ಸಾರಾಂಶ
ನಮ್ಮ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ದೇವಿಯ ಆರಾಧನೆ ಮಾಡುವುದರಿಂದ ನಮ್ಮ ಪಾಪ ಕರ್ಮಗಳು ದೂರಾಗುತ್ತವೆ ಎನ್ನುವ ನಂಬಿಕೆ ಬಲವಾಗಿದೆ. ಆದ್ದರಿಂದ ದೇವಿಯ ಆರಾಧನೆಗಳು ನಮ್ಮ ಸುತ್ತ ನಡೆಯುತ್ತವೆ ಎಂದು ಶಿಕ್ಷಕಿ ಮೈತ್ರಾದೇವಿ ಹಿರೇಮಠ ಹೇಳಿದರು.
ಲಕ್ಷ್ಮೇಶ್ವರ: ನಮ್ಮ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ದೇವಿಯ ಆರಾಧನೆ ಮಾಡುವುದರಿಂದ ನಮ್ಮ ಪಾಪ ಕರ್ಮಗಳು ದೂರಾಗುತ್ತವೆ ಎನ್ನುವ ನಂಬಿಕೆ ಬಲವಾಗಿದೆ. ಆದ್ದರಿಂದ ದೇವಿಯ ಆರಾಧನೆಗಳು ನಮ್ಮ ಸುತ್ತ ನಡೆಯುತ್ತವೆ ಎಂದು ಶಿಕ್ಷಕಿ ಮೈತ್ರಾದೇವಿ ಹಿರೇಮಠ ಹೇಳಿದರು.
ಗುರುವಾರ ಸಂಜೆ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಪುಲಿಗೆರೆ ಪೌರ್ಣಿಮೆಯ ಕಾರ್ಯಕ್ರಮದ ಅಂಗವಾಗಿ ಬನಶಂಕರಿ ದೇವಿ ಮಹಾತ್ಮೆ ಕುರಿತ ಉಪನ್ಯಾಸ ನೀಡಿ ಅವರು ಮಾತನಾಡಿದರು. ಶಕ್ತಿದೇವಿಯ ಪುರಾಣ ಪ್ರವಚನ ಕೇಳುವುದರಿಂದ ನಮ್ಮಲ್ಲಿನ ಅಂತರ್ ಶಕ್ತಿ ಶುದ್ಧೀಕರಣಗೊಳ್ಳುತ್ತದೆ. ಇದರಿಂದ ನಮ್ಮ ಮನಸ್ಸು ಪ್ರಫುಲ್ಲವಾಗಿ ನಾವು ಮಾಡುವ ಕೆಲಸ ಕಾರ್ಯಗಳಿಗೆ ಶಕ್ತಿ ದೊರೆಯುತ್ತದೆ. ದೇವಿಯ ಮಹಾತ್ಮೆಯನ್ನು ಕೊಂಡಾಡುವ ಹಲವು ಶ್ಲೋಕಗಳನ್ನು ಪಠಿಸುವ ಮೂಲಕ ನಮ್ಮಲ್ಲಿನ ಕ್ಲೇಶಗಳು ದೂರಾಗುತ್ತವೆ ಎನ್ನುವ ನಂಬಿಕೆ ಬಲವಾಗಿದೆ. ದೇವಿ ಪುರಾಣಗಳಲ್ಲಿ ದುಷ್ಟ ಶಕ್ತಿಗಳ ದಮನ ಶಿಷ್ಟ ಶಕ್ತಿಗಳ ರಕ್ಷಣೆ ಎನ್ನುವ ಸಂದೇಶ ಅಡಗಿದೆ. ದುಷ್ಟರನ್ನು ಸಂಹಾರ ಮಾಡುವ ಮೂಲಕ ಜಗತ್ತಿನ ರಕ್ಷಣೆ ಮಾಡುವ ಕಾರ್ಯವನ್ನು ದೇವಿಯ ಮಾಡುತ್ತಾಳೆ ಎನ್ನುವ ಬಲವಾದ ನಂಬಿಕೆ ಮನೆ ಮಾತಾಗಿದೆ ಎಂದು ಹೇಳಿದರು. ಈ ವೇಳೆ ಸೋಮೇಶ್ವರ ಭಕ್ತರ ಸೇವಾ ಸಮಿತಿಯ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಈ ವೇಳೆ ಮಂಗಳಾದೇವಿ ಮಹಾಂತಶೆಟ್ಟರ ಮಾತನಾಡಿದರು. ಸಭೆಯಲ್ಲಿ ಡಾ. ಸುಜಾತಾ ಸಂಗೂರ, ಶುಭಾ ಆರ್. ಕುಲಕರ್ಣಿ, ಮಾಲಾದೇವಿ ದಂದರಗಿ, ಸುಮಾ ಚೋಟಗಲ್ಲ, ಗೀತಾ ಮಾನ್ವಿ ಸೇರಿದಂತೆ ಅನೇಕರು ಇದ್ದರು.