತದ ನಾಟಿ ಮಾಡಿದೆವು. ಕ್ಯಾಂಪಸ್‌ನೊಳಗೆ ಕಂಬಳದ ಕೋಣಗಳನ್ನು ನಡೆಯಿಸಿದೆವು. ಆಟಿಕಳೆಂಜನನ್ನು ನಮ್ಮ ಘಟಕ ಸಂಸ್ಥೆಗಳಲ್ಲಿ ಬರಮಾಡಿಕೊಂಡೆವು. ತುಳು ಅಡುಗೆಯನ್ನು ಸೇವಿಸಿ ಸಂಭ್ರಮಿಸಿದೆವು. ತುಳು ಭಾಷೆ, ಸಂಸ್ಕೃತಿ, ನಿಸರ್ಗ, ಜೀವನಕ್ರಮ, ಕಲೆ ಇವುಗಳನ್ನು ಎತ್ತಿಹಿಡಿಯುವಂತೆ ಈ ಸರಣಿ ಕಾರ್ಯಕ್ರಮಗಳು ನಡೆದವು ಎಂದು ಸಂತಸ ವ್ಯಕ್ತಪಡಿಸಿದರು.