ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಸರ್ಕಾರ ತುಮಕೂರು ಜಿಲ್ಲೆಯ ಶಿರಾ, ಮಧುಗಿರಿ ಮತ್ತ ಕೊರಟಗೆರೆ ತಾಲೂಕುಗಳ ವ್ಯಾಪ್ತಿಗೆ ಒಳಪಡುವ ಸುಮಾರು 8 ಸಾವಿರ ಎಕರೆ ಭೂಮಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದು, ಇದು ಅತ್ಯಂತ ಜನವಿರೋಧಿ ನೀತಿಯಾಗಿದ್ದು, ಕೂಡಲೇ ಈ ಯೋಜನೆಯಿಂದ ಹಿಂದೆ ಸರಿಯುವಂತೆ ಸಂಯುಕ್ತ ಹೋರಾಟ-ಕರ್ನಾಟಕದ ಸಂಚಾಲಕ ಸಿ. ಯತಿರಾಜು ಆಗ್ರಹಿಸಿದ್ದಾರೆ.ನಗರದ ಪತ್ರಿಕಾಭವನದಲ್ಲಿ ವಿಮಾನ ನಿಲ್ದಾಣ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕೆ, ಟೌನ್‌ಶಿಪ್, ಕಾರಿಡಾರ್ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಂಡು ರೈತರನ್ನು ಬೀದಿಗೆ ತಳ್ಳುವ ಕೆಲಸವನ್ನು ಸರ್ಕಾರಗಳು ಮಾಡುತಿದ್ದು, ಕೂಡಲೇ ವಿಮಾನ ನಿಲ್ದಾಣ ಪ್ರಕ್ರಿಯೆಯಿಂದ ಹಿಂದೆ ಸರಿಯಬೇಕೆಂಬುದು ಪ್ರಸ್ತಾಪಿತ ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಳ್ಳುವ ಮೂರು ತಾಲೂಕುಗಳ 18 ಹಳ್ಳಿ ಗ್ರಾಮಸ್ಥರ ಒತ್ತಾಯವಾಗಿದೆ ಎಂದರು.
ಈ ಭಾಗದಲ್ಲಿ ಹತ್ತಾರು ವರ್ಷಗಳಿಂದ ರೈತರು ಬಗರ್ ಹುಕ್ಕಂ ಸಾಗುವಳಿ ಮಾಡುತ್ತಾ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರೂ ಇತ್ಯರ್ಥ ಮಾಡದ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ, ಶ್ರೀಮಂತರಿಗಾಗಿ ವಿಮಾನ ನಿಲ್ದಾಣ ಮಾಡಲು ಫಲವತ್ತಾ ಭೂಮಿ ನೀಡಲು ತುದಿಗಾಲಲ್ಲಿ ನಿಂತಿದೆ. ಮೊದಲು ಜಿಲ್ಲಾಡಳಿತ ಬಗರ್ ಹುಕ್ಕಂ ಸಾಗುವಳಿದಾರರ ಅರ್ಜಿಗಳನ್ನು ಇತ್ಯರ್ಥ ಪಡಿಸಲಿ ಎಂದು ಸಿ. ಯತಿರಾಜು ಆಗ್ರಹಿಸಿದರು.ಶಿರಾ, ಮಧುಗಿರಿ ಮತ್ತು ಕೊರಟಗೆರೆ ತಾಲೂಕುಗಳ 18 ಹಳ್ಳಿಗಳ ಸುಮಾರು 12 ಸಾವಿರ ರೈತರ ಈಗಾಗಲೇ ನಿರ್ಮಾಣ ಮಾಡಿಕೊಂಡಿರುವ ತೋಟ, ತುಡಿಕೆ, ನೀರಾವರಿ ಬೆಳೆಗಳ ಜೊತೆಗೆ, ಪೂರ್ವಜರ ಸಮಾಧಿಗಳನ್ನು ಯೋಜನೆಯಿಂದ ಕಳೆದು ಕೊಳ್ಳಬೇಕಾಗುತ್ತಿದೆ. ಭೂಮಿಯ ಜೊತೆಗೆ ಪರಿಸರ ಹಾಳಾಗಲಿದೆ. ಪ್ರಾಣಿ, ಪಕ್ಷಿಗಳಿಗೆ ಕಂಟಕವಾಗುವ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡಬೇಕೆಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದು ತಿಳಿಸಿದರು.
ರೈತರ ಸಂಘದ ಕಾರ್ಯದರ್ಶಿ ಜಿ. ಶಂಕರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡು ರೈತರನ್ನು ಒಕ್ಕಲೆಬ್ಬಿಸಲಾಗಿದೆ. ಈಗ ವಿಮಾನ ನಿಲ್ದಾಣದ ಹೆಸರಿನಲ್ಲಿ ಮತ್ತಷ್ಟು ಸಾವಿರ ರೈತರನ್ನು ಬೀದಿಗೆ ತಳ್ಳಲು ಸರ್ಕಾರ ಹೊರಟಿದೆ. ದೇಶದಲ್ಲಿರುವ ವಿವಿಧ ವಿಮಾನ ನಿಲ್ದಾಣಗಳ ವಿಸ್ತೀರ್ಣ ನೋಡಿದರೆ ನಾಲ್ಕು ಸಾವಿರ ಎಕರೆಗಿಂತ ಹೆಚ್ಚು ಇಲ್ಲ. ಆದರೆ ತುಮಕೂರಿನಲ್ಲಿ ಮಾತ್ರ 8 ಸಾವಿರ ಎಕರೆ ವಶಪಡಿಸಿಕೊಳ್ಳಲು ಮುಂದಾಗಿದೆ ಎಂದರು.ಚಿಕ್ಕರಸನಹಳ್ಳಿ ಗ್ರಾಪಂ ರಮೇಶ್ ಮಾತನಾಡಿ, ಈಗಾಗಲೇ ಸರ್ಕಾರ ಕೈಗಾರಿಕೆಗಳ ಹೆಸರಿನಲ್ಲಿ ಸುಮಾರು 16 ಸಾವಿರ ಎಕರೆ ಜಾಗ ವಶಪಡಿಸಿಕೊಂಡು ರೈತರನ್ನು ಬೀದಿಗೆ ತಳ್ಳಿದೆ. ಈಗ ವಿಮಾನ ನಿಲ್ದಾಣದ ಹೆಸರಿನಲ್ಲಿ ಮತ್ತಷ್ಟು ಜನರನ್ನು ಬೀದಿಗೆ ತಳ್ಳಲು ಹೊರಟಿದೆ. ಈಗಾಗಲೇ ಭೂಮಿ ಕಳೆದುಕೊಂಡ ರೈತರು ವಿಧಿಯಿಲ್ಲದೆ ಗಾರೆ ಕೆಲಸ ಮಾಡಿ ಬದುಕುತಿದ್ದಾರೆ. ರೈತರಿಗೆ ಉಪಯೋಗ ಮಾಡಬೇಕೆಂಬ ನಿಮಗೆ ಆಸೆಯಿದ್ದರೆ ಮೊದಲು ನಮ್ಮ ಭಾಗಕ್ಕೆ ನೀರಾವರಿ ಯೋಜನೆ ತನ್ನಿ. ವಿಮಾನ ನಿಲ್ದಾಣ ವಿರೋಧಿಸಿ ಮೂರು ತಾಲೂಕುಗಳ 18 ಹಳ್ಳಿಯ ವ್ಯಾಪ್ತಿಯ ಗ್ರಾ. ಪಂಗಳಲ್ಲಿಯೂ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಕಾರ್ಮಿಕ ಸಂಘಟನೆಯ ಬಿ.ಉಮೇಶ್, ನಿವೃತ್ತ ಪ್ರಾಚಾರ್ಯ ಬಿ. ಮುರುಳಯ್ಯ ಮಾತನಾಡಿದರು.ಸುದ್ದಿಗೋಷ್ಠಿಯಲ್ಲಿ ವಿಮಾನ ನಿಲ್ದಾಣ ಪ್ರಸ್ತಾಪಿತ 18 ಹಳ್ಳಿಗಳ ವಿವಿಧ ಗ್ರಾಮಪಂಚಾಯಿತಿ ಸದಸ್ಯರಾದ ಶ್ರೀಧರ್, ರಮೇಶ್, ಉಮೇಶ್, ಬಿ.ಎಂ. ಕಾಮರಾಜು, ರವೀಶ್, ಸೂರೇನಹಳ್ಳಿ ರಂಗನಾಥ್ ಮತ್ತಿತರರು ಪಾಲ್ಗೊಂಡಿದ್ದರು.